ಫ್ರೆಂಚ್ ಓಪನ್: ನಡಾಲ್, ಜೋಕೋವಿಚ್ 2ನೇ ಸುತ್ತಿಗೆ ಲಗ್ಗೆ
ವಿಶ್ವದ ನಂ.1 ಶ್ರೇಯಾಂಕಿತ ನೊವಾಕ್ ಜೋಕೋವಿಚ್ ಹಾಗೂ ಕಿಂಗ್ ಆಫ್ ಕ್ಲೇ ಕೋರ್ಟ್ ಖ್ಯಾತಿಯ ರಫೇಲ್ ನಡಾಲ್ ಫ್ರೆಂಚ್ ಓಪನ್ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸುಲಭವಾಗಿ ಎರಡನೇ ಸುತ್ತು ಪ್ರವೇಶಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಪ್ಯಾರಿಸ್(ಸೆ.30): ವಿಶ್ವ ನಂ.2, ಹಾಲಿ ಚಾಂಪಿಯನ್ ಸ್ಪೇನ್‌ನ ರಾಫೆಲ್ ನಡಾಲ್ ಹಾಗೂ ಸರ್ಬಿಯಾದ ನೊವಾಕ್ ಜೋಕೋವಿಚ್ ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲಾಮ್‌ನಲ್ಲಿ ಶುಭಾರಂಭ ಮಾಡಿದ್ದಾರೆ.
ನಡಾಲ್ ದಾಖಲೆಯ 13ನೇ ಫ್ರೆಂಚ್ ಓಪನ್ ಮೇಲೆ ನಡಾಲ್ ಕಣ್ಣಿಟ್ಟಿದ್ದಾರೆ. ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಲ್ಲಿ ನಡಾಲ್, ಬೇಲಾರಸ್‌ನ ಇಗೊರ್ ಗೆರಸ್ಮಿಮೊವ್ ವಿರುದ್ಧ 6-4, 6-4, 6-2 ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. 2ನೇ ಸುತ್ತಲ್ಲಿ ನಡಾಲ್, ಅಮೆರಿಕದ ಮೆಕೆಂಜಿ ಮೆಕ್‌ಡೊನಾಲ್ಡ್‌ರನ್ನು ಎದುರಿಸಲಿದ್ದಾರೆ. ಇನ್ನು ವಿಶ್ವದ ನಂ.1 ಟೆನಿಸ್ ಆಟಗಾರ ಸರ್ಬಿಯಾದ ನೊವಾಕ್ ಜೋಕೋವಿಚ್, ಸ್ವೀಡನ್‌ನ ಮಿಕೆಲ್ ಯಮೆರ್ ವಿರುದ್ಧ 6-0, 6-2, 6-3ರಲ್ಲಿ ಗೆಲುವು ಸಾಧಿಸಿದರು.
ಫ್ರೆಂಚ್ ಓಪನ್: ನಗಾಲ್‌ಗೆ ಶಾಕ್, 2ನೇ ಸುತ್ತಿಗೆ ಪ್ರಜ್ಞೇಶ್
ಮಹಿಳಾ ಸಿಂಗಲ್ಸ್ ವಿಭಾಗದ ಮೊದಲ ಸುತ್ತಲ್ಲಿ 2016ರ ಫ್ರೆಂಚ್ ಓಪನ್ ಚಾಂಪಿಯನ್ ಸ್ಪೇನ್‌ನ ಗರ್ಬೈನ್ ಮುಗುರುಜಾ, ಸ್ಲೋವೇನಿಯಾದ ತಮರಾ ಜಿಡಾನ್ಸೆಕ್ ವಿರುದ್ಧ 7-5, 4-6, 8-6 ಸೆಟ್‌ಗಳಲ್ಲಿ ಗೆಲುವು ಪಡೆದು 2ನೇ ಸುತ್ತಿಗೇರಿದರು.
ಕೆರ್ಬರ್‌ಗೆ ಆಘಾತ:
3 ಬಾರಿ ಗ್ರ್ಯಾನ್‌ಸ್ಲಾಮ್ ವಿಜೇತೆ ಜರ್ಮನಿಯ ಆ್ಯಂಜೆಲಿಕ್ ಕೆರ್ಬರ್, ಮಹಿಳಾ ಸಿಂಗಲ್ಸ್ ವಿಭಾಗದ ಮೊದಲ ಸುತ್ತಲ್ಲೇ ಆಘಾತ ಅನುಭವಿಸಿದ್ದಾರೆ. ಸತತ 2ನೇ ವರ್ಷ ಕೆರ್ಬರ್ ಫ್ರೆಂಚ್ ಓಪನ್‌ನ ಮೊದಲ ಸುತ್ತಲ್ಲಿ ನಿರ್ಗಮಿಸಿದ್ದಾರೆ. ಕೆರ್ಬರ್, 19 ವರ್ಷ ವಯಸ್ಸಿನ ಸ್ಲೋವೇನಿಯಾದ ಕಜಾ ಜುವಾನ್ ಎದುರು 3-6, 3-6 ಸೆಟ್‌ಗಳಲ್ಲಿ ಪರಾಭವ ಹೊಂದಿದರು.
ಮತ್ತೊಂದು ಪಂದ್ಯದಲ್ಲಿ 2 ಗ್ರ್ಯಾನ್‌ಸ್ಲಾಮ್ ವಿಜೇತೆ ರಷ್ಯಾದ ಸ್ವೆಟ್ಲಾನಾ ಕುಜೆಂಟ್ಸೋವಾ, ತಮ್ಮದೇ ರಾಷ್ಟ್ರದ ಅನಸ್ಟಾಸಿಯಾ ಪಾವ್ಲಿಂಚೆಂಕೊವಾ ವಿರುದ್ಧ 1-6, 2-6, 1-6 ಸೆಟ್‌ಗಳಲ್ಲಿ ಸೋತು ಹೊರಬಿದ್ದರು.