ಬೆಂಗಳೂರು(ಆ.29): ಪ್ರತಿಷ್ಠಿತ ದ್ರೋಣಾಚಾರ‍್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದ ಕರ್ನಾಟಕದ ಹಿರಿಯ ರಾಷ್ಟ್ರೀಯ ಅಥ್ಲೆಟಿಕ್ಸ್‌ ಕೋಚ್‌ ಪುರುಷೋತ್ತಮ ರೈ (78) ಹೃದಯಾಘಾತದಿಂದ ಶುಕ್ರವಾರ ಸ್ವಗೃಹದಲ್ಲಿ ಮೃತಪಟ್ಟಿದ್ದಾರೆ. 

1980ರಿಂದ 1990ರವರೆಗೂ ಪುರುಷೋತ್ತಮ್‌ ಅಥ್ಲೆಟಿಕ್ಸ್‌ ತರಬೇತುದಾರರಾಗಿ ಕಾರ‍್ಯನಿರ್ವಹಿಸಿದ್ದಾರೆ. 2020ರ ದ್ರೋಣಾಚಾರ‍್ಯ ಪ್ರಶಸ್ತಿಗೆ ಪುರುಷೋತ್ತಮ್‌ ರೈ ಆಯ್ಕೆಯಾಗಿದ್ದರು. ಶನಿವಾರ ಪ್ರಶಸ್ತಿ ಸ್ವೀಕರಿಸಬೇಕಿತ್ತು. ಆದರೆ ಮುನ್ನಾ ದಿನವೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಕರ್ನಾಟಕ ರಾಜ್ಯ ಅಥ್ಲೆಟಿಕ್ಸ್‌ ಸಂಸ್ಥೆ ಸಂತಾಪ ಸೂಚಿಸಿದೆ.

ಇಂದು ಕ್ರೀಡಾ ಪ್ರಶಸ್ತಿ ಪ್ರದಾನ:

ನವದೆಹಲಿ: ರಾಷ್ಟ್ರೀಯ ಕ್ರೀಡಾದಿನದ ಅಂಗವಾಗಿ ವಿವಿಧ ಕ್ರೀಡೆಗಳಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಶನಿವಾರವಾದ ಇಂದು ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. ಇದೇ ಮೊದಲ ಬಾರಿಗೆ 5 ಮಂದಿ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಟೀಂ ಇಂಡಿಯಾ ಕ್ರಿಕೆಟಿಗ ರೋಹಿತ್ ಶರ್ಮಾ, ಟೇಬಲ್ ಟೆನಿಸ್ ಆಟಗಾರ್ತಿ ಮನಿಕಾ ಭಾತ್ರಾ, ಪ್ಯಾರಾ ಒಲಿಂಪಿಯನ್ ಮರಿಯಪ್ಪನ್ ತಂಗವೇಲು, ಕುಸ್ತಿಪಟು ವಿನೇಶ್ ಫೋಗಾಟ್‌ ಹಾಗೂ ಭಾರತ ಹಾಕಿ ತಂಡದ ಆಟಗಾರ್ತಿ ರಾಣಿ ರಾಂಪಾಲ್ ಈ ಬಾರಿ ಅತ್ಯುನ್ನತ ಕ್ರೀಡಾ ಪ್ರಶಸ್ತಿ ಗೌರವಕ್ಕೆ ಭಾಜನರಾಗಿದ್ದಾರೆ.

ರೋಹಿತ್ ಶರ್ಮಾ, ರಾಣಿ ಸೇರಿ ಐವರಿಗೆ ಖೇಲ್ ರತ್ನ ಪ್ರಶಸ್ತಿ ಗೌರವ

ಭಾರತದ ಹಾಕಿ ದಂತಕಥೆ ಮೇಜರ್ ಧ್ಯಾನ್‌ ಚಂದ್ ಅವರ ಜನ್ಮದಿನವನ್ನು ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಆಚರಿಸಲಾಗುತ್ತದೆ. ಸ್ವಾತಂತ್ರಪೂರ್ವದಲ್ಲೇ ದೇಶಕ್ಕೆ ಮೂರು ಒಲಿಂಪಿಕ್ಸ್ ಚಿನ್ನದ ಪದಕ ಗೆಲ್ಲುವಲ್ಲಿ ಹಾಕಿ ಮಾಂತ್ರಿಕ ಧ್ಯಾನ್ ಚಂದ್ ಯಶಸ್ವಿಯಾಗಿದ್ದರು. 1928ರಿಂದ 1948ರ ಅವಧಿಯಲ್ಲಿ ಧ್ಯಾನ್‌ ಚಂದ್ ಸುಮಾರು 400ಕ್ಕೂ ಅಧಿಕ ಗೋಲು ಬಾರಿಸಿದ್ದಾರೆ. ಮೇಜರ್ ಧ್ಯಾನ್‌ ಚಂದ್ ಆಗಸ್ಟ್ 29, 1905ರಲ್ಲಿ ಜನಿಸಿದ್ದರು.

ಕೊರೋನಾ ಹಿನ್ನೆಲೆಯಲ್ಲಿ ಈ ಬಾರಿ ವರ್ಚುವಲ್ ಸಮಾರಂಭ ನಡೆಯಲಿದ್ದು, 65 ಮಂದಿ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ. ಈ ನಡುವೆ ಖೇಲ್ ರತ್ನ ಪ್ರಶಸ್ತಿ ಸ್ವೀಕರಿಸಬೇಕಿದ್ದ ಕುಸ್ತಿಪಟು ವಿನೇಶ್ ಫೋಗಾಟ್‌ಗೆ ಕೊರೋನಾ ಸೋಂಕು ದೃಢಪಟ್ಟಿದೆ.