ಬ್ಯಾಂಕಾಕ್(ಜ.13)‌: ಥಾಯ್ಲೆಂಡ್‌ ಓಪನ್‌ನಲ್ಲಿ ಆಡಲು ಬ್ಯಾಂಕಾಕ್‌ಗೆ ತೆರಳಿರುವ ಭಾರತದ ತಾರಾ ಶಟ್ಲರ್‌ ಕಿದಂಬಿ ಶ್ರೀಕಾಂತ್‌ ಅಲ್ಲಿನ ಸ್ಥಳೀಯ ಆರೋಗ್ಯ ಇಲಾಖೆ ಕೋವಿಡ್‌ ಪರೀಕ್ಷೆಗಳನ್ನು ನಡೆಸುತ್ತಿರುವ ರೀತಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಕೊರೋನಾ ಪರೀಕ್ಷೆಗಾಗಿ ಸ್ವ್ಯಾಬ್‌ ಸಂಗ್ರಹಿಸುವ ವೇಳೆ ಆರೋಗ್ಯ ಸಿಬ್ಬಂದಿ ಮೂಗಿನೊಳಗೆ ಗಾಯ ಮಾಡಿದ್ದು ರಕ್ತ ಸುರಿಯುತ್ತಿರುವ ಫೋಟೋವನ್ನು ಶ್ರೀಕಾಂತ್‌ ಟ್ವೀಟ್‌ ಮಾಡಿದ್ದಾರೆ.  ‘ನಾವು ಟೂರ್ನಿಯಲ್ಲಿ ಆಡಲು ಬಂದಿದ್ದೇವೆ. ರಕ್ತ ಸುರಿಸಲು ಅಲ್ಲ’ ಎಂದು ಬರೆದು ಕಿಡಿ ಕಾರಿದ್ದಾರೆ. ‘ಥಾಯ್ಲೆಂಡ್‌ಗೆ ತೆರಳಿದ ಬಳಿಕ 4 ಬಾರಿ ಕೋವಿಡ್‌ ಪರೀಕ್ಷೆಗೆ ಒಳಗಾಗಿದ್ದೇನೆ. ಪ್ರತಿ ಬಾರಿಯೂ ಇದೇ ರೀತಿ ಅನುಭವವಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಸೈನಾ, ಪ್ರಣಯ್‌ ಕೋವಿಡ್‌ ಪರೀಕ್ಷಾ ವರದಿ ಗೊಂದಲ!

ಈ ಮೊದಲು ಥಾಯ್ಲೆಂಡ್ ಓಪನ್‌ ಬ್ಯಾಡ್ಮಿಂಟನ್ ಟೂರ್ನಿ ಆರಂಭಕ್ಕೂ ಮೊದಲು ನಡೆಸಿದ ಕೊರೋನಾ ಟೆಸ್ಟ್‌ನಲ್ಲಿ ಭಾರತದ ತಾರಾ ಬ್ಯಾಡ್ಮಿಂಟನ್ ಪಟುಗಳಾದ ಸೈನಾ ನೆಹ್ವಾಲ್ ಹಾಗೂ ಎಚ್. ಎಸ್‌. ಪ್ರಣಯ್ ವರದಿ ಪಾಸಿಟಿವ್ ಬಂದಿತ್ತು. ಇದರ ಬಗ್ಗೆ ಅನುಮಾನ ವ್ಯಕ್ತವಾದ ಬೆನ್ನಲ್ಲೇ ಮತ್ತೊಮ್ಮೆ ಕೋವಿಡ್ ಟೆಸ್ಟ್ ನಡೆಸಿದಾಗ ಈ ಇಬ್ಬರ ರಿಪೋರ್ಟ್ ನೆಗೆಟಿವ್ ಬಂದಿದ್ದು, ಇಬ್ಬರಿಗೂ ಟೂರ್ನಿಯಲ್ಲಿ ಪಾಲ್ಗೊಳ್ಳಲು ಆಯೋಜಕರು ಅವಕಾಶ ನೀಡಿದ್ದಾರೆ.