ನವದೆಹಲಿ(ಏ.14): ಏಷ್ಯನ್‌ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ಗೆ ಭಾರತ ಆತಿಥ್ಯ ವಹಿಸಲಿದೆ. ಬಾಕ್ಸಿಂಗ್‌ ಟೂರ್ನಿ ಇದೇ ವರ್ಷದ ನವೆಂಬರ್‌-ಡಿಸೆಂಬರ್‌ ತಿಂಗಳಲ್ಲಿ ನಡೆಯಲಿದೆ ಎಂದು ಭಾರತ ಬಾಕ್ಸಿಂಗ್‌ ಫೆಡರೇಷನ್‌ (ಬಿಎಫ್‌ಐ) ಸೋಮವಾರ ತಿಳಿಸಿದೆ. 

ಥಾಯ್ಲೆಂಡ್‌ನಲ್ಲಿ ಭಾರತದ ಕೀರ್ತಿ ಹೆಚ್ಚಿಸಿದ ಅರುಣ್ ಸಾಗರ್ ಪುತ್ರ ಸೂರ್ಯ

ಫೆಬ್ರವರಿಯಲ್ಲಿ ಏಷ್ಯನ್ ಬಾಕ್ಸಿಂಗ್ ಒಕ್ಕೂಟವು ನಡೆಸಿದ ಸಮಾವೇಶದಲ್ಲಿ ನಾವು ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ಗೆ ಆತಿಥ್ಯದ ಹಕ್ಕು ಪಡೆದುಕೊಂಡೆವು. ನವೆಂಬರ್-ಡಿಸೆಂಬರ್ ತಿಂಗಳಿನಲ್ಲಿ ಟೂರ್ನಿ ನಡೆಯಲಿದ್ದು, ಯಾವ ನಗರದಲ್ಲಿ ಆಯೋಜಿಸಬೇಕು ಎನ್ನುವುದನ್ನು ದೇಶದ ಪರಿಸ್ಥಿತಿ ಸುಧಾರಿಸಿದ ಬಳಿಕ ತೀರ್ಮಾನಿಸಲಾಗುವುದು. ಸದ್ಯದ ಪರಿಸ್ಥಿತಿ ಸರಿಯಾಗಿಯಾಗಿಲ್ಲ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಜೂನ್ ಅಂತ್ಯದ ವೇಳೆಗೆ ಪರಿಸ್ಥಿತಿ ನಿಯಂತ್ರಣಕ್ಕೆ ಬರಬಹುದು. ಆ ಬಳಿಕ ಮೂರು-ನಾಲ್ಕು ತಿಂಗಳು ಸಿಗಲಿದ್ದು, ಈ ವೇಳೆ ಟೂರ್ನಿಗೆ ಸಿದ್ಧತೆ ನಡೆಸಬಹುದು ಎಂದು ಬಿಎಫ್‌ಐ ಕಾರ‍್ಯನಿರ್ವಾಹಕ ನಿರ್ದೇಶಕ ಆರ್‌.ಕೆ. ಸಚೇಟಿ ತಿಳಿಸಿದ್ದಾರೆ.

ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ 9 ಬಾಕ್ಸರ್‌ಗಳು..!

1980ರಲ್ಲಿ ಭಾರತ ಪುರಷರ ಏಷ್ಯನ್‌ ಕೂಟ ಆಯೋಜಿಸಿತ್ತು, 2003ರಲ್ಲಿ ಮಹಿಳಾ ಏಷ್ಯನ್‌ ಟೂರ್ನಿಗೆ ಆತಿಥ್ಯ ನೀಡಿತ್ತು. ಇದೀಗ ಪುರುಷ ಹಾಗೂ ಮಹಿಳಾ ಎರಡೂ ವಿಭಾಗದ ಟೂರ್ನಿಯನ್ನು ಆಯೋಜಿಸಲು ಉದ್ದೇಶಿಸಿದೆ. ಕಳೆದ ವರ್ಷವಷ್ಟೇ ಪುರುಷ ಮತ್ತು ಮಹಿಳೆಯರ ವಿಭಾಗಗಳು ಒಟ್ಟಿಗೆ ನಡೆಸಲಾಗಿತ್ತು ಎಂದು ಬಿಎಫ್‌ಐ ಕಾರ‍್ಯನಿರ್ವಾಹಕ ನಿರ್ದೇಶಕ ಆರ್‌.ಕೆ. ಸಚೇಟಿ ಹೇಳಿದ್ದಾರೆ.

ಕೊರೋನಾ ವೈರಸ್‌ನಿಂದಾಗಿ ಜಗತ್ತಿನಾದ್ಯಂತ ಒಂದು ಲಕ್ಷಕ್ಕೂ ಅಧಿಕ ಮಂದಿ ಕೊನೆಯುಸಿರೆಳೆದಿದ್ದಾರೆ. ಭಾರತದಲ್ಲೂ ಕೊರೋನಾ ಸೋಂಕಿತರ ಸಂಖ್ಯೆ 10 ಸಾವಿರದ ಗಡಿದಾಟಿದ್ದು, ಮುನ್ನೂರಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ. ಕೊರೋನಾದಿಂದಾಗಿ ಜಾಗತಿಕ ಕ್ರೀಡೆಗಳು ಸ್ತಬ್ಧವಾಗಿವೆ. ಬಹುನಿರೀಕ್ಷಿತ ಟೋಕಿಯೋ ಒಲಿಂಪಿಕ್ಸ್ ಹಾಗೂ ಯುರೋಪಿಯನ್ ಫುಟ್ಬಾಲ್ ಚಾಂಪಿಯನ್‌ಶಿಪ್ ಪಂದ್ಯಾವಳಿಗಳು 2021ಕ್ಕೆ ಮುಂದೂಡಲ್ಪಟ್ಟಿವೆ. ಇನ್ನು ಭಾರತದ ಚುಟುಕು ಕ್ರಿಕೆಟ್ ಹಬ್ಬ ಐಪಿಎಲ್ ಟೂರ್ನಿ ಕೂಡಾ ಈ ವರ್ಷ ನಡೆಯುವುದು ಅನುಮಾನ ಎನಿಸಿದೆ.
"