ಭಾರತದ ಮಾಜಿ ಫುಟ್ಬಾಲಿಗ ಕಾರ್ಲಟನ್ ಚಾಪ್‌ಮನ್ ನಿಧನ..!
ಭಾರತ ಫುಟ್ಬಾಲ್ ತಂಡದ ಮಾಜಿ ನಾಯಕ ಕಾರ್ಲಟನ್ ಚಾಪ್‌ಮನ್ (49) ಹೃದಾಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಬೆಂಗಳೂರು(ಅ.13): ಭಾರತದ ಫುಟ್ಬಾಲ್ ತಂಡದ ಮಾಜಿ ನಾಯಕ ಕರ್ನಾಟಕದ ಕಾರ್ಲಟನ್ ಚಾಪ್‌ಮನ್ (49) ಸೋಮವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಬೆಂಗಳೂರಿನಲ್ಲಿ ನೆಲೆಸಿದ್ದ ಚಾಪ್‌ಮನ್ ಭಾನುವಾರ ರಾತ್ರಿ ಬೆನ್ನುಹುರಿ ನೋವು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದರು.
ತಾರಾ ಫುಟ್ಬಾಲಿಗ ಬೈಚುಂಗ್ ಭುಟಿಯಾ ಮತ್ತು ಐ.ಎಂ. ವಿಜಯನ್ ಅವರೊಂದಿಗೆ ಭಾರತ ತಂಡದಲ್ಲಿ ಚಾಪ್‌ಮನ್ ಆಡಿದ್ದರು. 1990ರ ದಶಕದಲ್ಲಿ ಭಾರತ ಫುಟ್ಬಾಲ್ ತಂಡದಲ್ಲಿ ಚಾಪ್‌ಮನ್ ಮಿಡ್ ಫೀಲ್ಡರ್ ವಿಭಾಗದಲ್ಲಿ ಮಿಂಚಿನ ಸಂಚಲನ ಮೂಡಿಸಿದ್ದರು. 1995 ರಿಂದ 2001 ರವರೆಗೆ ಚಾಪ್ ಮನ್ ರಾಷ್ಟ್ರೀಯ ತಂಡದಲ್ಲಿ ಆಡಿದ್ದರು. 1997ರಲ್ಲಿ ಸ್ಯಾಫ್ ಕಪ್ ಗೆದ್ದ ಭಾರತ ಫುಟ್ಬಾಲ್ ತಂಡವನ್ನು ಚಾಪ್‌ಮನ್ ಮುನ್ನಡೆಸಿದ್ದರು.
'ಫ್ರೆಂಚ್ ಕಿಂಗ್' ನಡಾಲ್ ಹೊಸ ದಾಖಲೆ..!
1980ರಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರದ ಬೆಂಗಳೂರು ಕೇಂದ್ರ ಸೇರಿದ್ದ ಚಾಪ್‌ಮನ್ ಸದರ್ನ್ ಬ್ಲೂಸ್‌ನಲ್ಲಿ ಕೆಲಕಾಲ ಆಡಿದ್ದರು. ನಂತರ 1990ರಲ್ಲಿ ಟಾಟಾ ಫುಟ್ಬಾಲ್ ಅಕಾಡೆಮಿಯಲ್ಲಿ ತರಬೇತಿ ಪೂರೈಸಿ, 1993ರಲ್ಲಿ ಈಸ್ಟ್ ಬೆಂಗಾಲ್ ಫುಟ್ಬಾಲ್ ತಂಡ ಸೇರಿದರು. ಆ ವರ್ಷವೇ ಏಷ್ಯನ್ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ಇರಾಕ್‌ನ ಅಲ್ ಜವ್ರಾ ತಂಡದ ಎದುರಿನ ಪಂದ್ಯದಲ್ಲಿ ಹ್ಯಾಟ್ರಿಕ್ ಗೋಲುಗಳಿಸಿ ಈಸ್ಟ್ ಬೆಂಗಾಲ್‌ಗೆ 6-2ರಿಂದ ಜಯ ತಂದುಕೊಟ್ಟಿದ್ದರು.
1995ರಲ್ಲಿ ಚಾಪ್‌ಮನ್ ಜೆಸಿಟಿ ಮಿಲ್ಸ್ ಫುಟ್ಬಾಲ್ ತಂಡ ಸೇರಿದರು. 1996ರ ಉದ್ಘಾಟನಾ ರಾಷ್ಟ್ರೀಯ ಫುಟ್ಬಾಲ್ ಲೀಗ್ ಸೇರಿದಂತೆ ಜೆಸಿಟಿ ಮಿಲ್ಸ್‌ಗೆ 14 ಟ್ರೋಫಿಗಳನ್ನು ಗೆದ್ದುಕೊಟ್ಟ ಹೆಗ್ಗಳಿಕೆ ಚಾಪ್ ಮನ್‌ಗೆ ಸಲ್ಲುತ್ತದೆ. ಈಸ್ಟ್ ಬೆಂಗಾಲ್ ತಂಡ, ಚಾಪ್‌ಮನ್ ನಾಯಕತ್ವದಲ್ಲಿ 2001ರಲ್ಲಿ ರಾಷ್ಟ್ರೀಯ ಫುಟ್ಬಾಲ್ ಲೀಗ್ ಪ್ರಶಸ್ತಿ ಗೆದ್ದುಕೊಂಡಿತು. ಅದೇ ವರ್ಷ ಚಾಪ್‌ಮನ್ ನಿವೃತ್ತಿ ಘೋಷಿಸಿದರು. ಆ ಬಳಿಕ ಚಾಪ್ ಮನ್ ಹಲವು ಫುಟ್ಬಾಲ್ ಅಕಾಡೆಮಿಗಳಿಗೆ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು.