Davis Cup: ವಿಶ್ವ ಗುಂಪಿಗೆ ಲಗ್ಗೆಯಿಟ್ಟ ಭಾರತ ಟೆನಿಸ್ ತಂಡ
* ಡೇವಿಸ್ ಕಪ್‌ನ ವಿಶ್ವ ಗುಂಪು ಒಂದರ ಪ್ಲೇ ಆಫ್‌ನಲ್ಲಿ ಭಾರತ ಶುಭಾರಂಭ
* ಡೆನ್ಮಾರ್ಕ್ ಎದುರು ಭರ್ಜರಿ ಪ್ರದರ್ಶನ ತೋರಿ ವಿಶ್ವಗುಂಪು 1ಕ್ಕೆ ಅರ್ಹತೆ ಪಡೆದ ಭಾರತ
* ರೋಹನ್ ಬೋಪಣ್ಣ ಮತ್ತು ದಿವಿಜ್ ಶರಣ್ ಜೋಡಿಯು ಡಬಲ್ಸ್‌ನಲ್ಲಿ ಭರ್ಜರಿ ಪ್ರದರ್ಶನ
ನವದೆಹಲಿ: ಡೇವಿಸ್ ಕಪ್ ಟೆನಿಸ್ (Davis Cup) ಟೂರ್ನಿಯ ವಿಶ್ವಗುಂಪು 1ರಲ್ಲಿ ಆಡಲು ಭಾರತ ಅರ್ಹತೆ ಗಿಟ್ಟಿಸಿಕೊಂಡಿದೆ. ವಿಶ್ವ ಗುಂಪು ಒಂದರ ಪ್ಲೇ ಆಫ್‌ನಲ್ಲಿ ಶುಕ್ರವಾರ 2-0 ಅಂತರದಲ್ಲಿ ಮುನ್ನಡೆ ಸಾಧಿಸಿದ್ದ ಭಾರತ, ಶನಿವಾರ ಮತ್ತೆರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿತು. ರೋಚಕ ಹಣಾಹಣಿಯಲ್ಲಿ 3 ಮ್ಯಾಚ್ ಪಾಯಿಂಟ್‌ಗಳನ್ನು ಉಳಿಸಿಕೊಂಡ ರೋಹನ್ ಬೋಪಣ್ಣ (Rohan Bopanna) ಮತ್ತು ದಿವಿಜ್ ಶರಣ್ ಜೋಡಿಯು ಡಬಲ್ಸ್‌ನಲ್ಲಿ ಡೆನ್ಮಾರ್ಕ್ನ ಫ್ರೆಡರಿಕ್ ನೆಲ್ಸನ್-ಮೈಕೆಲ್ ಟೋಪ್‌ರ್‍ಗಾರ್ಡ್ ಜೋಡಿಯನ್ನು ಮಣಿಸಿತು.
ಡೇವಿಸ್ ಕಪ್ ಟೂರ್ನಿಯ ಎರಡನೇ ದಿನದಾಟದಲ್ಲಿ ರೋಹನ್ ಬೋಪಣ್ಣ ಮತ್ತು ದಿವಿಜ್ ಶರಣ್ ಜೋಡಿಯು 6-7(4), 6-4, 7-6(4) ಅಂತರದಿಂದ ಜಯ ಸಾಧಿಸಿದ ಭಾರತ 4-0 ಮುನ್ನಡೆ ಗಳಿಸಿ ವಿಶ್ವಗುಂಪು 1ರಲ್ಲಿ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಡೆನ್ಮಾರ್ಕ್ ವಿಶ್ವ ಗುಂಪು ಎರಡಕ್ಕೆ ಮರಳಿತು. ನಂತರ ನಡೆದ ರಿವರ್ಸ್ ಸಿಂಗಲ್ಸ್‌ನಲ್ಲಿ ರಾಮ್‌ಕುಮಾರ್ 5-7, 7-5, 10-7 ಅಂತರದಿಂದ ಜೋಹ್ನೆಸ್ ಇಂಗಿಲ್ಡ್‌ಸೆನ್ ವಿರುದ್ಧ ಜಯ ಸಾಧಿಸಿದರು. ಭಾರತ 4-0 ಮುನ್ನಡೆ ಸಾಧಿಸಿದ ಕಾರಣ 5ನೇ ಪಂದ್ಯವನ್ನು ಆಡಿಸಲಿಲ್ಲ.
ಇದಕ್ಕೂ ಮೊದಲು ಶುಕ್ರವಾರ ನಡೆದ ಸಿಂಗಲ್ಸ್ ಪಂದ್ಯಗಳಲ್ಲಿ ಡೆನ್ಮಾರ್ಕ್ ವಿರುದ್ಧ ಭಾರತ 2-0 ಮುನ್ನಡೆ ಸಾಧಿಸಿತ್ತು. ಸಿಂಗಲ್ಸ್ ವಿಭಾಗದ ಮೊದಲ ಪಂದ್ಯದಲ್ಲಿ ರಾಮನಾಥನ್ ರಾಮಕುಮಾರ್, ಕ್ರಿಸ್ಚಿಯನ್ ಸಿಗ್ಸ್‌ಗಾರ್ಡ್ ವಿರುದ್ಧ 6-3, 6-2 ಸೆಟ್‌ಗಳಲ್ಲಿ ಗೆದ್ದರೆ, ಮಿಕಾಯಿಲ್ ಟೊರ್ಪೆಗಾರ್ಡ್ ವಿರುದ್ಧ ಯೂಕಿ ಭಾಂಬ್ರಿ 6-4, 6-4 ಸೆಟ್‌ಗಳಲ್ಲಿ ಜಯ ಸಾಧಿಸಿದ್ದರು.
ವಿಶ್ವ ವೇಗ ನಡಿಗೆ ಕೂಟ: ಭಾರತ ಮಹಿಳೆಯರ ದಾಖಲೆ
ಮಸ್ಕಟ್: ವಿಶ್ವ ಅಥ್ಲೆಟಿಕ್ ವೇಗ ನಡಿಗೆ ತಂಡ ಚಾಂಪಿಯನ್‌ಶಿಪ್‌ನಲ್ಲಿ ಚೊಚ್ಚಲ ಪದಕ ಗೆಲ್ಲುವ ಮೂಲಕ ಭಾರತ ಮಹಿಳೆಯರು ಇತಿಹಾಸ ಸೃಷ್ಟಿಸಿದ್ದಾರೆ. ಶುಕ್ರವಾರ ಭಾವನಾ ಜಾಟ್, ಮುನಿತಾ ಪ್ರಜಾಪತಿ, ರವೀನಾ ಜೋಡಿ 20 ಕಿ.ಮೀ. ತಂಡ ವಿಭಾಗದಲ್ಲಿ ಕಂಚಿನ ಪದಕ ಗೆದ್ದುಕೊಂಡಿತು. ಚೀನಾ ಹಾಗೂ ಗ್ರೀಸ್ ಕ್ರಮವಾಗಿ ಚಿನ್ನ ಹಾಗೂ ಬೆಳ್ಳಿ ಗೆದ್ದುಕೊಂಡಿತು. ರೇಸ್ ವಾಕಿಂಗ್ ಚಾಂಪಿಯನ್‌ಶಿಪ್‌ನ 61 ವರ್ಷಗಳ ಇತಿಹಾಸದಲ್ಲೇ ಮಹಿಳಾ ತಂಡಕ್ಕೆ ಮೊದಲ ಪದಕ ಲಭಿಸಿತು. ಪುರುಷರ ತಂಡ 2012ರಲ್ಲಿ ಮೊದಲ ಬಾರಿ ಕಂಚು ಗೆದ್ದಿತ್ತು.
ಐಎಸ್‌ಎಲ್: ಜಯದೊಂದಿಗೆ ವಿದಾಯ ಹೇಳಿದ ಬಿಎಫ್‌ಸಿ
ಬ್ಯಾಂಬೊಲಿಮ್: 8ನೇ ಆವೃತ್ತಿಯ ಇಂಡಿಯನ್ ಸೂಪರ್ ಲೀಗ್(ಐಎಸ್‌ಎಲ್) (Indian Super League) ಫುಟ್ಬಾಲ್ ಲೀಗ್‌ನಲ್ಲಿ ಈಗಾಗಲೇ ಸೆಮಿಫೈನಲ್ ರೇಸ್‌ನಿಂದ ಹೊರಬಿದಿದ್ದ ಬೆಂಗಳೂರು ಎಫ್‌ಸಿ (Bengaluru FC) ಗೆಲುವಿನೊಂದಿಗೆ ಟೂರ್ನಿಗೆ ವಿದಾಯ ಹೇಳಿತು. ಶನಿವಾರ ಈಸ್ಟ್ ಬೆಂಗಾಲ್ ಎಫ್‌ಸಿ ವಿರುದ್ಧ ಬಿಎಫ್‌ಸಿ 1-0 ಗೋಲುಗಳಿಂದ ಜಯಿಸಿತು. ನಾಯಕ ಸುನಿಲ್ ಚೆಟ್ರಿ ತಂಡದ ಪರ ಏಕೈಕ ಗೋಲು ಬಾರಿಸಿದರು.
ಅಂಧ ಮಹಿಳಾ ಕ್ರಿಕೆಟ್: ಕರ್ನಾಟಕ ಚಾಂಪಿಯನ್
ಬೆಂಗಳೂರು: 2ನೇ ಆವೃತ್ತಿಯ ಅಂಧ ಮಹಿಳೆಯರ ರಾಷ್ಟ್ರೀಯ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಆತಿಥೇಯ ಕರ್ನಾಟಕ ಚಾಂಪಿಯನ್ ಆಗಿ ಹೊರಹೊಮ್ಮಿದೆ. ನಗರದ ಆಲ್ಟಿಯಾರ್ ಮೈದಾನದಲ್ಲಿ ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ರಾಜ್ಯ ತಂಡ, ಒಡಿಶಾ ವಿರುದ್ಧ 5 ವಿಕೆಟ್‌ಗಳಿಂದ ಗೆದ್ದು ಪ್ರಶಸ್ತಿ ತನ್ನದಾಗಿಸಿಕೊಂಡಿತು.
ಖೇಲೋ ಇಂಡಿಯಾ ವಿವಿ ಕ್ರೀಡಾಕೂಟಕ್ಕೆ ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ..?
ಮೊದಲು ಬ್ಯಾಟ್ ಮಾಡಿದ ಒಡಿಶಾ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 148 ರನ್ ಕಲೆ ಹಾಕಿತು. ರಚನಾ ಜನಾ(26), ಜಿಲಿ ಬಿರುಹಾ(31) ತಂಡ ಉತ್ತಮ ಮೊತ್ತ ಗಳಿಸಲು ನೆರವಾದರು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ರಾಜ್ಯ ತಂಡ 16.5 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ಜಯ ಸಾಧಿಸಿತು. ಟೂರ್ನಿಯುದ್ದಕ್ಕೂ ಮಿಂಚಿದ್ದ ಯು.ವರ್ಷಾ(ಔಟಾಗದೆ 62), ಗಂಗಾ(43) ಮತ್ತೊಮ್ಮೆ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ವರ್ಷ ಪಂದ್ಯಶ್ರೇಷ್ಠ ಪ್ರಶಸ್ತಿ ಗೌರವಕ್ಕೆ ಪಾತ್ರರಾದರು.