R Praggnanandhaa ಚೆಸ್ ಆಡುವುದನ್ನು ಎಂಜಾಯ್ ಮಾಡುತ್ತೇನೆಂದ ಗ್ರಾಂಡ್‌ಮಾಸ್ಟರ್ ಆರ್ ಪ್ರಜ್ಞಾನಂದ
* ವಿಶ್ವದ ನಂ.1 ಚೆಸ್ ಆಟಗಾರ ಮ್ಯಾಗ್ನಸ್ ಕಾಲ್‌ರ್‍ಸೆನ್ ಅವರಿಗೆ ಶಾಕ್ ನೀಡಿದ ಪ್ರಜ್ಞಾನಂದ
* ಏರ್‌ಥಿಂಗ್ಸ್ ಮಾಸ್ಟರ್ಸ್ ಆನ್‌ಲೈನ್ ರ‍್ಯಾಪಿಡ್ ಚೆಸ್ ಟೂರ್ನಿಯಲ್ಲಿ ಪ್ರಜ್ಞಾನಂದ ಸಾಧನೆ
* ಚೆಸ್ ಆಡುವುದನ್ನು ಎಂಜಾಯ್ ಮಾಡುತ್ತೇನೆಂದ ಪ್ರಜ್ಞಾನಂದ
ಚೆನ್ನೈ(ಫೆ.23): ಭಾರತದ ಯುವ ಗ್ರಾಂಡ್‌ಮಾಸ್ಟರ್ ಆರ್. ಪ್ರಜ್ಞಾನಂದ (R Praggnanandhaa) ಏರ್‌ಥಿಂಗ್ಸ್ ಮಾಸ್ಟರ್ಸ್ ಆನ್‌ಲೈನ್ ರ‍್ಯಾಪಿಡ್ ಚೆಸ್ ಟೂರ್ನಿಯಲ್ಲಿ ವಿಶ್ವದ ನಂ.1 ಚೆಸ್ ಆಟಗಾರ ನಾರ್ವೆಯ ಮ್ಯಾಗ್ನಸ್ ಕಾಲ್‌ರ್‍ಸೆನ್ (Magnus Carlsen) ಅವರಿಗೆ ಶಾಕ್ ನೀಡುವಲ್ಲಿ ಯಶಸ್ವಿಯಾಗಿದ್ದರು. ಏರ್‌ಥಿಂಗ್ಸ್ ಮಾಸ್ಟರ್ಸ್ ಆನ್‌ಲೈನ್ ರ‍್ಯಾಪಿಡ್ ಚೆಸ್‌ನ 8ನೇ ಸುತ್ತಿನ ಪಂದ್ಯದಲ್ಲಿ ಕಾಲ್‌ರ್‍ಸೆನ್ ವಿರುದ್ದ ಭರ್ಜರಿ ಜಯ ಸಾಧಿಸಿ ಬೀಗಿದ್ದರು. ಈ ಮೂಲಕ ನಾರ್ವೆಯ ದಿಗ್ಗಜ ಆಟಗಾರ ಮ್ಯಾಗ್ನಸ್ ಕಾಲ್‌ರ್‍ಸೆನ್ ವಿರುದ್ಧ ಗೆದ್ದ ಭಾರತದ 3ನೇ ಆಟಗಾರ ಎಂಬ ಖ್ಯಾತಿಗೂ ಪಾತ್ರರಾಗಿದ್ದರು.
16 ವರ್ಷದ ಆರ್. ಪ್ರಜ್ಞಾನಂದ ಅವರ ಈ ಸಾಧನೆಯನ್ನು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ (Sachin Tendulkar), ಅಖಿಲ ಭಾರತ ಚೆಸ್ ಫೆಡರೇಷನ್ ಅಧ್ಯಕ್ಷ ಸಂಜಯ್ ಕಪೂರ್ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಗುಣಗಾನ ಮಾಡಿದ್ದಾರೆ. ಆರ್. ಪ್ರಜ್ಞಾನಂದ ಅವರಿಗಿಂತ ಮೊದಲು ಐದು ಬಾರಿ ಚೆಸ್ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ (Viswanathan Anand) ಹಾಗೂ ಕಿರಿಯರ ವಿಶ್ವ ಚಾಂಪಿಯನ್ ಪಿ.ಹರಿಕೃಷ್ಣ ಅವರು ಮ್ಯಾಗ್ನಸ್ ಕಾಲ್‌ರ್‍ಸೆನ್‌ರನ್ನು ಸೋಲಿಸಿದ್ದರು. ಕಪ್ಪು ಕಾಯಿನ್‌ಗಳೊಂದಿಗೆ ಆಟ ಆರಂಭಿಸಿದ ಆರ್. ಪ್ರಜ್ಞಾನಂದ ಕೇವಲ 39 ನಡೆಯಲ್ಲಿಯೇ ವಿಶ್ವದ ನಂ.1 ಆಟಗಾರರನ್ನು ಸೋಲಿಸಿ ತಬ್ಬಿಬ್ಬುಗೊಳಿಸಿದರು. ಈ ಮೂಲಕ ಸತತ ಮೂರನೇ ನೇರ ಗೆಲುವು ದಾಖಲಿಸಿ ಮುನ್ನುಗ್ಗುತ್ತಿದ್ದ ನಾರ್ವೆ ಚೆಸ್ ದಿಗ್ಗಜನ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕುವಲ್ಲಿ ಭಾರತದ ಯುವ ಚೆಸ್ ಪಟು ಯಶಸ್ವಿಯಾಗಿದ್ದಾರೆ.
ವಿಶ್ವದ ನಂ.1 ಚೆಸ್ ಪಟು ಮ್ಯಾಗ್ನಸ್ ಕಾಲ್‌ರ್‍ಸೆನ್ ಅವರನ್ನು ಸೋಲಿಸಿದ್ದು ನನಗೆ ಖುಷಿ ಎನಿಸುತ್ತಿದೆ. ಇದು ಟೂರ್ನಿಯ ಮುಂಬರುವ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಲು ಸಾಕಷ್ಟು ಆತ್ಮವಿಶ್ವಾಸವನ್ನು ತಂದುಕೊಟ್ಟಿದೆ. ಇದರ ಜತೆಗೆ ಭವಿಷ್ಯದ ಟೂರ್ನಿಗಳಿಗೂ ನನ್ನಲ್ಲಿ ಆತ್ಮವಿಶ್ವಾಸ ಹೆಚ್ಚಾಗುವಂತೆ ಮಾಡಿದೆ ಎಂದು ಪಿಟಿಐಗೆ ಆರ್. ಪ್ರಜ್ಞಾನಂದ ಟೆಲಿಪೋನ್ ಸಂದರ್ಶನದಲ್ಲಿ ತಿಳಿಸಿದ್ದಾರೆ.
ವಿಶ್ವದ ನಂ.1 ಚೆಸ್ ಆಟಗಾರರ ಮ್ಯಾಗ್ನಸ್ ವಿರುದ್ದ ಗೆದ್ದ ಪ್ರಜ್ಞಾನಂದ..!
ನಾನೀಗ ಸದ್ಯ ಮುಂಬರುವ ಪಂದ್ಯಗಳತ್ತ ಗಮನ ಕೇಂದ್ರೀಕರಿಸಿದ್ದೇನೆ. ಪಂದ್ಯಗಳು ಮುಕ್ತಾಯದ ಬಳಿಕವಷ್ಟೇ ನಾನು ವಿಶ್ರಾಂತಿ ಪಡೆಯುತ್ತೇನೆ ಎಂದಿದ್ದಾರೆ. ಇದೇ ವೇಳೆ ನಾರ್ವೇ ಆಟಗಾರನ ಎದುರು ಗೆಲುವು ಸಾಧಿಸಲು ತಾವು ಯಾವುದೇ ನಿರ್ದಿಷ್ಟ ಪ್ಲಾನ್ ಮಾಡಿರಲಿಲ್ಲ ಎನ್ನುವುದನ್ನು ಪ್ರಜ್ಞಾನಂದ ಒಪ್ಪಿಕೊಂಡಿದ್ದಾರೆ.
ಮ್ಯಾಗ್ನಸ್ ಕಾಲ್‌ರ್‍ಸೆನ್ ಎದುರಿನ ಪಂದ್ಯಕ್ಕೆ ನಾನು ಯಾವುದೇ ಪೂರ್ವಸಿದ್ದತೆ ಅಥವಾ ಪ್ಲಾನ್ ಮಾಡಿಕೊಂಡಿರಲಿಲ್ಲ. ನಾನು ಅವರ ಎದುರು ಚೆಸ್ ಆಡುವುದನ್ನು ಎಂಜಾಯ್ ಮಾಡಬೇಕೆಂದಿದ್ದೆ. ಹಾಗಾಗಿ ಯಾವುದೇ ಒತ್ತಡವನ್ನು ನಾನು ಮೈಮೇಲೆ ಎಳೆದುಕೊಳ್ಳಲಿಲ್ಲ ಎಂದು ಪ್ರಜ್ಞಾನಂದ ಹೇಳಿದ್ದಾರೆ.
ಜಗತ್ತಿನ ಅತ್ಯುತ್ತಮ ಚೆಸ್ ಆಟಗಾರನನ್ನು ಸೋಲಿಸಿದ ಬಳಿಕ ಆರ್. ಪ್ರಜ್ಞಾನಂದ ಸಾಕಷ್ಟು ಖುಷಿಯಿಂದ ಕುಣಿದು ಕುಪ್ಪಳಿಸುತ್ತಿದ್ದಾರೆ ಎಂದು ಅವರ ಕೋಚ್ ಆರ್.ಬಿ. ರಮೇಶ್ ಹೇಳಿದ್ದಾರೆ. ಇದೊಂದು ಅದ್ಭುತ ಅನುಭವ. ನಾನು ಆತನ ಸಾಧನೆಯ ಬಗ್ಗೆ ಹೆಮ್ಮೆ ಪಡುತ್ತೇನೆ. ತಮ್ಮ ಮೇಲೆ ಸ್ವಯಂ ನಂಬಿಕೆಯಿಟ್ಟುಕೊಂಡು ಪ್ರಜ್ಞಾನಂದ ಜಗತ್ತಿನ ದಿಗ್ಗಜ ಆಟಗಾರನ ಎದುರು ಉತ್ತಮ ಪ್ರದರ್ಶನ ತೋರಿದ್ದಾರೆ ಎಂದು ಕೋಚ್ ರಮೇಶ್ ಹರ್ಷ ವ್ಯಕ್ತಪಡಿಸಿದ್ದಾರೆ.
ಆರ್. ಪ್ರಜ್ಞಾನಂದ ವಿಶ್ವದ 5ನೇ ಅತಿ ಕಿರಿಯ ಗ್ರಾಂಡ್‌ಮಾಸ್ಟರ್ ಎನಿಸಿಕೊಂಡಿದ್ದಾರೆ. ಭಾರತದ ಯುವ ಗ್ರಾಂಡ್‌ಮಾಸ್ಟರ್ ಆರ್.ಪ್ರಜ್ಞಾನಂದ ಮಂಗಳವಾರ ನಡೆದ ಏರ್‌ಥಿಂಗ್ಸ್ ಮಾಸ್ಟರ್ಸ್ ಆನ್‌ಲೈನ್ ರ‍್ಯಾಪಿಡ್ ಚೆಸ್ ಟೂರ್ನಿಯ 10ನೇ ಸುತ್ತಿನಲ್ಲಿ ರಷ್ಯಾದ ಆ್ಯಂಡ್ರೆ ಎಸಿಪೆಂಕೊ ಹಾಗೂ 12ನೇ ಸುತ್ತಿನಲ್ಲಿ ಅಲೆಕ್ಸಾಂಡ್ರಾ ಕೊಸ್ಟೆನಿಯುಕ್ ವಿರುದ್ಧ ಗೆಲುವು ಸಾಧಿಸಿದರು. ಆದರೆ 11ನೇ ಸುತ್ತಿನಲ್ಲಿ ರಷ್ಯಾದ ಇಯಾನ್ ನೆಪೋಮ್ನಿಯಾಚಿ ವಿರುದ್ಧ ಸೋಲನುಭವಿಸಿದರು. 2 ಗೆಲುವಿನ ಹೊರತಾಗಿಯೂ ಪ್ರಜ್ಞಾನಂದ 15 ಅಂಕದೊಂದಿಗೆ 12ನೇ ಸ್ಥಾನದಲ್ಲಿದ್ದಾರೆ. ಅಗ್ರ 8 ಆಟಗಾರರು ಮಾತ್ರ ನಾಕೌಟ್ ಹಂತ ಪ್ರವೇಶಿಸಲಿದ್ದಾರೆ.