16 ವರ್ಷದ ತಸ್ನೀಂ ಮೀರ್ ಕಿರಿಯರ ಬ್ಯಾಡ್ಮಿಂಟನ್ ವಿಶ್ವ ನಂ.1 ಆಟಗಾರ್ತಿ..!
* ಕಿರಿಯರ ವಿಶ್ವ ಬ್ಯಾಡ್ಮಿಂಟನ್ ಶ್ರೇಯಾಂಕದಲ್ಲಿ ನಂ.1 ಸ್ಥಾನಕ್ಕೇರಿ ದಾಖಲೆ ಬರೆದ ತಸ್ನೀಂ ಮೀರ್
* ಸೈನಾ, ಸಿಂಧು ಅವರಿಂದ ಆಗದ ಸಾಧನೆ ಮಾಡಿದ ಗುಜರಾತಿನ 16 ವರ್ಷದ ಆಟಗಾರ್ತಿ
* ಮಹಿಳಾ ವಿಭಾಗದಲ್ಲಿ ಈ ಸಾಧನೆ ಮಾಡಿದ ಮೊದಲ ಆಟಗಾರ್ತಿ ತಸ್ನೀಂ
ನವದೆಹಲಿ(ಜ.15): ಭಾರತದ ಯುವ ಬ್ಯಾಡ್ಮಿಂಟನ್ ತಾರೆ ತಸ್ನೀಂ ಮೀರ್ (Tasnim Mir) ಅಂಡರ್-19 ಮಹಿಳಾ ಸಿಂಗಲ್ಸ್ ವಿಶ್ವ ರ‍್ಯಾಂಕಿಂಗ್‌ನಲ್ಲಿ ( Badminton World Federation Rankings) ನಂ.1 ಸ್ಥಾನಕ್ಕೇರಿದ್ದು, ಈ ಸಾಧನೆ ಮಾಡಿದ ಮೊದಲ ಭಾರತೀಯ ಮಹಿಳಾ ಶಟ್ಲರ್ ಎನ್ನುವ ದಾಖಲೆ ಬರೆದಿದ್ದಾರೆ. ಪಿ.ವಿ.ಸಿಂಧು(PV Sindhu), ಸೈನಾ ನೆಹ್ವಾಲ್‌ರಿಂದ (Saina Nehwal) ಸಾಧ್ಯವಾಗದ್ದನ್ನು ತಸ್ನಿಂ ಸಾಧಿಸಿದ್ದಾರೆ. ಗುಜರಾತ್‌ನ 16 ವರ್ಷದ ತಸ್ನೀಂ ಕಳೆದ ವರ್ಷ ಮೂರು ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಚಾಂಪಿಯನ್ ಆಗಿದ್ದು, ಮೂರು ಸ್ಥಾನ ಮೇಲಕ್ಕೇರಿ ನಂ.1 ಸ್ಥಾನ ಪಡೆದಿದ್ದಾರೆ.
ನನಗಿಂದು ತುಂಬಾ ಸಂತೋಷವಾಗುತ್ತಿದೆ. ನಾನು ನನ್ನ ರೋಲ್ ಮಾಡೆಲ್‌ಗಳಾದ ಪಿ.ವಿ. ಸಿಂಧು ಹಾಗೂ ಸೈನಾ ನೆಹ್ವಾಲ್ ಅವರ ದಾರಿಯಲ್ಲೇ ಸಾಗಲು ಪ್ರಯತ್ನಿಸುತ್ತೇನೆ ಎಂದು ತಸ್ನೀಂ ಮೀರ್ ಹೇಳಿದ್ದಾರೆ. ನಾನು ಇನ್ನು ಮುಂದೆ ನಮ್ಮ ಹಿರಿಯ ಆಟಗಾರ್ತಿಯರು ಹೇಗೆ ಆಡುತ್ತಾರೆ ಎನ್ನುವುದರ ಬಗ್ಗೆ ಹೆಚ್ಚು ಗಮನಹರಿಸುತ್ತೇನೆ ಹಾಗೂ ಆ ಹಂತದಲ್ಲಿ ಸ್ಪರ್ಧೆ ನೀಡಲು ಬಯಸುತ್ತೇನೆ. ಮುಂದಿನ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಪದಕ ಗೆಲ್ಲಲು ಎದುರು ನೋಡುತ್ತಿದ್ದೇನೆ ಎಂದು ತಸ್ನೀಂ ಹೇಳಿದ್ದಾರೆ.
ಪಂದ್ಯ ಸೋತಾಗಲೆಲ್ಲಾ ನಾನು ಮೊದಲು ಜೋರಾಗಿ ಅಳುತ್ತಿದ್ದೆ. ನಾನು ಈ ಹಂತಕ್ಕೇರಲು ಸಾಕಷ್ಟು ಶ್ರಮ ವಹಿಸಿದ್ದೇನೆ. ಪ್ರತಿದಿನ ಆರರಿಂದ 8 ಗಂಟೆಗಳ ಕಾಲ ಅಭ್ಯಾಸ ನಡೆಸಿದ್ದೇನೆ. ನಾನು ಈ ಹಂತಕ್ಕೇರಲು ನನ್ನ ಪೋಷಕರು ಹಾಗೂ ಸಹೋದರ ಸಾಕಷ್ಟು ತ್ಯಾಗ ಮಾಡಿದ್ದಾರೆ ಎಂದು ತಸ್ನೀಂ ಹೇಳಿದ್ದಾರೆ.
ತಸ್ನೀಂ ಆರು ವರ್ಷದವಳಾಗಿದ್ದಾಗಲೇ ಬ್ಯಾಡ್ಮಿಂಟನ್ ಆಡುವುದನ್ನು ಆರಂಭಿಸಿದಳು. ಒಂದು ಹಂತದಲ್ಲಿ ಆಕೆ ಬ್ಯಾಡ್ಮಿಂಟನ್ ಆಡುವುದನ್ನು ನಿಲ್ಲಿಸಲು ಆಲೋಚಿಸಿದ್ದಳು. ಆದರೆ ಸ್ಪಾನ್ಸರ್‌ಶಿಪ್ ದೊರೆತ ನಂತರ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಮುಂದುವರೆದಳು. ಆಕೆ ಇಲ್ಲಿಯವರೆಗೆ ವಿವಿಧ ಕೆಟೆಗೆರೆಯಲ್ಲಿ 22 ಪ್ರಶಸ್ತಿಗಳನ್ನು ಜಯಿಸಿದ್ದಾರೆ. ನಾವೀಗ ಆಕೆ ಸೀನಿಯರ್ ವಿಭಾಗದಲ್ಲಿ ಚಾಂಪಿಯನ್ ಆಗಲಿ ಹಾಗೂ ಒಲಿಂಪಿಕ್ಸ್‌ನಲ್ಲಿ ದೇಶಕ್ಕೆ ಪದಕ ಗೆಲ್ಲಲಿ ಎನ್ನುವುದು ನಮ್ಮ ಹಾರೈಕೆಯಾಗಿದೆ ಎಂದು ತಸ್ನೀಂ ಮೀರ್ ಅವರ ತಂದೆ ಇರ್ಫಾನ್ ಹೇಳಿದ್ದಾರೆ.
2021ರಲ್ಲಿ ಬಲ್ಗೇರಿಯನ್ ಓಪನ್, ಆಲ್ಫ್ಸ್ ಹಾಗೂ ಬೆಲ್ಜಿಯನ್ ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಪ್ರಶಸ್ತಿ ಜಯಿಸಿದ್ದ ಅವರು, ಕಿರಿಯರ ವಿಭಾಗದಲ್ಲಿ ಒಟ್ಟು ಚಾಂಪಿಯನ್‌ಶಿಪ್‌ಗಳನ್ನು ಗೆದ್ದಿದ್ದಾರೆ. ಈ ಮೊದಲು ಪಿ.ವಿ.ಸಿಂಧು ಅಂಡರ್-19 ರ‍್ಯಾಂಕಿಂಗ್‌ನಲ್ಲಿ ವಿಶ್ವ ನಂ.2 ಸ್ಥಾನಕ್ಕೇರಿದ್ದರು. ಬಾಲಕರ ವಿಭಾಗದಲ್ಲಿ ಲಕ್ಷ್ಯ ಸೆನ್, ಸಿರಿಲ್ ವರ್ಮಾ ಹಾಗೂ ಆದಿತ್ಯ ಜೋಷಿ ನಂ.1 ಸ್ಥಾನ ಅಲಂಕರಿಸಿದ್ದರು.
ಇಂಡಿಯಾ ಓಪನ್: ಪಿ ವಿ ಸಿಂಧು, ಲಕ್ಷ್ಯ ಸೆನ್ ಸೆಮೀಸ್ ಪ್ರವೇಶ
ನವದೆಹಲಿ: ಮಾಜಿ ವಿಶ್ವ ಚಾಂಪಿಯನ್ ಪಿ.ವಿ.ಸಿಂಧು ಹಾಗೂ ವಿಶ್ವ ಚಾಂಪಿಯನ್‌ಶಿಪ್ ಕಂಚು ವಿಜೇತ ಲಕ್ಷ್ಯ ಸೆನ್ (Lakshya Sen) ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ (India Open Badminton Tournament) ಸೆಮಿಫೈನಲ್ ಪ್ರವೇಶಿಸಿದ್ದಾರೆ. ಶುಕ್ರವಾರ ಮಹಿಳಾ ಸಿಂಗಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಸಿಂಧು, ಭಾರತದವರೇ ಆದ ಅಶ್ಮಿತಾ ಚಾಲಿಹಾ ವಿರುದ್ಧ 21-7, 21-18 ಅಂತರದಲ್ಲಿ ಗೆದ್ದರು. ಸೆಮೀಸ್‌ನಲ್ಲಿ ಅವರು ಥಾಯ್ಲೆಂಡ್‌ನ ಸುಪನಿದಾ ವಿರುದ್ಧ ಸ್ಪರ್ಧಿಸಲಿದ್ದಾರೆ.
India Open: ಕಿದಂಬಿ ಶ್ರೀಕಾಂತ್ ಸೇರಿ 7 ಶಟ್ಲರ್‌ಗಳಿಗೆ ಕೋವಿಡ್ ಪಾಸಿಟಿವ್..!
ಮಾಳವಿಕಾ ಬನ್ಸೋಡ್‌ರನ್ನು ಮಣಿಸಿದ ಆಕರ್ಷಿ ಕಷ್ಯಪ್ ಕೂಡಾ ಸೆಮೀಸ್ ತಲುಪಿದ್ದಾರೆ. ಇನ್ನು, ಪುರುಷರ ಸಿಂಗಲ್ಸ್‌ನಲ್ಲಿ ಸೆನ್, ಎಚ್.ಎಸ್.ಪ್ರಣಯ್ ವಿರುದ್ಧ 14-21, 21-9, 21-14 ಗೇಮ್‌ಗಳಲ್ಲಿ ಗೆದ್ದು ಸೆಮೀಸ್ ಪ್ರವೇಶಿಸಿದರು.