ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಲಕ್ಷ್ಯ ಸೇನ್ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿದರೂ, ಫಲಿತಾಂಶವನ್ನು ಡಿಲೀಟ್ ಮಾಡಲಾಗಿದೆ. ಯಾಕೆ ಹೀಗೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ
ಪ್ಯಾರಿಸ್: ಭಾರತದ ತಾರಾ ಶಟ್ಲರ್ ಲಕ್ಷ್ಯ ಸೇನ್, ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಶುಭಾರಂಭ ಮಾಡಿದ್ದರು. ಪುರುಷರ ಸಿಂಗಲ್ಸ್‌ನ ಗ್ರೂಪ್ 'ಎಲ್'ನಲ್ಲಿ ಲಕ್ಷ್ಯ ಸೇನ್, ಗ್ವಾಂಟೆಮಾಲಾದ ಕೆವಿನ್ ಕಾರ್ಡನ್ ಎದುರು ಅದ್ಭುತ ಪ್ರದರ್ಶನ ತೋರುವ ಮೂಲಕ ಗೆಲುವಿನ ನಗೆ ಬೀರಿದ್ದರು. ಆದರೆ ಇದೀಗ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದ ಆಯೋಜಕರು ಲಕ್ಷ್ಯ ಸೇನ್ ಗೆಲುವನ್ನು ಅಳಿಸಿ ಹಾಕಿದ್ದಾರೆ.
ಅರೇ ಇದೇನಾಯ್ತು ಅಂತೀರಾ. ಹೌದು, ಲಕ್ಷ್ಯ ಸೇನ್ ಎದುರು ಸೋಲುಂಡ ಗ್ವಾಂಟೆಮಾಲಾದ ಶಟ್ಲರ್ ಕಾರ್ಡನ್, ಎಡ ಮೊಣಕೈ ಗಾಯಕ್ಕೆ ತುತ್ತಾಗಿದ್ದು, ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಿಂದಲೇ ಹೊರಬಿದ್ದಿದ್ದಾರೆ, ಹೀಗಾಗಿ ಲಕ್ಷ್ಯ ಸೇನ್ ಅವರ ಗೆಲುವನ್ನು ಡಿಲೀಟ್ ಮಾಡಲಾಗಿದೆ ಎಂದು ಒಲಿಂಪಿಕ್.ಕಾಂ ವರದಿ ಮಾಡಿದೆ.
ಗ್ವಾಂಟೆಮಾಲಾದ ಕೆವಿನ್ ಕಾರ್ಡನ್ 'ಎಲ್' ಗುಂಪಿನಲ್ಲಿ ಇಂಡೋನೇಷ್ಯಾದ ಜೋನಾಥನ್ ಕ್ರಿಸ್ಟೀ ಹಾಗೂ ಬೆಲ್ಜಿಯಂನ ಜ್ಯೂಲಿನ್ ಕ್ಯಾರಗ್ಗಿ ಎದುರು ಆಡಬೇಕಿತ್ತು. ಈ ಇಬ್ಬರ ಎದುರು ಕಾರ್ಡನ್ ಆಡದ ಹಿನ್ನೆಲೆಯಲ್ಲಿ, ಇದು ಗ್ರೂಪ್ ಹಂತದ ಪಂದ್ಯಾವಳಿ ಆಗಿರುವುದರಿಂದ ಬಿಡಬ್ಲ್ಯೂಎಫ್ ನಿಯಮಾವಳಿಗಳ ಪ್ರಕಾರ ಲಕ್ಷ್ಯ ಸೇನ್ ಅವರ ಗೆಲುವನ್ನು ಅಳಿಸಿ ಹಾಕಲಾಯಿತು.
ಒಲಿಂಪಿಕ್ಸ್ ಕಂಚು ಗೆಲ್ಲಲು ಮನು ಭಾಕರ್ ಮೇಲೆ ಕೇಂದ್ರ ಸರ್ಕಾರ ಖರ್ಚು ಮಾಡಿದ್ದು ಬರೋಬ್ಬರಿ ₹2 ಕೋಟಿ..!
ಇದೀಗ ಇಂದು ಅಂದರೆ ಜುಲೈ 29ರಂದು ಲಕ್ಷ್ಯ ಸೇನ್, ಬೆಲ್ಜಿಯಂನ ಜ್ಯೂಲಿನ್ ಕ್ಯಾರಗ್ಗಿ ಎದುರು ಕಾದಾಡಲಿದ್ದಾರೆ. ಈ ಮೊದಲು ಶನಿವಾರ ನಡೆದ ಮೊದಲ ಪಂದ್ಯದಲ್ಲಿ ಲಕ್ಷ್ಯ ಸೇನ್, ಕೆವಿನ್ ಕಾರ್ಡನ್ ಎದುರು 21-8, 22-20 ಅಂತರದ ನೇರ ಗೇಮ್‌ಗಳಲ್ಲಿ ಗೆಲುವು ಸಾಧಿಸಿದ್ದರು. ಕೇವಲ 42 ನಿಮಿಷಗಳ ಕಾಲ ನಡೆದ ಕಾದಾಟದಲ್ಲಿ ಭಾರತದ ಶಟ್ಲರ್ ಗೆಲುವಿನ ನಗೆ ಬೀರಿದ್ದರು.
