ಹಾಂಕಾಂಗ್ ಓಪನ್ ಬ್ಯಾಡ್ಮಿಂಟನ್: ಸೈನಾ-ಸಿಂಧುವಿನತ್ತ ಎಲ್ಲರ ಚಿತ್ತ
ನ.12ರಿಂದ ಹಾಂಕಾಂಗ್ ಓಪನ್ ಟೂರ್ನಿ ಆರಂಭವಾಗಲಿದ್ದು, ಎಲ್ಲರ ಚಿತ್ತ ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿಯರಾದ ಪಿ.ವಿ ಸಿಂಧು ಹಾಗೂ ಸೈನಾ ನೆಹ್ವಾಲ್‌ರತ್ತ ನೆಟ್ಟಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಹಾಂಕಾಂಗ್[ನ.12]: ಸಾತ್ವಿಕ್ ಸಾಯಿರಾಜ್ ಹಾಗೂ ಚಿರಾಗ್ ಶೆಟ್ಟಿ ಜೋಡಿ ಮಂಗಳವಾರದಿಂದ ಇಲ್ಲಿ ಆರಂಭಗೊಳ್ಳಲಿರುವ ಹಾಂಕಾಂಗ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ತಮ್ಮ ಲಯ ಮುಂದುವರಿಸುವ ವಿಶ್ವಾಸದಲ್ಲಿದೆ. ಆದರೆ ಎಲ್ಲರ ಗಮನ ಪಿ.ವಿ.ಸಿಂಧು ಹಾಗೂ ಸೈನಾ ನೆಹ್ವಾಲ್ ಮೇಲೆ ಕೇಂದ್ರೀಕೃತಗೊಂಡಿದೆ.
ಚೀನಾ ಓಪನ್: ಸೆಮೀಸ್ ನಲ್ಲಿ ಮುಗ್ಗರಿಸಿದ ಸಾತ್ವಿಕ್-ಚಿರಾಗ್
ಇಬ್ಬರು ತಾರಾ ಆಟಗಾರ್ತಿಯರು ಇತ್ತೀಚಿನ ಟೂರ್ನಿಗಳಲ್ಲಿ ಆರಂಭಿಕ ಆಘಾತ ಅನುಭವಿಸಿದ್ದು, ಈ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ತೋರುವ ವಿಶ್ವಾಸದಲ್ಲಿದ್ದಾರೆ. ವಿಶ್ವ ನಂ.9 ಚಿರಾಗ್ ಹಾಗೂ ಸಾತ್ವಿಕ್, ಫ್ರೆಂಚ್ ಓಪನ್ ಟೂರ್ನಿಯಲ್ಲಿ ರನ್ನರ್-ಅಪ್ ಆದ ಬಳಿಕ ಕಳೆದ ವಾರ ಚೀನಾ ಓಪನ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದರು. ಇಲ್ಲಿ ಮೊದಲ ಸುತ್ತಿನ ಪಂದ್ಯದಲ್ಲಿ ಭಾರತೀಯ ಜೋಡಿ ಜಪಾನ್‌ನ ಟಕುರೊ ಹೊಕಿ ಹಾಗೂ ಯುಗೊ ಕೊಬಯಾಶಿ ವಿರುದ್ಧ ಸೆಣಸಲಿದೆ.
ಮಹಿಳಾ ಸಿಂಗಲ್ಸ್‌ನಲ್ಲಿ ಸೈನಾ ಮೊದಲ ಸುತ್ತಿನಲ್ಲಿ ಚೀನಾದ ಕಾಯ್ ಯಾನ್ ಯಾನ್ ವಿರುದ್ಧ ಸೆಣಸಲಿದ್ದಾರೆ. ಕಳೆದ ವಾರ ಚೀನಾ ಓಪನ್‌ನಲ್ಲಿ ಇದೇ ಆಟಗಾರ್ತಿ ವಿರುದ್ಧ ಸೋಲುಂಡಿದ್ದರು. ಸಿಂಧುಗೆ ಮೊದಲ ಸುತ್ತಿನಲ್ಲಿ ಕೊರಿಯಾದ ಕಿಮ್ ಗಾ ಯುನ್ ಎದುರಾಗಲಿದ್ದಾರೆ. ಪುರುಷರ ಸಿಂಗಲ್ಸ್‌ನಲ್ಲಿ ಕಿದಂಬಿ ಶ್ರೀಕಾಂತ್‌ಗೆ ಮೊದಲ ಸುತ್ತಿನಲ್ಲೇ ಕಠಿಣ ಸವಾಲು ಎದುರಾಗಲಿದೆ. ವಿಶ್ವ ನಂ.1 ಜಪಾನ್‌ನ ಕೆಂಟೊ ಮೊಮೊಟಾ ವಿರುದ್ಧ ಸೆಣಸಲಿದ್ದಾರೆ.