Asianet Suvarna News Asianet Suvarna News

ಪಾಕ್ 'ಭರ್ಜಿ ಬಾಹುಬಲಿ' ಚಿನ್ನ ಗೆಲ್ಲಲು ಕಾರಣ ನಮ್ಮ ಗೋಲ್ಡನ್ ಬಾಯ್ ನೀರಜ್ ಚೋಪ್ರಾ!

ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಪಾಕಿಸ್ತಾನದ ಅರ್ಶದ್ ನದೀಮ್ ಚಿನ್ನದ ಪದಕ ಗೆಲ್ಲಲು ಕಾರಣವಾಗಿದ್ದು ನಮ್ಮ ಹೆಮ್ಮೆಯ ನೀರಜ್ ಚೋಪ್ರಾ. ಹೌದು ನೀರಜ್ ಚೋಪ್ರಾ ಮಾಡಿದ ನೆರವು ಇದೀಗ ಚಿನ್ನದ ಗರಿ ತಂದುಕೊಟ್ಟಿದೆ. ಈ ರೋಚಕ ಕತೆ ಇಲ್ಲಿದೆ. 

How Neeraj chopra helps Pakistan Arshad nadeem to win gold medal in Paris Olympics inspiring story ckm
Author
First Published Aug 11, 2024, 11:09 PM IST | Last Updated Aug 11, 2024, 11:09 PM IST

ಸುದರ್ಶನ್, ಕ್ರೀಡಾಪತ್ರಕರ್ತ

ದೇಶ, ಭಾಷೆ, ಗಡಿಯನ್ನೂ ಮೀರಿ ಮನಸ್ಸುಗಳನ್ನುಒಂದಾಗಿಸುವ ಶಕ್ತಿ ಕ್ರೀಡೆಗಿದೆ ಎಂಬುದಕ್ಕೆ ಇದು ನಿದರ್ಶನವಾಗಿ ನಿಲ್ಲುವ ಘಟನೆ. ಪ್ಯಾರಿಸ್ ಒಲಿಂಪಿಕ್ಸ್’ನಲ್ಲಿ ಪಾಕಿಸ್ತಾನದ ಅರ್ಷದ್ ನದೀಮ್ ಚಿನ್ನ ಗೆದ್ದಿದ್ದರೆ ಅದಕ್ಕೆ ಕಾರಣ ನೀರಜ್ ಚೋಪ್ರಾ ಮಾಡಿದ್ದ ಸಹಾಯ. 

ಅರ್ಷದ್ ನದೀಮ್ ಎಸೆದ ಆ ಭರ್ಜಿ ನೆಟ್ಟಿದ್ದು ಒಲಿಂಪಿಕ್ಸ್ ಚಿನ್ನಕ್ಕಲ್ಲ, ಭಾರತೀಯರ ಎದೆಗೆ. ನಮ್ಮ “ಚಿನ್ನದ ಹುಡುಗ” ನೀರಜ್ ಚೋಪ್ರಾನ ಮತ್ತೊಂದು ಸ್ವರ್ಣ ಪದಕದ ಕನಸಿಗೆ ಅಡ್ಡಿಯಾಗಿತ್ತು ನದೀಮ್’ನ ರಟ್ಟೆಗಳಿಂದ ಮುನ್ನುಗ್ಗಿದ ಆ ಭರ್ಜಿ. ಐದೇ ಐದು ತಿಂಗಳುಗಳ ಹಿಂದಿನ ಮಾತು. ಒಲಿಂಪಿಕ್ಸ್’ಗೆ ಸಿದ್ಧತೆ ನಡೆಸುತ್ತಿದ್ದ ಅರ್ಷದ್ ನದೀಮ್ ಬಳಿ ಒಂದೊಳ್ಳೆಯ ಭರ್ಜಿ ಇರಲಿಲ್ಲ. ಏಳು ವರ್ಷಗಳಿಂದ ಅದೊಂದು ತುಕ್ಕು ಹಿಡಿದ, ಸವೆದು ಸವೆದು ಸಣಕಲಾಗಿದ್ದ ಜಾವೆಲಿನ್’ನಲ್ಲೇ ಅಭ್ಯಾಸ ಮುಂದುವರಿದಿತ್ತು. 

ಯಾವುದೇ ನೆರವಿಲ್ಲದೆ ಚಿನ್ನ ಗೆದ್ದ ನದೀಮ್ ಇದೀಗ ಪಾಕ್ ಸರ್ಕಾರಕ್ಕೆ ಕೊಡಬೇಕು 3 ಕೋಟಿ ರೂ!

ಜಗತ್ತಿನ ಶ್ರೇಷ್ಠ ತರಬೇತುದಾರರ ಗರಡಿಯಲ್ಲಿ, ಸುಸಜ್ಜಿತ ಶಸ್ತ್ರಾಸ್ತ್ರಗಳೊಂದಿಗೆ ಅಭ್ಯಾಸ ನಡೆಸುವವರ ಮಧ್ಯೆ.. ಜಗತ್ತಿನ ಖ್ಯಾತ ಜಾವೆಲಿನ್ ಎಸೆತಗಾರರಲ್ಲಿ ಒಬ್ಬನಾದರೂ ಪಾಕಿಸ್ತಾನದ ನದೀಮ್ ಒಂದು ಭರ್ಜಿಗಾಗಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ.

ಒಂದೊಳ್ಳೆ ಭರ್ಜಿಯ ಬೆಲೆ 85 ಸಾವಿರದಿಂದ ಒಂದು ಲಕ್ಷ ರೂಪಾಯಿ.. ಆ ಒಂದು ಭರ್ಜಿಗಾಗಿ ಅರ್ಷದ್ ನದೀಮ್ ಅಕ್ಷರಶಃ ಅಂಗಲಾಚುತ್ತಾನೆ.  

"7-8 ವರ್ಷಗಳಿಂದ ಒಂದೇ ಜಾವೆಲಿನ್’ನಲ್ಲಿ ಅಭ್ಯಾಸ ನಡೆಸುತ್ತಿದ್ದೇನೆ.. ಇನ್ನು ಮುಂದೆ ಇದರಲ್ಲೇ  ತಾಲೀಮು ಮುಂದುವರಿಸಿದರೆ, ಮುರಿದೇ ಹೋಗುತ್ತದೆ. ಪ್ಯಾರಿಸ್’ಗೆ ಹೋಗುವ ಮುನ್ನ ನನಗೊಂದು ಭರ್ಜಿ ಕೊಡಿಸಿ” ಎಂದು ರಾಷ್ಟ್ರೀಯ ಫೆಡರೇಶನ್ ಮತ್ತು ಕೋಚ್’ಗಳನ್ನು ಕೇಳುತ್ತಾನೆ. ಆ ದೇಶದ ದೊಡ್ಡ ದೊಡ್ಡವರನ್ನೆಲ್ಲಾ ಸಂಪರ್ಕಿಸುತ್ತಾನೆ. ಯಾರೂ ಕೂಡ ಇವನತ್ತ ತಿರುಗಿಯೂ ನೋಡಲಿಲ್ಲ. ಹಂದಿಗಳಿಗೇನು ಗೊತ್ತು ನಂದಿಯ ಮಹತ್ವ..?

ಒಲಿಂಪಿಕ್ಸ್’ನಲ್ಲಿ ದೇಶದ ಕೀರ್ತಿ ಪತಾಕೆ ಹಾರಿಸಲು ಹೊರಟು ನಿಂತವನೊಂದು ಒಳ್ಳೆಯ ಭರ್ಜಿ ಕೊಡಿಸುವ ಯೋಗ್ಯತೆ ಆ ದೇಶಕ್ಕಿರಲಿಲ್ಲ.

ವಿಷಯ ನೀರಜ್ ಚೋಪ್ರಾನ ಕಿವಿಗೆ ಬೀಳುತ್ತದೆ. ಪಾಕಿಸ್ತಾನದ ತನ್ನ ಪ್ರತಿಸ್ಪರ್ಧಿಯ ದಯನೀಯ ಪರಿಸ್ಥಿತಿಯನ್ನು ಕೇಳಿ ದಂಗಾಗಿ ಹೋಗುತ್ತಾನೆ ನೀರಜ್ ಚೋಪ್ರಾ. ಒಬ್ಬ ಕ್ರೀಡಾಪಟುವಿನ ಕಷ್ಟವನ್ನು ಮತ್ತೊಬ್ಬ ಕ್ರೀಡಾಪಟುವಷ್ಟೇ ಅರ್ಥ ಮಾಡಿಕೊಳ್ಳಲು ಸಾಧ್ಯ. ಅರ್ಷದ್ ನದೀಮ್’ಗೆ ಸಹಾಯ ಮಾಡಲು ಮುಂದಾಗುತ್ತಾನೆ. 

“ಹೊಸ ಜಾವೆಲಿನ್ ಪಡೆಯಲು ಆತ ಹೆಣಗಾಡುತ್ತಿದ್ದಾನೆ ಎಂಬುದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಆತನ ಸಾಧನೆ, ಅರ್ಹತೆಗಳ ಮುಂದೆ ಇದೆಲ್ಲಾ ಸಮಸ್ಯೆಯೇ ಆಗಬಾರದು. ಅರ್ಷದ್ ನದೀಮ್ ಜಗತ್ತಿನ ಟಾಪ್ ಜಾವೆಲಿನ್ ಎಸೆತಗಾರರಲ್ಲಿ ಒಬ್ಬ. ಆತನಿಗೊಂದು ಭರ್ಜಿಯ ಪ್ರಾಯೋಜಕತ್ವವನ್ನು ಜಾವೆಲಿನ್ ತಯಾರಕರು ಸಂತೋಷದಿಂದ ನೀಡುತ್ತಾರೆ ಎಂದು ಭಾವಿಸುತ್ತೇನೆ” ಎಂದು SAI Mediaಗೆ ನೀಡಿದ ಸಂದರ್ಶನದಲ್ಲಿ ಹೇಳಿ ಬಿಟ್ಟ ನೀರಜ್ ಚೋಪ್ರಾ.

ಚಾಂಪಿಯನ್ ಅಥ್ಲೀಟ್ ಹೇಳಿದ್ದು ಒಂದೇ ಮಾತು. ಮರುದಿನವೇ ಅರ್ಷದ್ ನದೀಮ್ ಕೈಯಲ್ಲಿತ್ತು ಆತ ಬಯಸಿದ್ದ ಭರ್ಜಿ. ಅದೇ ಭರ್ಜಿಯಲ್ಲಿ ನಿರಂತರ ಅಭ್ಯಾಸ ನಡೆಸಿವನು ಈಗ ಪ್ಯಾರಿಸ್ ಒಲಿಂಪಿಕ್ಸ್’ನಲ್ಲಿ ನೀರಜ್ ಚೋಪ್ರಾನನ್ನೇ ಹಿಂದಿಕ್ಕಿ ಚಿನ್ನ ಗೆದ್ದಿದ್ದಾನೆ. 

ಹಾಗೆ ನೋಡಿದರೆ ಭಾರತದ ನೀರಜ್ ಚೋಪ್ರಾ ಮತ್ತು ಪಾಕಿಸ್ತಾನದ ಅರ್ಷದ್ ನದೀಮ್ ಮಧ್ಯೆ ಇನ್ನಿಲ್ಲದ ಸ್ಪರ್ಧೆ-ಪೈಪೋಟಿ ಇರಬೇಕಿತ್ತು. ಪೈಪೋಟಿ ಇತ್ತು, ಇದೆ ಮತ್ತು ಮುಂದೆಯೂ ಇರುತ್ತದೆ. ಆದರೆ ಅದು ಭರ್ಜಿ ಹಿಡಿದು ಅಖಾಡ ಪ್ರವೇಶಿಸಿದಾಗ ಮಾತ್ರ. 

ಅದರಾಚೆ ಇವರಿಬ್ಬರ ಸಂಬಂಧವನ್ನು ನೋಡಿದರೆ ಒಡ ಹುಟ್ಟಿದ ಅಣ್ಣ-ತಮ್ಮಂದಿರೇ ನಾಚಬೇಕು. ನದೀಮ್’ನನ್ನು ನೀರಜ್ ಪ್ರೀತಿಯಿಂದ “ಭಾಯ್” ಎನ್ನುತ್ತಾನೆ. ತನಗಿಂತ ಒಂದು ವರ್ಷ ಚಿಕ್ಕವನಾದ ನೀರಜ್ ಚೋಪ್ರಾನೇ “ನನ್ನ ರೋಲ್ ಮಾಡೆಲ್” ಎನ್ನುತ್ತಾನೆ ಅರ್ಷದ್. 

"ರಾಷ್ಟ್ರಗೀತೆ ಮೊಳಗಿಸಲು ಸಾಧ್ಯವಾಗಲಿಲ್ಲ, ಆದ್ರೆ..?" ಬೆಳ್ಳಿ ಗೆದ್ದ ಬಳಿಕ ಭಾವನಾತ್ಮಕ ಪ್ರತಿಕ್ರಿಯೆ ಕೊಟ್ಟ ನೀರಜ್ ಚೋಪ್ರಾ

ಪ್ಯಾರಿಸ್ ಒಲಿಂಪಿಕ್ಸ್’ನಲ್ಲಿ ನೀರಜ್ ಚೋಪ್ರಾನ ಚಿನ್ನದ ಕನಸನ್ನು ಅರ್ಷದ್ ನದೀಮ್ ಭಗ್ನಗೊಳಿಸಿದಾಗ, ಇತ್ತ ನೀರಜ್ ತಾಯಿ ಏನು ಹೇಳಿದರು ಗೊತ್ತೇ..?  “ಅರ್ಷದ್ ನದೀಮ್, ಅವನೂ ನನ್ನ ಮಗನೇ” ಎಂದು. ಇಂಥಾ ತಾಯಿಯ ಹೊಟ್ಟೆಯಲ್ಲಿ ನೀರಜ್ ಚೋಪ್ರಾನಂಥಾ ಹೃದಯವಂತ ಹುಟ್ಟದೆ ಇನ್ನಾರು ಹುಟ್ಟಲು ಸಾಧ್ಯ..?
 

Latest Videos
Follow Us:
Download App:
  • android
  • ios