ಫ್ರೆಂಚ್ ಓಪನ್: ದ್ವಿತೀಯ ಸುತ್ತಿಗೇರಿದ ಸೈನಾ
ಫ್ರೆಂಚ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತಕ್ಕೆ ಮಿಶ್ರಫಲ ಎದುರಾಗಿದೆ. ಪಿ.ವಿ ಸಿಂಧು, ಸೈನಾ ನೆಹ್ವಾಲ್ ಎರಡನೇ ಸುತ್ತಿಗೆ ಲಗ್ಗೆಯಿಟ್ಟರೆ, ಕಶ್ಯಪ್, ಸಮೀರ್ ವರ್ಮಾ, ಶ್ರೀಕಾಂತ್ ಹೋರಾಟ ಅಂತ್ಯವಾಗಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಪ್ಯಾರಿಸ್ (ಫ್ರಾನ್ಸ್): ಫ್ರೆಂಚ್ ಓಪನ್ ಬ್ಯಾಡ್ಮಿಂಟನ್ ಟೂರ್ನಿ ಮೊದಲ ಸುತ್ತಿನಲ್ಲಿಯೇ ಭಾರತಕ್ಕೆ ಮಿಶ್ರ ಪ್ರತಿಫಲ ಎದುರಾಗಿದೆ. ಸೈನಾ ನೆಹ್ವಾಲ್ ಎರಡನೇ ಸುತ್ತಿಗೇರಿದರೆ, ಕಿದಂಬಿ ಶ್ರೀಕಾಂತ್, ಪಾರುಪಳ್ಳಿ ಕಶ್ಯಪ್ ಹಾಗೂ ಸಮೀರ್ ವರ್ಮಾ ಆಘಾತಕಾರಿ ಸೋಲು ಕಂಡ ಟೂರ್ನಿಯಿಂದ ಹೊರಬಿದ್ದಿದ್ದಾರೆ.
ಬುಧವಾರ ಇಲ್ಲಿ ನಡೆದ ವನಿತೆಯರ ಸಿಂಗಲ್ಸ್ ವಿಭಾಗದಲ್ಲಿ ಹಾಂಕಾಂಗ್’ನ ಚೆಂಗ್ ಎನ್’ಗಾನ್ ಯಿ ಅವರನ್ನು ಸೈನಾ ಮಣಿಸಿದರು. ರೋಚಕತೆಯಿಂದ ಕೂಡಿದ್ದ ಮೊದಲ ಸುತ್ತಿನ ಪಂದ್ಯದಲ್ಲಿ 23-21, 21-17 ನೇರ ಗೇಮ್’ಗಳಿಂದ ಸೈನಾ ಜಯಿಸಿದ್ದು, ಪ್ರಯಾಸದಿಂದ ಶುಭಾರಂಭ ಮಾಡಿದ್ದಾರೆ.
ಪುರುಷರಿಗೆ ನಿರಾಸೆ:
ಇನ್ನು ಪುರುಷರ ಸಿಂಗಲ್ಸ್ ಪಂದ್ಯಗಳಲ್ಲಿ ಕಿದಂಬಿ ಶ್ರೀಕಾಂತ್, ಪಾರುಪಳ್ಳಿ ಕಶ್ಯಪ್ ಹಾಗೂ ಸಮೀರ್ ವರ್ಮಾ ಪರಾಭವಗೊಂಡರು.
ಚೈನೀಸ್ ತೈಪೆಯ ಚೌ ಟಿನ್ ಚೆನ್ ವಿರುದ್ಧ 21-15, 7-21, 14-21 ಗೇಮ್‌ಗಳಿಂದ ಶ್ರೀಕಾಂತ್ ಸೋಲುಂಡರೆ, ಹಾಂಕಾಂಗ್‌ನ ಲಾಂಗ್ ಆಂಗುಸ್ ವಿರುದ್ಧ ಕಶ್ಯಪ್ 11-21, 9-21 ನೇರ ಗೇಮ್‌ಗಳಲ್ಲಿ ಸೋಲೊಪ್ಪಿಕೊಂಡರು. ಜಪಾನ್ ಶಟ್ಲರ್ ಕೆಂಟಾ ನಿಶಿಮೊಟೊ 22-20, 18-21, 18-21ರಲ್ಲಿ ಸಮೀರ್ ಅವರನ್ನು ಮಣಿಸಿದರು.
ಮಿಶ್ರ ಡಬಲ್ಸ್‌ನ ಮೊದಲ ಸುತ್ತಿನಲ್ಲೇ ಅಶ್ವಿನಿ ಪೊನ್ನಪ್ಪ ಹಾಗೂ ಸಾತ್ವಿಕ್ ಸಾಯಿರಾಜ್ ಜೋಡಿ ಸಹ ಸೋಲುಂಡು ಹೊರಬಿದ್ದಿತು. ಪುರುಷರ ಸಿಂಗಲ್ಸ್‌ನಲ್ಲಿ ಶುಭಾಂಕರ್ ಡೇ ಹಾಗೂ ಮಹಿಳಾ ಸಿಂಗಲ್ಸ್‌ನಲ್ಲಿ ಪಿ.ವಿ.ಸಿಂಧು 2ನೇ ಸುತ್ತು ಪ್ರವೇಶಿಸಿದ್ದಾರೆ.