ಖ್ಯಾತ ಮಹಿಳಾ ಕುಸ್ತಿಪಟು ವಿನೇಶ್ ಫೋಗಾಟ್‌ಗೂ ಅಂಟಿದ ಕೊರೋನಾ ಸೋಂಕು..!
ಈ ವರ್ಷದ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಆಯ್ಕೆಯಾದ ವಿನೇಶ್ ಫೋಗಾಟ್ ಅವರಿಗೆ ಕೊರೋನಾ ಸೋಂಕಿರುವುದು ಪರೀಕ್ಷೆ ವೇಳೆ ದೃಢಪಟ್ಟಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ನವದೆಹಲಿ(ಆ.29): ಭಾರತದ ಅಗ್ರಶ್ರೇಯಾಂಕಿತ ಮಹಿಳಾ ಕುಸ್ತಿಪಟು ವಿನೇಶ್ ಫೋಗಾಟ್ ಕೋವಿಡ್ 19 ಸೋಂಕಿಗೆ ತುತ್ತಾಗಿರುವುದಾಗಿ ಶುಕ್ರವಾರ(ಆ.28) ತಿಳಿಸಿದ್ದಾರೆ. ವಿನೇಶ್ ಫೋಗಾಟ್ ಅವರಿಗೆ ಯಾವುದೇ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿಲ್ಲ.
ಏಷ್ಯನ್ ಗೇಮ್ಸ್ ಹಾಗೂ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಜಯಿಸಿರುವ ವಿನೇಶ್ ಸದ್ಯ ಕೋಚ್ ಓಂ ಪ್ರಕಾಶ್ ಮಾರ್ಗದರ್ಶನದಲ್ಲಿ ತವರೂರಾದ ಸೋನೆಪತ್‌ನಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ಅಂದಹಾಗೆ ವಿನೇಶ್ ಫೋಗಾಟ್ ಈ ಬಾರಿಯ ಖೇಲ್ ರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಭಾಗವಹಿಸಲು ಡ್ರೆಸ್ ರಿಹರ್ಸಲ್‌ಗೆ ಬಂದಾಗ ಸೋನೆಪತ್‌ನಲ್ಲಿ ನನ್ನ ಸ್ಯಾಂಪಲ್ ತೆಗೆದುಕೊಂಡು ಹೋಗಲಾಗಿತ್ತು. ಇದೀಗ ಫಲಿತಾಂಶ ಹೊರಬಿದ್ದಿದ್ದು, ನನಗೆ ಕೋವಿಡ್ 19 ಸೋಂಕು ಇರುವುದು ದೃಢಪಟ್ಟಿದೆ ಎಂದು ಪಿಟಿಐ ಸುದ್ದಿಸಂಸ್ಥೆಗೆ ವಿನೇಶ್ ಫೋಗಾಟ್ ತಿಳಿಸಿದ್ದಾರೆ.
ದ್ರೋಣಾಚಾರ‍್ಯ ಪ್ರಶಸ್ತಿ ಸ್ವೀಕರಿಸುವ ಮುನ್ನಾ ಕೊನೆಯುಸಿರೆಳೆದ ಅಥ್ಲೆಟಿಕ್ಸ್ ಕೋಚ್ ಪುರುಷೋತ್ತಮ್ ರೈ
ದೇವರ ದಯೆಯಿಂದ ನಾನು ಆದಷ್ಟು ಬೇಗ ಗುಣಮುಖವಾಗುವ ವಿಶ್ವಾಸವಿದೆ. ಸದ್ಯ ನಾನು ಮನೆಯಲ್ಲೇ ಐಸೋಲೇಷನ್‌ಗೆ ಒಳಗಾಗಿದ್ದೇನೆ. ಆದರೆ ನನಗೆ ಇಲ್ಲಿಯವರೆಗೆ ಸೋಂಕಿನ ಲಕ್ಷಣವೇ ಕಾಣಿಸಿಕೊಂಡಿಲ್ಲ ಎಂದು ಫೋಗಾಟ್ ತಿಳಿಸಿದ್ದಾರೆ.
ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಭಾರತದ ಏಕೈಕ ಮಹಿಳಾ ಕುಸ್ತಿಪಟು ಎನಿಸಿರುವ 26 ವರ್ಷದ ವಿನೇಶ್ ಫೋಗಾಟ್, ಇಂದು ನಡೆಯಲಿರುವ ವರ್ಚುವಲ್ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪ್ರದಾನ ಸಮಾರಂಭದಿಂದ ದೂರ ಉಳಿಯುವುದಾಗಿ ತಿಳಿಸಿದ್ದಾರೆ. ಈ ಬಾರಿ ದೇಶದ ಅತ್ಯುನ್ನತ ಕ್ರೀಡಾಪ್ರಶಸ್ತಿಯಾದ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಐವರು ಕ್ರೀಡಾಪಟುಗಳು ಆಯ್ಕೆಯಾಗಿದ್ದು ಅವರಲ್ಲಿ ವಿನೇಶ್ ಫೋಗಾಟ್ ಕೂಡಾ ಒಬ್ಬರಾಗಿದ್ದಾರೆ.