ಪ್ಯಾರಿಸ್‌(ಸೆ.21): ಟೆನಿಸ್‌ ಅಭಿಮಾನಿಗಳು ಬಹು ಕಾತುರದಿಂದ ಕಾಯುತ್ತಿದ್ದ ಫ್ರೆಂಚ್‌ ಓಪನ್‌ ಗ್ರ್ಯಾನ್‌ಸ್ಲಾಮ್‌ ಕೊರೋನಾ ಭೀತಿ ನಡುವೆಯೂ ಸೋಮವಾರದಿಂದ ಆರಂಭಗೊಳ್ಳಲಿದ್ದು, ಅ.11ರ ವರೆಗೂ ನಡೆಯಲಿದೆ. 

ಆವೆ ಮಣ್ಣಿನ ಅಂಕಣದಲ್ಲಿ ನಡೆಯುತ್ತಿರುವ 124ನೇ ಆವೃತ್ತಿಯ ಫ್ರೆಂಚ್‌ ಓಪನ್‌ ವಿಶ್ವದ ತಾರಾ ಟೆನಿಸಿಗರು ಪಾಲ್ಗೊಳ್ಳಲಿದ್ದಾರೆ. ಆವೆ ಮಣ್ಣಿನ ಅಂಕಣದ ಒಡೆಯ ಎಂದೇ ಖ್ಯಾತರಾಗಿರುವ ಸ್ಪೇನ್‌ನ ರಾಫೆಲ್‌ ನಡಾಲ್‌ ಈಗಾಗಲೇ 12 ಬಾರಿ ಫ್ರೆಂಚ್‌ ಓಪನ್‌ ಗೆದ್ದಿದ್ದು, ದಾಖಲೆಯ 13ನೇ ಗ್ರ್ಯಾನ್‌ ಸ್ಲಾಮ್‌ ಮೇಲೆ ಕಣ್ಣಿಟ್ಟಿದ್ದಾರೆ.

ಜತೆಗೆ ವಿಶ್ವ ನಂ.1 ಸರ್ಬಿಯಾದ ನೊವಾಕ್‌ ಜೋಕೋವಿಚ್‌, 2020ರ ಯುಎಸ್‌ ಚಾಂಪಿಯನ್‌ ಆಸ್ಟ್ರಿಯಾದ ಡೊಮಿನಿಕ್‌ ಥೀಮ್‌, ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೆವ್‌, ಬ್ರಿಟನ್‌ನ ಆ್ಯಂಡಿ ಮರ್ರೆ ಪುರುಷರ ಸಿಂಗಲ್ಸ್‌ನಲ್ಲಿ ಸೆಣಸಾಟ ನಡೆಸಲಿದ್ದಾರೆ. ರೋಮೇನಿಯಾದ ಸಿಮೋನಾ ಹಾಲೆಪ್‌, ಕರೋಲಿನಾ ಪ್ಲಿಸ್ಕೋವಾ, ಸೆರೆನಾ ವಿಲಿಯಮ್ಸ್‌ ಮಹಿಳಾ ವಿಭಾಗದ ಫೆವರಿಟ್‌ ಆಗಿದ್ದಾರೆ. ಇತ್ತೀಚೆಗಷ್ಟೇ ಕೊನೆಗೊಂಡ ಅಮೆರಿಕಾ ಓಪನ್‌ ಟೂರ್ನಿಯ ಮಹಿಳಾ ಚಾಂಪಿಯನ್‌ ಆಗಿದ್ದ ಜಪಾನ್‌ ನವೊಮಿ ಒಸಾಕ ಗಾಯದ ಸಮಸ್ಯೆಯಿಂದ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ.

ಫ್ರೆಂಚ್‌ ಓಪನ್ 2020‌: ಆ್ಯಂಡಿ ಮರ್ರೆಗೆ ವೈಲ್ಡ್‌ ಕಾರ್ಡ್‌ ಪ್ರವೇಶ

5000 ಪ್ರೇಕ್ಷಕರಿಗೆ ಅವಕಾಶ

ಕೊರೋನಾ ಕಾರಣದಿಂದ ಮೇ 24ರಿಂದ ಆರಂಭವಾಗಬೇಕಿದ್ದ ಫ್ರೆಂಚ್‌ ಓಪನ್‌, ಸೆ.21ಕ್ಕೆ ಮುಂದೂಡಿಕೆಗೊಂಡಿತ್ತು. ಆ.31ರಿಂದ ಸೆ.14ರ ವರೆಗೆ ನಡೆದ ಯುಎಸ್‌ ಓಪನ್‌ ಖಾಲಿ ಕ್ರೀಡಾಂಗಣದಲ್ಲಿ ನಡೆದಿತ್ತು. ಆದರೆ ಫ್ರೆಂಚ್‌ ಓಪನ್‌ಗೆ 5000 ಪ್ರೇಕ್ಷಕರಿಗೆ ಪಂದ್ಯವೀಕ್ಷಣೆಗೆ ಅವಕಾಶ ನೀಡಲು ಆಯೋಜಕರು ಒಪ್ಪಿದ್ದಾರೆ. ಈ ಮೊದಲು 11,500 ಮಂದಿಗೆ ಅವಕಾಶ ನೀಡಲು ನಿರ್ಧರಿಸಿತ್ತು.