ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್: ಸಿಂಧು, ಸಮೀರ್ ವರ್ಮಾ ಕ್ವಾರ್ಟರ್ ಫೈನಲ್‌ಗೆ ಲಗ್ಗೆ
* ಡೆನ್ಮಾರ್ಕ್ ಓಪನ್ ಟೂರ್ನಿಯಲ್ಲಿ ಮಿಂಚಿನ ಪ್ರದರ್ಶನ ತೋರಿದ ಸಿಂಧು, ಸಮೀರ್
* ವಿಶ್ವದ 3ನೇ ಶ್ರೇಯಾಂಕಿತ ಆಟಗಾರನೆದುರು ಸಮೀರ್ ವರ್ಮಾಗೆ ಗೆಲುವು
* ಥಾಯ್ಲೆಂಡ್ ಆಟಗಾರ್ತಿ ಎದುರು ಗೆದ್ದು ಕ್ವಾರ್ಟರ್ ಪ್ರವೇಶಿಸಿದ ಸಿಂಧು
ಒಡೆನ್ಸ್(ಅ.22): ಹಾಲಿ ವಿಶ್ವ ಚಾಂಪಿಯನ್ ಪಿ.ವಿ.ಸಿಂಧು (PV Sindhu) ಹಾಗೂ ಸಮೀರ್ ವರ್ಮಾ (Sameer Verma) ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್ (Denmark Open Badminton) ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಸಾಕಷ್ಟು ಪೈಪೋಟಿಯಿಂದ ಕೂಡಿದ್ದ ಪಂದ್ಯದಲ್ಲಿ ಕೊನೆಗೂ ಗೆಲುವಿನ ನಗೆ ಬೀರುವಲ್ಲಿ ಸಿಂಧು ಯಶಸ್ವಿಯಾಗಿದ್ದಾರೆ.
ಶುಕ್ರವಾರ(ಅ.22) ನಡೆದ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸಮೀರ್ ವರ್ಮಾ ವಿಶ್ವದ ಮೂರನೇ ಶ್ರೇಯಾಂಕಿತ ಆಟಗಾರ ಆಂಡರ್ಸ್ ಆಂಟೋನ್ಸನ್ ವಿರುದ್ದ 21-14, 21-18 ನೇರ ಗೇಮ್‌ಗಳಲ್ಲಿ ಗೆಲುವು ದಾಖಲಿಸುವ ಮೂಲಕ ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಇನ್ನು ಗುರುವಾರ ನಡೆದ ಮಹಿಳಾ ಸಿಂಗಲ್ಸ್‌ನ ಅಂತಿಮ 16ರ ಸುತ್ತಿನ ಪಂದ್ಯದಲ್ಲಿ ವಿಶ್ವದ 7ನೇ ಶ್ರೇಯಾಂಕಿತೆ ಪಿ.ವಿ. ಸಿಂಧು ಥಾಯ್ಲೆಂಡ್‌ನ 13ನೇ ಶ್ರೇಯಾಂಕಿತೆ ಬುಸನನ್ ವಿರುದ್ಧ 21-16, 12-21, 21-15 ಗೇಮ್‌ಗಳಲ್ಲಿ ಗೆಲುವು ಸಾಧಿಸಿದರು. ಬರೋಬ್ಬರಿ 67 ನಿಮಿಷಗಳ ಕಾಲ ನಡೆದ ಸೆಣಸಾಟದಲ್ಲಿ ಕೊನೆಗೂ ಗೆಲುವು ಸಿಂಧು ಪಾಲಾಯಿತು.
ಮೊದಲ ಗೇಮ್‌ನಲ್ಲಿ ಸತತ 8 ಅಂಕಗಳನ್ನು ಕಲೆಹಾಕುವ ಮೂಲಕ ಭರ್ಜರಿ ಮುನ್ನಡೆ ಸಾಧಿಸಿದರು. ಆದರೆ ಎರಡನೇ ಸೆಟ್‌ನಲ್ಲಿ ಥಾಯ್ಲೆಂಡ್‌ನ ಆಟಗಾರ್ತಿ ಬುಸನನ್, ಟೋಕಿಯೋ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆಗೆ ತಿರುಗೇಟು ನೀಡುವಲ್ಲಿ ಯಶಸ್ವಿಯಾದರು. ಆದರೆ ಮೂರನೇ ಸುತ್ತಿನಲ್ಲಿ ತನ್ನೆಲ್ಲಾ ಅನುಭವನ್ನು ಬಳಸಿಕೊಂಡು ಗೆಲುವು ದಾಖಲಿಸುವಲ್ಲಿ ಸಿಂಧು ಯಶಸ್ವಿಯಾದರು. ಕ್ವಾರ್ಟರ್ ಫೈನಲ್‌ನಲ್ಲಿ ಸಿಂಧು ದಕ್ಷಿಣ ಕೊರಿಯಾದ ಅನ್ ಸೆ-ಯಂಗ್ ವಿರುದ್ಧ ಸೆಣಸಲಿದ್ದಾರೆ. ಅನ್ ಸೆ-ಯಂಗ್ ವಿಶ್ವ ಶ್ರೇಯಾಂಕದಲ್ಲಿ 8ನೇ ಸ್ಥಾನ ಹೊಂದಿದ್ದಾರೆ.
ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್ ಟೂರ್ನಿ: ಶುಭಾರಂಭ ಮಾಡಿದ ಸಿಂಧು, ಶ್ರೀಕಾಂತ್
ಟೋಕಿಯೋ ಒಲಿಂಪಿಕ್ಸ್ (Tokyo Olympics) ಮುಕ್ತಾಯದ ಬಳಿಕ ಪಿ.ವಿ. ಸಿಂಧು ಪಾಲ್ಗೊಳ್ಳುತ್ತಿರುವ ಮೊದಲ ಬ್ಯಾಡ್ಮಿಂಟನ್ ಟೂರ್ನಿ ಇದಾಗಿದೆ. ಈ ಟೂರ್ನಮೆಂಟ್‌ಗೂ ಮುನ್ನ ಒಂದು ತಿಂಗಳಿಗೂ ಹೆಚ್ಚು ಕಾಲ ಬಿಡುವು ಪಡೆದುಕೊಂಡಿದ್ದರು. ಇದೀಗ ಸಿಂಧು ಕ್ವಾರ್ಟರ್ ಫೈನಲ್ ಪ್ರವೇಶಿಸುವ ಮೂಲಕ ಕಪ್ ಗೆಲ್ಲಲು ಮತ್ತಷ್ಟು ಹತ್ತಿರವಾಗಿದ್ದಾರೆ.
ಇನ್ನು, ಪುರುಷರ ಸಿಂಗಲ್ಸ್‌ನಲ್ಲಿ ಕಿದಂಬಿ ಶ್ರೀಕಾಂತ್ 2ನೇ ಸುತ್ತಿನಲ್ಲಿ ವಿಶ್ವ ನಂ.1 ಜಪಾನಿನ ಕೆಂಟೊ ಮೊಮೊಟ ವಿರುದ್ಧ 0-2 ಗೇಮ್‌ಗಳಲ್ಲಿ ಸೋತು ಹೊರಬಿದ್ದರು. ಶ್ರೀಕಾಂತ್ ಮೊದಲ ಸುತ್ತಿನಲ್ಲಿ ರೋಚಕ ಪೈಪೋಟಿ ನೀಡಿದರಾದರೂ ಅಂತಿಮವಾಗಿ 21-23, 9-21 ಅಂತರದಲ್ಲಿ ನೇರ ಗೇಮ್‌ಗಳಲ್ಲಿ ಮೊಮೊಟಗೆ ಶರಣಾದರು. ಇದರೊಂದಿಗೆ ಜಪಾನಿನ ಕೆಂಟೊ ಮೊಮೊಟ ಎದುರು ಸತತ 10ನೇ ಬಾರಿಗೆ ಶ್ರೀಕಾಂತ್ ಸೋಲುಂಡರು. ಮಿಶ್ರ ಡಬಲ್ಸ್‌ನಲ್ಲಿ ದ್ರುವ್ ಕಪಿಲಾ-ಸಿಕ್ಕಿ ರೆಡ್ಡಿ ಜೋಡಿ ಹಾಂಕಾಂಗ್ ಜೋಡಿಗೆ ಶರಣಾಯಿತು.
ರಾಷ್ಟ್ರೀಯ ಈಜು: ರಿಧಿಮಾ ಮತ್ತೊಂದು ದಾಖಲೆ
ಬೆಂಗಳೂರು: 37ನೇ ಸಬ್-ಜೂನಿಯರ್ ಹಾಗೂ 47ನೇ ಜೂನಿಯರ್ ರಾಷ್ಟ್ರೀಯ ಈಜು ಚಾಂಪಿಯನ್‌ಶಿಪ್‌ನ 3ನೇ ದಿನವಾದ ಗುರುವಾರ ಕರ್ನಾಟಕದ ರಿಧಿಮಾ ಮತ್ತೊಂದು ರಾಷ್ಟ್ರೀಯ ದಾಖಲೆಯನ್ನು ಮುರಿದಿದ್ದಾರೆ. ಇದಲ್ಲದೇ ಇತರೆ ನಾಲ್ಕು ರಾಷ್ಟ್ರೀಯ ದಾಖಲೆಗಳೂ ನಿರ್ಮಾಣಗೊಂಡವು.
ಕರ್ನಾಟಕ ಸತತ 2ನೇ ದಿನ 25ಕ್ಕೂ ಹೆಚ್ಚು ಪದಕಗಳನ್ನು ಗೆದ್ದಿದ್ದು, ರಾಜ್ಯದ ಜಸ್ ಸಿಂಗ್ ಕೂಟದ ವೈಯಕ್ತಿಕ 5ನೇ ಚಿನ್ನಕ್ಕೆ ಕೊರಲೊಡ್ಡಿದರು. ರಿಧಿಮಾ 50 ಮೀ. ಬ್ಯಾಕ್‌ಸ್ಟ್ರೋಕ್ ಗುಂಪು 2 ವಿಭಾಗದಲ್ಲಿ 29.94 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಒಲಿಂಪಿಯನ್ ಮಾನಾ ಪಟೇಲ್ 2014ರಲ್ಲಿ ಬರೆದಿದ್ದ (30.37 ಸೆ.)ರಾಷ್ಟ್ರೀಯ ದಾಖಲೆಯನ್ನು ಮುರಿದರು.