ಫ್ರೆಂಚ್ ಓಪನ್ ಟೆನಿಸ್: ಆ್ಯಂಜಿಲಿಕ್ ಕೆರ್ಬೆರ್‌ಗೆ ಮೊದಲ ಸುತ್ತಿನಲ್ಲೇ ಆಘಾತ!
* ಫ್ರೆಂಚ್ ಓಪನ್ ಟೆನಿಸ್ ಗ್ರ್ತಾನ್‌ಸ್ಲಾಂನಲ್ಲಿ ಮೊದಲ ದಿನವೇ ಅಚ್ಚರಿಯ ಫಲಿತಾಂಶ
* ಮೊದಲ ಸುತ್ತಿನಲ್ಲೇ ಹೊರಬಿದ್ದ ಜರ್ಮನ್ ಟೆನಿಸ್ ಆಟಗಾರ್ತಿ ಆ್ಯಂಜಿಲಿಕ್ ಕೆರ್ಬೆರ್
* ಸುಲಭವಾಗಿ ಎರಡನೇ ಸುತ್ತು ಪ್ರವೇಶಿದ ಜಪಾನ್‌ನ ನವೊಮಿ ಒಸಾಕ
ಪ್ಯಾರಿಸ್(ಮೇ.31): 3 ಬಾರಿ ಗ್ರ್ಯಾನ್ ಸ್ಲಾಂ ಚಾಂಪಿಯನ್, ಮಾಜಿ ನಂ.1 ಟೆನಿಸ್ ಆಟಗಾರ್ತಿ, ಜರ್ಮನಿಯ ಆ್ಯಂಜಿಲೆಕ್ ಕೆರ್ಬೆರ್ ಫ್ರೆಂಚ್ ಓಪನ್ ಮೊದಲ ಸುತ್ತಿನಲ್ಲೇ ಸೋತು ಆಘಾತ ಅನುಭವಿಸಿದ್ದಾರೆ. ಇನ್ನು ಮತ್ತೊಂದು ಪಂದ್ಯದ ಪುರುಷರ ಸಿಂಗಲ್ಸ್ ವಿಭಾಗದಲ್ಲಿ 4 ಶ್ರೇಯಾಂಕಿತ ಆಟಗಾರ ಡೋಮಿನಿಕ್ ಥಿಮ್ ಸಹಾ ಮೊದಲ ಸುತ್ತಿನಲ್ಲೇ ಆಘಾತಕಾರಿ ಸೋಲು ಕಂಡು ನಿರಾಸೆ ಅನುಭವಿಸಿದ್ದಾರೆ.
ಮಹಿಳಾ ಸಿಂಗಲ್ಸ್ ಪಂದ್ಯದಲ್ಲಿ ಆ್ಯಂಜಿಲಿಕ್, ಉಕ್ರೇನ್‌ನ ಯುವ ಆಟಗಾರ್ತಿ ಆನ್ಹೆಲಿನಾ ಕಲಿನಿನಾ ವಿರುದ್ಧ 2-6, 4-6 ಸೆಟ್‌ಗಳಲ್ಲಿ ಸೋಲುಂಡರು. 2016ರಲ್ಲಿ ಆಸ್ಪ್ರೇಲಿಯನ್ ಓಪನ್ ಹಾಗೂ ಯುಎಸ್ ಓಪನ್ ಗೆದ್ದಿದ್ದ ಕೆರ್ಬೆರ್, 2018ರಲ್ಲಿ ವಿಂಬಲ್ಡನ್ ಜಯಿಸಿದ್ದರು. ಫ್ರೆಂಚ್ ಓಪನ್ ಟ್ರೋಫಿ ಗೆಲ್ಲಲು ಜರ್ಮನ್ ಆಟಗಾರ್ತಿಗೆ ಇದುವರೆಗೂ ಸಾಧ್ಯವಾಗಿಲ್ಲ. ಅಲ್ಲದೇ, ಸತತ 3ನೇ ವರ್ಷ ಅವರು ಮೊದಲ ಸುತ್ತಿನಲ್ಲೇ ಸೋಲು ಕಂಡಿದ್ದಾರೆ.
ಫ್ರೆಂಚ್ ಓಪನ್ ಟೆನಿಸ್ ಸ್ಟೇಡಿಯಂನಲ್ಲಿ ನಡಾಲ್‌ರ 9 ಅಡಿ ಎತ್ತರದ ಪ್ರತಿಮೆ!
ಡೋಮಿನಿಕ್ ಥಿಮ್, ಸ್ಪೇನ್‌ನ ಅನುಭವಿ ಆಟಗಾರ ಪಾಬ್ಲೋ ಅಂಜುರ್ ಎದುರು 4-6, 5-7, 6-3, 6-4, 6-4 ಸೆಟ್‌ಗಳ ಅಂತರದ ಸೋಲು ಕಂಡರು. ಸುಮಾರು ನಾಲ್ಕುವರೆ ಗಂಟೆಗಳ ಕಾಲ ನಡೆದ ಕಾದಾಟದಲ್ಲಿ ಅಸ್ಟ್ರೀಯಾದ ಟೆನಿಸ್ ಆಟಗಾರ ಮೊದಲ ಸುತ್ತಿನಲ್ಲೇ ಆಘಾತಕಾರಿ ಸೋಲು ಕಂಡರು. 2015ರ ಬಳಿಕ ಇದೇ ಮೊದಲ ಬಾರಿಗೆ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಕನಿಷ್ಟ ಕ್ವಾರ್ಟರ್ ಫೈನಲ್ ಪ್ರವೇಶಿಸಲು ವಿಫಲರಾಗಿದ್ದಾರೆ.
ಇದೇ ವೇಳೆ 2ನೇ ಶ್ರೇಯಾಂಕಿತೆ, ಜಪಾನ್‌ನ ನವೊಮಿ ಒಸಾಕ ಮೊದಲ ಸುತ್ತಿನಲ್ಲಿ ರೊಮೇನಿಯಾದ ಪ್ಯಾಟ್ರಿಕಾ ಮರಿಯಾ ವಿರುದ್ಧ 6-4, 7-6 ಸೆಟ್‌ಗಳಲ್ಲಿ ಗೆದ್ದು 2ನೇ ಸುತ್ತಿಗೇರಿದರು.