ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್ ಟೂರ್ನಿ: ಶುಭಾರಂಭ ಮಾಡಿದ ಸಿಂಧು, ಶ್ರೀಕಾಂತ್
* ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತೀಯರು ಶುಭಾರಂಭ
* ಭರ್ಜರಿ ಗೆಲುವು ದಾಖಲಿಸಿದ ಸಿಂಧು, ಶ್ರೀಕಾಂತ್, ಸಾತ್ವಿಕ್‌ರಾಜ್-ಚಿರಾಗ್ ಜೋಡಿ
* ಎರಡನೇ ಸುತ್ತಿನಲ್ಲಿ ಕೀದಂಬಿ ಶ್ರೀಕಾಂತ್‌ಗೆ ಕಠಿಣ ಸವಾಲು
ಒಡೆನ್ಸ್(ಅ.20): ಟೋಕಿಯೋ ಒಲಿಂಪಿಕ್ಸ್‌ನಲ್ಲಿ (Tokyo Olympics) ಕಂಚು ಗೆದ್ದ ಬಳಿಕ ವಿಶ್ರಾಂತಿ ಪಡೆದಿದ್ದ ಹಾಲಿ ವಿಶ್ವ ಚಾಂಪಿಯನ್ ಪಿ.ವಿ.ಸಿಂಧು (PV Sindhu), ಒಂದೂವರೆ ತಿಂಗಳ ಬಳಿಕ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ (Badminton)ಗೆ ವಾಪಸಾಗಿದ್ದು, ಗೆಲುವಿನ ಆರಂಭ ಪಡೆದಿದ್ದಾರೆ.
ಡೆನ್ಮಾರ್ಕ್ ಓಪನ್‌ನ (Denmark Open) ಮಹಿಳಾ ಸಿಂಗಲ್ಸ್ ಮೊದಲ ಸುತ್ತಿನಲ್ಲಿ ಸಿಂಧು, ಟರ್ಕಿಯ ನೆಸ್ಲಿಹನ್ ಯಿಗಿಟ್ ವಿರುದ್ಧ 21-12, 21-10 ನೇರ ಗೇಮ್‌ಗಳಲ್ಲಿ ಜಯಗಳಿಸಿದರು. ಒಲಿಂಪಿಕ್ಸ್ ಬಳಿಕ ನಡೆದಿದ್ದ ಸುದೀರ್‌ಮನ್ ಕಪ್ ಹಾಗೂ ಉಬರ್ ಕಪ್ ಟೂರ್ನಿಗಳಿಗೆ ಸಿಂಧು ಗೈರಾಗಿದ್ದರು. 4ನೇ ಶ್ರೇಯಾಂಕಿತೆ ಪಿ.ವಿ. ಸಿಂಧು 2ನೇ ಸುತ್ತಿನಲ್ಲಿ ಥಾಯ್ಲೆಂಡ್‌ನ ಬುಸಾನನ್ ಒಂಗ್ಬಾಮ್ರುಂಗ್‌ಫಾನ್ ವಿರುದ್ಧ ಆಡಲಿದ್ದಾರೆ.
ಕೆಲ ಕ್ರೀಡಾ ಒಕ್ಕೂಟಗಳು ಅಥ್ಲೀಟ್‌ಗಳನ್ನು ಬೆಳೆಯಲು ಬಿಡುತ್ತಿಲ್ಲ : ವಾಸ್ತವ ಬಿಚ್ಚಿಟ್ಟ ಕಿರಣ್ ರಿಜಿಜು
ಇದೇ ವೇಳೆ ಪುರುಷರ ಸಿಂಗಲ್ಸ್‌ನಲ್ಲಿ ಕಿದಂಬಿ ಶ್ರೀಕಾಂತ್ (Kidambi Srikanth), ಸಮೀರ್ ವರ್ಮಾ, ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್-ಚಿರಾಗ್ 2ನೇ ಸುತ್ತು ಪ್ರವೇಶಿಸಿದರು.
2017ರಲ್ಲಿ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ಕಿದಂಬಿ ಶ್ರೀಕಾಂತ್ ತಮ್ಮ ದೇಶದವರೇ ಆದ ಬಿ ಸಾಯಿ ಪ್ರಣೀತ್ ವಿರುದ್ದ 21-14, 21-11 ನೇರ ಗೇಮ್‌ಗಳಲ್ಲಿ ಗೆಲುವು ಸಾಧಿಸುವ ಮೂಲಕ ಎರಡನೇ ಸುತ್ತಿಗೆ ಲಗ್ಗೆಯಿಟ್ಟರು. ಕೇವಲ 30 ನಿಮಿಷಗಳ ಕಾಲ ನಡೆದ ಕಾದಾಟದಲ್ಲಿ ಶ್ರೀಕಾಂತ್ ಸಂಪೂರ್ಣ ಪ್ರಾಬಲ್ಯ ಮೆರೆದರು. ಇನ್ನು ವಿಶ್ವದ 14ನೇ ಶ್ರೇಯಾಂಕಿತ ಶ್ರೀಕಾಂತ್‌ಗೆ ಎರಡನೇ ಸುತ್ತಿನಲ್ಲಿ ಅಗ್ನಿ ಪರೀಕ್ಷೆ ಎದುರಾಗಲಿದ್ದು, ವಿಶ್ವದ ನಂ.1 ಶ್ರೇಯಾಂಕಿತ ಜಪಾನಿನ ಕೆಂಟೊ ಮೊಮೊಟ ಅವರನ್ನು ಎದುರಿಸಲಿದ್ದಾರೆ.
ಇನ್ನು 28ನೇ ಶ್ರೇಯಾಂಕಿತ ಸಮೀರ್ ವರ್ಮಾ (Sameer Verma) ಥಾಯ್ಲೆಂಡ್‌ನ ಕುನ್ಲಾವತ್ ವಿಟಿಸರನ್ ಎದುರು 21-17, 21-14 ನೇರ ಗೇಮ್‌ಗಳಲ್ಲಿ ಗೆಲುವು ಸಾಧಿಸಿ ಎರಡನೇ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ. ಇನ್ನು ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌ರಾಜ್ ರಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಜೋಡಿ ಇಂಗ್ಲೆಂಡ್ ವಿರುದ್ದ ಭರ್ಜರಿ ಗೆಲುವು ಸಾಧಿಸುವ ಮೂಲಕ ಶುಭಾರಂಭ ಮಾಡಿದೆ.
ರಾಷ್ಟ್ರೀಯ ಕಿರಿಯರ ಈಜು ಸ್ಪರ್ಧೆ: ಮೊದಲ ದಿನ 4 ರಾಷ್ಟ್ರೀಯ ದಾಖಲೆ
ಬೆಂಗಳೂರು: ಬುಧವಾರದಿಂದ ಆರಂಭಗೊಂಡ 37ನೇ ಸಬ್-ಜೂನಿಯರ್ ಹಾಗೂ 47ನೇ ಜೂನಿಯರ್ ರಾಷ್ಟ್ರೀಯ ಈಜು ಚಾಂಪಿಯನ್‌ಶಿಪ್‌ನಲ್ಲಿ ಮೊದಲ ದಿನವೇ 4 ರಾಷ್ಟ್ರೀಯ ದಾಖಲೆಗಳು ನಿರ್ಮಾಣಗೊಂಡವು. ಆತಿಥೇಯ ಕರ್ನಾಟಕ ಪದಕ ಬೇಟೆ ಆರಂಭಿಸಿತು. ರಾಜ್ಯದ ಸಂಭವ್ ಆರ್. ಬಾಲಕರ 200 ಮೀ. ಫ್ರೀ ಸ್ಟೈಲ್ ಗುಂಪು 1 ವಿಭಾಗದಲ್ಲಿ 1 ನಿಮಿಷ 53.41 ಸೆಕೆಂಡ್‌ಗಳಲ್ಲಿ ಗುರಿ ತಲುಪಿ 2018ರಲ್ಲಿ ಶ್ರೀಹರಿ ನಟರಾಜ್(1 ನಿಮಿಷ 53.54 ಸೆಕೆಂಡ್) ಬರೆದಿದ್ದ ದಾಖಲೆಯನ್ನು ಮುರಿದರು. ಇದೇ ವಿಭಾಗದಲ್ಲಿ ರಾಜ್ಯದ ಅನೀಶ್ ಗೌಡ ಬೆಳ್ಳಿ ಜಯಿಸಿದರು.
ಅಕ್ಟೋಬರ್ 26ರಿಂದ ಬೆಂಗಳೂರಲ್ಲಿ ರಾಷ್ಟ್ರೀಯ ಹಿರಿಯರ ಈಜು
ಬಾಲಕಿಯರ 200 ಮೀ. ಫ್ರೀ ಸ್ಟೈಲ್ ಗುಂಪು 3 ವಿಭಾಗದಲ್ಲಿ ಕರ್ನಾಟಕದ ಧಿನಿಧಿ ದೇಸಿಂಘು 11 ವರ್ಷದ ರಾಷ್ಟ್ರೀಯ ದಾಖಲೆಯನ್ನು ಮುರಿದರು. ಧಿನಿಧಿ 2 ನಿಮಿಷ 14.94 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು. ಬಾಲಕಿಯರ 200 ಮೀ. ಫ್ರೀ ಸ್ಟೈಲ್ ಗುಂಪು 2ರ ವಿಭಾಗದಲ್ಲಿ ರಾಜ್ಯದ ಹಾಶಿಕಾ ಹಾಗೂ ಶಿರಿನ್ ಕ್ರಮವಾಗಿ ಚಿನ್ನ ಹಾಗೂ ಬೆಳ್ಳಿ ಗೆದ್ದರು. ಮೊದಲ ದಿನ ಕರ್ನಾಟಕ 10ಕ್ಕೂ ಹೆಚ್ಚು ಪದಕ ಜಯಿಸಿತು.