ಪ್ಯಾರೀಸ್(ಸೆ.22)‌: ಕೊರೋನಾ ಭೀತಿ ನಡುವೆಯೂ ಫ್ರೆಂಚ್‌ ಓಪನ್‌ ಟೆನಿಸ್‌ ಪಂದ್ಯಾವಳಿಗೆ ಸೋಮವಾರದಿಂದ ಚಾಲನೆ ದೊರೆತಿದ್ದು, ರೋಲ್ಯಾಂಡ್‌ ಗ್ಯಾರೋಸ್‌ನಲ್ಲಿ ನಡೆಯುತ್ತಿರುವ ಈ ವರ್ಷದ 2ನೇ ಗ್ರ್ಯಾನ್‌ ಸ್ಲಾಮ್‌ ಇದಾಗಿದೆ.

ಸೋಮವಾರದಿಂದ ಆರಂಭವಾಗಿರುವ ಫ್ರೆಂಚ್‌ ಓಪನ್‌ ಗ್ರ್ಯಾಸ್ಲಾಮ್‌ ಟೂರ್ನಿಯ ಅರ್ಹತಾ ಸುತ್ತಿನಲ್ಲಿ ಭಾರತಕ್ಕೆ ಮಿಶ್ರಫಲ ದೊರಕಿದೆ. ಭಾರತದ ನಂ.1 ಆಟಗಾರ ಸುಮಿತ್‌ ನಗಾಲ್‌ ಮೊದಲ ಅರ್ಹತಾ ಸುತ್ತಲ್ಲಿ ಪರಾಭವ ಹೊಂದಿದರೆ, ಪ್ರಜ್ನೇಶ್‌ ಗುಣೇಶ್ವರನ್‌ ಗೆಲುವು ಸಾಧಿಸಿ 2ನೇ ಅರ್ಹತಾ ಸುತ್ತು ಪ್ರವೇಶಿಸಿದ್ದಾರೆ.

ಇಂದಿನಿಂದ ಫ್ರೆಂಚ್ ಓಪನ್ ಟೆನಿಸ್ ಟೂರ್ನಿ ಆರಂಭ

ಪುರುಷರ ಸಿಂಗಲ್ಸ್‌ ವಿಭಾಗದ ಮೊದಲ ಅರ್ಹತಾ ಸುತ್ತಿನ ಪಂದ್ಯದಲ್ಲಿ ಸುಮಿತ್‌, ಜರ್ಮನಿ-ಜಮೈಕಾದ ಡಸ್ಟಿನ್‌ ಬ್ರೌನ್‌ ವಿರುದ್ಧ 7-6, 7-5 ಸೆಟ್‌ಗಳಲ್ಲಿ ಸೋಲು ಅನುಭವಿಸಿದರು. ಮತ್ತೊಂದು ಅರ್ಹತಾ ಸುತ್ತಿನ ಪಂದ್ಯದಲ್ಲಿ ಭಾರತದ ಪ್ರಜ್ನೇಶ್‌, ಟರ್ಕಿಯ ಟೆನಿಸಿಗ ಸೆಮ್‌ ಇಲ್ಕೆಲ್‌ ವಿರುದ್ಧ 6-3, 6-1 ಸೆಟ್‌ಗಳಲ್ಲಿ ಜಯ ಸಾಧಿಸಿದರು. ಇದರೊಂದಿಗೆ ಪ್ರಜ್ನೇಶ್‌ 2ನೇ ಅರ್ಹತಾ ಸುತ್ತಿಗೆ ಲಗ್ಗೆ ಇಟ್ಟರು.

ಐವರಿಗೆ ಸೋಂಕು:

ಅರ್ಹತಾ ಸುತ್ತಿನಲ್ಲಿದ್ದ ಇಬ್ಬರು ಟೆನಿಸಿಗರು, ಒಬ್ಬರು ಕೋಚ್‌ ಸೇರಿದಂತೆ ಐವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಈ ಕಾರಣದಿಂದಾಗಿ ಆ ಐವರನ್ನು ಟೂರ್ನಿಯಿಂದ ಹೊರಗಿಡಲಾಗಿದೆ ಎಂದು ಫ್ರೆಂಚ್‌ ಟೆನಿಸ್‌ ಫೆಡರೇಷನ್‌ ಹೇಳಿದೆ. ಐವರು ಸೋಂಕಿತರಿಗೆ 7 ದಿನಗಳ ಕಾಲ ಐಸೋಲೇಷನ್‌ನಲ್ಲಿ ಚಿಕಿತ್ಸೆ ನೀಡಲಾಗುವುದು ಎಂದು ಸಂಸ್ಥೆ ಹೇಳಿದೆ.