Asianet Suvarna News Asianet Suvarna News

Syed Modi International: ಸಿಂಧುಗೆ ಒಲಿದ ಸಯ್ಯದ್‌ ಮೋದಿ ಬ್ಯಾಡ್ಮಿಂಟನ್‌ ಕಿರೀಟ

* ಸೆಯ್ಯದ್‌ ಮೋದಿ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಸಿಂಧು ಚಾಂಪಿಯನ್

*  ಭಾರತದವರೇ ಆದ ಮಾಳವಿಕ ಬನ್ಸೋದ್‌ ವಿರುದ್ಧ ಸಿಂಧು ಜಯಭೇರಿ

* 4 ವರ್ಷಗಳ ಬಳಿಕ ಮತ್ತೆ ಚಾಂಪಿಯನ್‌ ಆದ ಸಿಂಧು

Indian Ace Badminton Star PV Sindhu Clinch Syed Modi International title kvn
Author
Lucknow, First Published Jan 24, 2022, 10:24 AM IST

ಲಖನೌ(ಜ.10): 2 ಬಾರಿ ಒಲಿಂಪಿಕ್ಸ್‌ ಪದಕ ವಿಜೇತ, ಭಾರತದ ತಾರಾ ಶಟ್ಲರ್‌ ಪಿ.ವಿ.ಸಿಂಧು (PV Sindhu) ಸೆಯ್ಯದ್‌ ಮೋದಿ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ (Syed Modi International) ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ. ಭಾನುವಾರ ನಡೆದ ಮಹಿಳಾ ಸಿಂಗಲ್ಸ್‌ ಫೈನಲ್‌ ಪಂದ್ಯದಲ್ಲಿ ಸಿಂಧು, ಭಾರತದವರೇ ಆದ ಮಾಳವಿಕ ಬನ್ಸೋದ್‌ ವಿರುದ್ಧ 21​-13, 21-​16 ನೇರ ಗೇಮ್‌ಗಳಲ್ಲಿ ಗೆಲುವು ಸಾಧಿಸಿದರು. 26 ವರ್ಷದ ಸಿಂಧು ಕೇವಲ 35 ನಿಮಿಷಗಳಲ್ಲಿ ಪಂದ್ಯ ಗೆದ್ದರು. 

2017ರಲ್ಲಿ ಮೊದಲ ಬಾರಿ ಸೆಯ್ಯದ್‌ ಮೋದಿ ಬ್ಯಾಡ್ಮಿಂಟನ್‌ ಪ್ರಶಸ್ತಿ ಗೆದ್ದಿದ್ದ ಸಿಂಧು, 5 ವರ್ಷಗಳ ಬಳಿಕ 2ನೇ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಇದು 2019ರ ವಿಶ್ವ ಚಾಂಪಿಯನ್‌ಶಿಪ್‌ ಪ್ರಶಸ್ತಿ ಗೆದ್ದ ಬಳಿಕ ಸಿಂಧುಗೆ ಒಲಿದ ಮೊದಲ ಪ್ರಶಸ್ತಿ. ಇನ್ನು, ಮಿಶ್ರ ಡಬಲ್ಸ್‌ನಲ್ಲಿ ಭಾರತದ ಇಶಾನ್‌ ಭಟ್ನಗರ ಹಾಗೂ ತನಿಖಾ ಕ್ರಾಸ್ಟೊ ಜೋಡಿ ಚಾಂಪಿಯನ್‌ ಆಯಿತು. ಈ ಜೋಡಿ ಭಾರತದವರೇ ಆದ ಹೇಮಾ ನಾಗೇಂದ್ರ-ಸ್ರಿವೇಧ್ಯ ಗುರುಜದ ವಿರುದ್ಧ 21-16, 21-12 ಗೇಮ್‌ಗಳಲ್ಲಿ ಜಯಭೇರಿ ಬಾರಿಸಿತು. ಏಕಪಕ್ಷೀಯವಾಗಿ ನಡೆದ ಫೈನಲ್ ಪಂದ್ಯವು ಕೇವಲ 29 ನಿಮಿಷಗಳಲ್ಲಿ ಕೊನೆಯಾಯಿತು.

ಆದರೆ ಪುರುಷರ ಡಬಲ್ಸ್‌ ಹಾಗೂ ಮಹಿಳಾ ಡಬಲ್ಸ್‌ನಲ್ಲಿ ಭಾರತ ಪ್ರಶಸ್ತಿ ವಂಚಿತವಾಯಿತು. ಪುರುಷರ ವಿಭಾಗದಲ್ಲಿ ಮಲೇಷ್ಯಾದ ಮಾನ್‌ ವೇ ಚೊಂಗ್‌-ಕೈ ವುನ್‌ ಟೀ ಜೋಡಿ ಭಾರತದ ಕೃಷ್ಣಪ್ರಸಾದ್‌ ಹಾಗೂ ವಿಷ್ಣುವರ್ಧನ್‌ ಗೌಡ ಜೋಡಿ 18-21, 15-21 ಗೇಮ್‌ಗಳಲ್ಲಿ ಸೋಲನುಭವಿಸಿತು. ಮಹಿಳಾ ಡಬಲ್ಸ್‌ನಲ್ಲಿ ತ್ರೀಸಾ ಜೊಲ್ಲಿ-ಗಾಯತ್ರಿ ಗೋಪಿಚಂದ್‌ ಪುಲ್ಲೆಲಾ ಜೋಡಿ ಮಲೇಷ್ಯಾದ ಅನ್ನಾ ಚಿಂಗ್‌-ತೋ ಮೆಯ್‌ ಕ್ಷಿಂಗ್‌ ಜೋಡಿ ವಿರುದ್ಧ ಸೋಲುಂಡಿತು.

ಕೋವಿಡ್‌: ಪುರುಷ ಸಿಂಗಲ್ಸ್‌ ಪಂದ್ಯ ರದ್ದು

ಸ್ಪರ್ಧಿಯೊಬ್ಬರಿಗೆ ಕೋವಿಡ್‌ ದೃಢಪಟ್ಟ ಕಾರಣ ಭಾನುವಾರ ನಡೆಯಬೇಕಿದ್ದ ಪುರುಷರ ಸಿಂಗಲ್ಸ್‌ನ ಫೈನಲ್‌ ಪಂದ್ಯವನ್ನು ರದ್ದುಗೊಳಿಸಲಾಯಿತು. ಫ್ರಾನ್ಸ್‌ನ ಅರ್ನಾಡ್‌ ಮರ್ಕೆಲ್‌ ಮತ್ತು ಲ್ಯೂಕಾಸ್‌ ಕ್ಲೇರ್ಬೌಟ್‌ ನಡುವಿನ ಫೈನಲ್‌ ಹಣಾಹಣಿಗೆ ವೇದಿಕೆ ಸಜ್ಜಾಗಿತ್ತು. ಆದರೆ, ಇಬ್ಬರಲ್ಲಿ ಒಬ್ಬರಿಗೆ ಸೋಂಕಿರುವುದು ಖಚಿತವಾಗುತ್ತಿದ್ದಂತೆಯೇ ಪಂದ್ಯವನ್ನು ರದ್ದುಗೊಳಿಸಲಾಯಿತು. ಅಲ್ಲದೇ ಸೋಂಕಿತನ ಜತೆ ನಿಕಟ ಸಂಪರ್ಕದಲ್ಲಿದ್ದ ಕಾರಣ ಮತ್ತೊಬ್ಬ ಆಟಗಾರ ಸಹ ಪಂದ್ಯದಿಂದ ಹಿಂದೆ ಸರಿದರು. ವಿಜೇತರು, ವಿಶ್ವ ರ‍್ಯಾಂಕಿಂಗ್‌ನ ಅಂಕಗಳು ಹಾಗೂ ಪ್ರಶಸ್ತಿ ಮೊತ್ತವನ್ನು ಶೀಘ್ರ ಪ್ರಕಟಿಸಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.

ಡಿಸೆಂಬರ್ 26ರ ಪರೇಡ್‌ಗೆ ಹರ್ಯಾಣ ನೀರಜ್‌ ಟ್ಯಾಬ್ಲೋ

ನವದೆಹಲಿ: ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ (Republic Day) ಪರೇಡ್‌ನಲ್ಲಿ ಹರ್ಯಾಣ ಸರ್ಕಾರ ಈ ಬಾರಿ ಟೋಕಿಯೋ ಒಲಿಂಪಿಕ್ಸ್‌ (Tokyo Olympics) ಚಿನ್ನ ವಿಜೇತ ಜಾವೆಲಿನ್‌ ಎಸೆತಗಾರ ನೀರಜ್‌ ಚೋಪ್ರಾ (Neeraj Chopra) ಅವರ ಸ್ತಬ್ಧಚಿತ್ರ ಪ್ರದರ್ಶಿಸಲಿದೆ. ಈ ಬಗ್ಗೆ ಶನಿವಾರ ಸರ್ಕಾರ ಮಾಹಿತಿ ನೀಡಿದ್ದು, ‘ಈ ಬಾರಿ ಗಣರಾಜ್ಯೋತ್ಸವದಲ್ಲಿ ಒಟ್ಟು 10 ಒಲಿಂಪಿಯನ್‌ಗಳು ಹರ್ಯಾಣ ಸರ್ಕಾರದ ಟ್ಯಾಬ್ಲೋದ ಭಾಗವಾಗಲಿದ್ದಾರೆ. ಈ ಪೈಕಿ ನೀರಜ್‌ ಅವರ ಸ್ತಬ್ಧಚಿತ್ರ ಪ್ರಮುಖ ಆಕರ್ಷಣೆಯಾಗಿರಲಿದೆ’ ಎಂದು ತಿಳಿಸಿದೆ. ನೀರಜ್‌ ಹರ್ಯಾಣದ ಪಾಣಿಪತ್‌ ಜಿಲ್ಲೆಯ ಖಾಂಡ್ರ ಎಂಬ ಗ್ರಾಮದಲ್ಲಿ ಜನಿಸಿದ್ದರು.

Australian Open: ಹಾಲಿ ಚಾಂಪಿಯನ್‌ ನವೋಮಿ ಒಸಾಕ ಔಟ್‌..!

ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ನೀರಜ್ ಚೋಪ್ರಾ 87.58 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ಚಿನ್ನದ ಪದಕ ಜಯಿಸಿದ್ದರು. ಈ ಮೂಲಕ ಅಥ್ಲೆಟಿಕ್ಸ್ ವಿಭಾಗದಲ್ಲಿ ದೇಶಕ್ಕೆ ಚಿನ್ನದ ಪದಕ ಗೆದ್ದ ಮೊದಲ ಸಾಧಕ ಎನ್ನುವ ಕೀರ್ತಿಗೆ ನೀರಜ್ ಚೋಪ್ರಾ ಭಾಜನರಾಗಿದ್ದರು. ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾರತವು ಒಂದು ಚಿನ್ನ, ಎರಡು ಬೆಳ್ಳಿ ಹಾಗೂ 4 ಕಂಚು ಸಹಿತ ಒಟ್ಟು 7 ಪದಕಗಳನ್ನು ಜಯಿಸಿತ್ತು.

Follow Us:
Download App:
  • android
  • ios