ಹಾಂಕಾಂಗ್ ಓಪನ್: ಸೆಮೀಸ್‌ನಲ್ಲಿ ಮುಗ್ಗರಿಸಿದ ಶ್ರೀಕಾಂತ್
ಕಿದಂಬಿ ಶ್ರೀಕಾಂತ್ ಸೆಮೀಸ್‌ನಲ್ಲಿ ಮುಗ್ಗರಿಸುವುದರೊಂದಿಗೆ ಹಾಂಕಾಂಗ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಅಭಿಯಾನ ಅಂತ್ಯವಾಗಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..
ಹಾಂಕಾಂಗ್(ನ.17): ಭಾರತದ ತಾರಾ ಶಟ್ಲರ್ ಕಿದಂಬಿ ಶ್ರೀಕಾಂತ್, ಇಲ್ಲಿ ನಡೆಯುತ್ತಿರುವ ಹಾಂಕಾಂಗ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಸೋಲುಂಡು ಹೊರಬಿದ್ದಿದ್ದಾರೆ. ಇದರೊಂದಿಗೆ ಭಾರತದ ಸವಾಲು ಅಂತ್ಯವಾಗಿದೆ.
ಹಾಂಕಾಂಗ್ ಓಪನ್: ಸೆಮಿಫೈನಲ್ಗೆ ಲಗ್ಗೆ ಇಟ್ಟ ಶ್ರೀಕಾಂತ್!
ಶನಿವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಶ್ರೀಕಾಂತ್, ಸ್ಥಳೀಯ ಆಟಗಾರ ಲೀ ಚೆಯುಕ್ ಯೀ ವಿರುದ್ಧ 9-21, 23-25 ಗೇಮ್‌ಗಳಲ್ಲಿ ಪರಾಭವಗೊಂಡರು. ಪಂದ್ಯದ ಮೊದಲ ಸುತ್ತು ಹಾಗೂ ಕ್ವಾರ್ಟರ್‌ಫೈನಲ್‌ನಲ್ಲಿ ಅದೃಷ್ಟದ ಜಯ ದಾಖಲಿಸಿದ್ದ ಶ್ರೀಕಾಂತ್‌ಗೆ ಸೆಮೀಸ್‌ನಲ್ಲಿ ಕಠಿಣ ಸವಾಲು ಎದುರಾಗಿತ್ತು.
ಈ ವರ್ಷದ ಇಂಡಿಯಾ ಓಪನ್ ಟೂರ್ನಿಯಲ್ಲಿ ರನ್ನರ್ ಅಪ್ ಆಗಿದ್ದ ಮಾಜಿ ವಿಶ್ವ ನಂ.1 ಶ್ರೀಕಾಂತ್, ಮಾರ್ಚ್ ಬಳಿಕ ಮೊದಲ ಬಾರಿ ಟೂರ್ನಿಯೊಂದರಲ್ಲಿ ಸೆಮೀಸ್‌ಗೇರಿದ್ದರು. ಈ ಟೂರ್ನಿಯ ಮೊದಲ ಸುತ್ತಲ್ಲಿ ವಿಶ್ವ ಚಾಂಪಿಯನ್ ಕೆಂಟೋ ಮೊಮೊಟಾ ಹಿಂದೆ ಸರಿದ ಕಾರಣ ಬೈ ಪಡೆದು 2ನೇ ಸುತ್ತಿಗೇರಿದ್ದರು. ಕ್ವಾರ್ಟರ್‌ಫೈನಲ್‌ನಲ್ಲಿ ಚೀನಾದ ಚೆನ್ ಲಾಂಗ್ ಗಾಯಗೊಂಡು ಪಂದ್ಯ ಬಿಟ್ಟುಕೊಟ್ಟಿದ್ದಕ್ಕೆ ಸೆಮಿಫೈನಲ್‌ಗೇರಿದ್ದರು.
ಸೆಮೀಸ್‌ನಲ್ಲಿ ಶ್ರೀಕಾಂತ್‌ಗೆ ಪ್ರಬಲ ಪೈಪೋಟಿ ಎದುರಾಯಿತು. ಮೊದಲ ಗೇಮ್‌ನಲ್ಲೇ ಭಾರತೀಯ ಆಟಗಾರ ಸುಸ್ತಾದರು. 2ನೇ ಗೇಮ್‌ನಲ್ಲಿ ಶ್ರೀಕಾಂತ್ ಹೋರಾಟ ನಡೆಸಿದರೂ, ಯಾವುದೇ ಪ್ರಯೋಜನವಾಗಲಿಲ್ಲ. 42 ನಿಮಿಷಗಳಲ್ಲಿ ಪಂದ್ಯ ಮುಕ್ತಾಯಗೊಂಡಿತು.