ಪ್ಯಾರಿಸ್(ಅ.12): ಕ್ಲೇ ಕೋರ್ಟ್ ಕಿಂಗ್, ವಿಶ್ವ ನಂ.2 ಸ್ಪೇನ್‌ನ ರಾಫೆಲ್ ನಡಾಲ್ ದಾಖಲೆಯ 13 ಬಾರಿ ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲಾಮ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಈ ಜಯದೊಂದಿಗೆ ರಾಫೆಲ್, ಸ್ವಿಜರ್‌ಲೆಂಡ್‌ನ ರೋಜರ್ ಫೆಡರರ್ (20 ಗ್ರ್ಯಾನ್‌ಸ್ಲಾಮ್) ದಾಖಲೆಯನ್ನು ಸರಿಗಟ್ಟಿದ್ದಾರೆ. 

ಒಂದೂ ಸೆಟ್‌ನಲ್ಲಿ ಹಿನ್ನಡೆ ಅನುಭವಿಸದೇ 4 ಗ್ರ್ಯಾನ್ ಸ್ಲಾಮ್ ಟ್ರೋಫಿ ಗೆದ್ದ ಮೊದಲ ಟೆನಿಸಿಗ ಎಂಬ ದಾಖಲೆಯನ್ನು ರಾಫೆಲ್ ನಿರ್ಮಿಸಿದ್ದಾರೆ. ಭಾನುವಾರ ಇಲ್ಲಿ ನಡೆದ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ರಾಫೆಲ್, ವಿಶ್ವ ನಂ.1 ಸರ್ಬಿಯಾದ ನೊವಾಕ್ ಜೋಕೋವಿಚ್ ಎದುರು 6-0, 6-2, 7-5 ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು.

2 ಗಂಟೆ 41 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ನಡಾಲ್ ಪ್ರಬಲ ಸರ್ವ್‌ಗಳಿಗೆ, ಜೋಕೋವಿಚ್ ನಿರುತ್ತರರಾದರು. 2018ರಲ್ಲಿ ರೋಜರ್ ಫೆಡರರ್, ಆಸ್ಟ್ರೇಲಿಯನ್ ಓಪನ್ ಪುರುಷರ ಸಿಂಗಲ್‌ಸ್ ಫೈನಲ್‌ನಲ್ಲಿ ಮರಿನ್ ಸಿಲಿಕ್ ವಿರುದ್ಧ ಗೆದ್ದು 20 ಗ್ರ್ಯಾನ್‌ಸ್ಲಾಮ್ ಗೆದ್ದ ಮೊದಲ ಪುರುಷ ಆಟಗಾರ ಎನಿಸಿದ್ದರು. ಫೆಡರರ್ ಖಾತೆಯಲ್ಲಿ 6 ಆಸ್ಟ್ರೇಲಿಯನ್ ಓಪನ್, 1 ಫ್ರೆಂಚ್ ಓಪನ್, 8 ವಿಂಬಲ್ಡನ್ ಹಾಗೂ 5 ಯುಎಸ್ ಓಪನ್ ಟ್ರೋಫಿಗಳಿವೆ.

ಫ್ರೆಂಚ್ ಓಪನ್: ಇಗಾ ಸ್ವಿಟೆಕ್ ಚಾಂಪಿಯನ್..!

34 ವರ್ಷದ ನಡಾಲ್ 2005ರಲ್ಲಿ ಮೊದಲ ಗ್ರ್ಯಾನ್ ಸ್ಲಾಮ್ ಗೆದ್ದರು. ನಡಾಲ್ ಖಾತೆಯಲ್ಲಿ 1 ಆಸ್ಟ್ರೇಲಿಯನ್ ಓಪನ್, 13 ಫ್ರೆಂಚ್ ಓಪನ್, 2 ವಿಂಬಲ್ಡನ್ ಹಾಗೂ 4 ಯುಎಸ್ ಓಪನ್ ಪ್ರಶಸ್ತಿಗಳಿವೆ. ಸಿಂಗಲ್ಸ್ ವಿಭಾಗದಲ್ಲಿ ಪುರುಷ ಅಥವಾ ಮಹಿಳೆಯಾಗಿರಲಿ ಅತಿ ಹೆಚ್ಚು ಬಾರಿ ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲಾಮ್ ಟ್ರೋಫಿ ಗೆದ್ದ ಶ್ರೇಯಕ್ಕೆ ನಡಾಲ್ ಪಾತ್ರರಾಗಿದ್ದಾರೆ. ಮಾರ್ಗರೇಟ್ ಕೋರ್ಟ್ಸ್‌ 11 ಬಾರಿ ಆಸ್ಟ್ರೇಲಿಯನ್ ಓಪನ್ ಗೆದ್ದಿದ್ದು ನಡಾಲ್ ನಂತರದ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ ಮಾರ್ಟಿನಾ ನವ್ರಾಟಿಲೋವಾ 9 ವಿಂಬಲ್ಡನ್ 3ನೇ ಸ್ಥಾನದಲ್ಲಿದ್ದರೆ, ರೋಜರ್ ಫೆಡರರ್ 8 ವಿಂಬಲ್ಡನ್ ಹಾಗೂ ನೊವಾಕ್ ಜೋಕೋವಿಚ್ 8 ಆಸ್ಟ್ರೇಲಿಯನ್ ಓಪನ್ 4ನೇ ಸ್ಥಾನದಲ್ಲಿದ್ದಾರೆ. ಒಟ್ಟಾರೆ ಅತಿ ಹೆಚ್ಚು ಗ್ರ್ಯಾನ್‌ಸ್ಲಾಮ್ ಗೆದ್ದವರಲ್ಲಿ ಆಸ್ಟ್ರೇಲಿಯಾದ ಮಾರ್ಗರೇಟ್ ಕೋರ್ಟ್ (24) ಮೊದಲಿಗರಾಗಿದ್ದರೆ, ಅಮೆರಿಕದ ಸೆರೆನಾ ವಿಲಿಯಮ್ಸ್ (23) 2ನೇ ಸ್ಥಾನ, ಜರ್ಮನಿಯ ಸ್ಟೆಫಿ ಗ್ರಾಫ್ (22) 3ನೇ ಸ್ಥಾನದಲ್ಲಿದ್ದರೆ, ಸ್ವಿಜರ್‌ಲೆಂಡ್‌ನ ರೋಜರ್ ಫೆಡರರ್ (20), ಸ್ಪೇನ್‌ನ ರಾಫೆಲ್ ನಡಾಲ್ (20) ಜಂಟಿ 4ನೇ ಸ್ಥಾನದಲ್ಲಿದ್ದಾರೆ.