ಮೆಲ್ಬರ್ನ್(ಫೆ.12)‌: ಆಸ್ಪ್ರೇಲಿಯನ್‌ ಓಪನ್‌ ಗ್ರ್ಯಾನ್‌ ಸ್ಲಾಂ ಟೆನಿಸ್‌ ಟೂರ್ನಿಯ ಮಹಿಳಾ ಸಿಂಗಲ್ಸ್‌ ಹಾಲಿ ಚಾಂಪಿಯನ್‌ ಅಮೆರಿಕದ ಸೋಫಿಯಾ ಕೆನಿನ್‌ 2ನೇ ಸುತ್ತಿನಲ್ಲೇ ಸೋಲುಂಡು ಹೊರಬಿದ್ದಿದ್ದಾರೆ. ಗುರುವಾರ ನಡೆದ 2ನೇ ಸುತ್ತಿನ ಪಂದ್ಯದಲ್ಲಿ ಕೆನಿನ್‌, ಎಸ್ಟೋನಿಯಾದ ಕಯಿಯಾ ಕನೆಪಿ ವಿರುದ್ಧ 3-6, 2-6 ನೇರ ಸೆಟ್‌ಗಳಲ್ಲಿ ಸೋಲು ಕಂಡರು.

2020ರಲ್ಲಿ ಆಸ್ಪ್ರೇಲಿಯನ್‌ ಓಪನ್‌ ಗೆದ್ದಿದ್ದ ಕೆನಿನ್‌, ಫ್ರೆಂಚ್‌ ಓಪನ್‌ನಲ್ಲಿ ರನ್ನರ್‌-ಅಪ್‌ ಆಗಿದ್ದರು. ಯುಎಸ್‌ ಓಪನ್‌ನಲ್ಲಿ 4ನೇ ಸುತ್ತಿನಲ್ಲಿ ಸೋತಿದ್ದರು. ಇದೇ ವೇಳೆ 5ನೇ ಶ್ರೇಯಾಂಕಿತೆ ಸ್ವೀಡನ್‌ನ ಎಲೆನಾ ಸ್ವಿಟೋಲಿನಾ, ಅಮೆರಿಕದ ಕೊಕೊ ಗಾಫ್‌ ವಿರುದ್ಧ ಗೆದ್ದು 3ನೇ ಸುತ್ತಿಗೇರಿದರು.

ಪುರುಷರ ಸಿಂಗಲ್ಸ್‌ನಲ್ಲಿ 2ನೇ ಸುತ್ತಿನಲ್ಲಿ 2ನೇ ಶ್ರೇಯಾಂಕಿತ ಸ್ಪೇನ್‌ನ ರಾಫೆಲ್‌ ನಡಾಲ್‌, ಅಮೆರಿಕದ ಮೈಕಲ್‌ ಮೊಹ್‌ ವಿರುದ್ಧ 6-1, 6-4, 6-2 ಸೆಟ್‌ಗಳಲ್ಲಿ ಸುಲಭವಾಗಿ ಜಯಿಸಿ 3ನೇ ಸುತ್ತಿಗೇರಿದರು. 4ನೇ ಶ್ರೇಯಾಂಕಿತ ಆಟಗಾರ ರಷ್ಯಾದ ಡೇನಿಯಲ್‌ ಮೆಡ್ವೆಡೆವ್‌, 5ನೇ ಶ್ರೇಯಾಂಕಿತ ಗ್ರೀಸ್‌ನ ಸ್ಟೆಫಾನೋ ಟಿಟ್ಸಿಪಾಸ್‌ 3ನೇ ಸುತ್ತಿಗೆ ಪ್ರವೇಶ ಪಡೆದರು.

ಆಸ್ಟ್ರೇಲಿಯನ್ ಓಪನ್‌ ಗ್ರ್ಯಾನ್‌ಸ್ಲಾಂ: 3ನೇ ಸುತ್ತಿಗೇರಿದ ಜೋಕೋ, ಸೆರೆನಾ

ದಿವಿಜ್‌, ಬೋಪಣ್ಣಗೆ ಸೋಲು: ಪುರುಷರ ಡಬಲ್ಸ್‌ ಮೊದಲ ಸುತ್ತಿನಲ್ಲಿ ಭಾರತದ ದಿವಿಜ್‌ ಶರಣ್‌ ಹಾಗೂ ಸ್ಲೋವಾಕಿಯಾದ ಇಗೊರ್‌ ಜೆಲೆನೆ ಜೋಡಿ ಜರ್ಮನಿಯ ಕ್ರಾವಿಟ್ಜ್ ಹಾಗೂ ಹಾನ್ಫ್‌ಮನ್‌ ಜೋಡಿ ವಿರುದ್ಧ 1-6, 4-6 ಸೆಟ್‌ಗಳಲ್ಲಿ ಪರಭಾವಗೊಂಡಿತು.

ಮಹಿಳಾ ಡಬಲ್ಸ್‌ನ ಮೊದಲ ಸುತ್ತಿನಲ್ಲಿ ಭಾರತದ ಅಂಕಿತಾ ರೈನಾ ಹಾಗೂ ರೊಮೇನಿಯಾದ ಮಿಹೆಲಾ ಬುಜಾರ್ನೆಸ್ಕು ಜೋಡಿ ಆಸ್ಪ್ರೇಲಿಯಾದ ವೂಲ್‌ಕಾಕ್‌ ಹಾಗೂ ಗಡೆಕಿ ಜೋಡಿ ವಿರುದ್ಧ 3-6, 0-6 ಸೆಟ್‌ಗಳಲ್ಲಿ ಸೋತು ಹೊರಬಿತ್ತು. ಮಿಶ್ರ ಡಬಲ್ಸ್‌ನಲ್ಲಿ ಭಾರತದ ರೋಹನ್‌ ಬೋಪಣ್ಣ, ಚೀನಾದ ಡುವಾನ್‌ ಯಿಂಗ್‌ಯಿಂಗ್‌ ಜೊತೆ ಕಣಕ್ಕಿಳಿಯಲಿದ್ದಾರೆ.