Asianet Suvarna News Asianet Suvarna News

ಖೇಲೋ ಇಂಡಿಯಾ ವಿವಿ ಕ್ರೀಡಾಕೂಟಕ್ಕೆ ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ..?

* ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ 2021ಕ್ಕೆ ದಿನಗಣನೆ ಆರಂಭ

* ಏಪ್ರಿಲ್‌ 24ರಂದು ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ಗೆ ಚಾಲನೆ ಸಾಧ್ಯತೆ

* ಪ್ರಧಾನಿ ನರೇಂದ್ರ ಮೋದಿ ಈ ಕ್ರೀಡಾಕೂಟಕ್ಕೆ ಉದ್ಘಾಟನೆ ಮಾಡುವ ಸಾಧ್ಯತೆ

PM Narendra Modi Likely to Inaugurates Khelo India University Games kvn
Author
Bengaluru, First Published Mar 4, 2022, 12:23 PM IST

ಬೆಂಗಳೂರು(ಮಾ.04): ಬಹುನಿರೀಕ್ಷಿತ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ 2021ಕ್ಕೆ (Khelo India University Games) ದಿನಗಣನೆ ಆರಂಭವಾಗಿದ್ದು, ಏಪ್ರಿಲ್‌ 24ರಂದು ಚಾಲನೆ ನೀಡುವ ಸಾಧ್ಯತೆ ಇದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ನಾರಾಯಣಗೌಡ ಹೇಳಿದ್ದಾರೆ. ಗುರುವಾರ ವಿಧಾನಸೌಧದಲ್ಲಿ ಕ್ರೀಡಾ ಇಲಾಖೆ ಅಧಿಕಾರಿಗಳು ಮತ್ತು ಜೈನ್‌ ವಿಶ್ವವಿದ್ಯಾಲಯ ಉಪಕುಲಪತಿಯೊಂದಿಗೆ ಸಭೆ ನಡೆಸಿ ಕ್ರೀಡಾಕೂಟ ಆಯೋಜನೆಗೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನೆ ನಡೆಸಿದರು.

ಈ ವೇಳೆ ಮಾತನಾಡಿದ ಅವರು, ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ ಉದ್ಘಾಟನೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಆಹ್ವಾನಿಸಲಾಗಿದೆ. ಅವರು ಆಗಮಿಸುವುದು ಬಹುತೇಕ ಖಚಿತವಾಗಿದೆ. ಏ.24ರಿಂದ ಮೇ 3ರವರೆಗೆ ಕ್ರೀಡಾಕೂಟವನ್ನು ನಡೆಸುವ ಉದ್ದೇಶ ಇದೆ. ಪ್ರಧಾನಿಯವರಿಂದ ದಿನಾಂಕ ಖಚಿತಗೊಳ್ಳುತ್ತಿದ್ದಂತೆ ಆ ದಿನಾಂಕವನ್ನು ಅಂತಿಮಗೊಳಿಸಲಾಗುವುದು ಎಂದರು. ಇದೇ ಮೊದಲ ಬಾರಿಗೆ 23 ಕ್ರೀಡೆಗಳನ್ನು ಆಯೋಜಿಸಲಾಗುತ್ತಿದೆ. ರಾಷ್ಟಾ್ರದ್ಯಂತ ಸುಮಾರು ಎಂಟು ಸಾವಿರ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಕರ್ನಾಟಕದ ಮಲ್ಲಕಂಬ, ಯೋಗ, ಕರಾಟೆಯನ್ನು ಇದೇ ಮೊದಲ ಬಾರಿಗೆ ಕ್ರೀಡಾಕೂಟದಲ್ಲಿ ಪರಿಚಯಿಸಲಾಗುತ್ತಿದೆ ಎಂದರು.

ಕ್ರೀಡಾಕೂಟದ ಲೋಗೋ, ಮಸ್ಕಟ್‌ಗೆ ಕೇಂದ್ರ ಕ್ರೀಡಾ ಸಚಿವಾಲಯ ಅನುಮೋದನೆ ನೀಡಿದೆ. ಸದ್ಯದಲ್ಲಿಯೇ ಕೇಂದ್ರ ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ ಅವರು ಲೋಕಾರ್ಪಣೆಗೊಳಿಸಲಿದ್ದಾರೆ. ಇದೇ ಮೊದಲ ಬಾರಿಗೆ ಆದ್ದೂರಿಯಾಗಿ ಕ್ರೀಡಾಕೂಟವನ್ನು ಆಯೋಜಿಸುವ ಅವಕಾಶ ಸಿಕ್ಕಿದ್ದು, ಅತ್ಯುತ್ತಮವಾಗಿ ಕ್ರೀಡಾಕೂಟವನ್ನು ಸಂಘಟಿಸಲಾಗುವುದು ಎಂದು ಹೇಳಿದರು. ಸಭೆಯಲ್ಲಿ ಕ್ರೀಡಾ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌, ಆಯುಕ್ತ ಗೋಪಾಲಕೃಷ್ಣ, ಜೈನ್‌ ವಿಶ್ವವಿದ್ಯಾಲಯ ಉಪಕುಲಪತಿ ಡಾ.ಚೆನ್ನರಾಜ್‌ ಇತರರು ಉಪಸ್ಥಿತರಿದ್ದರು.

ಭಾರತ-ಡೆನ್ಮಾರ್ಕ್ ಡೇವಿಸ್‌ ಕಪ್‌ ಪ್ಲೇ-ಆಫ್‌ ಇಂದಿನಿಂದ

ನವದೆಹಲಿ: ಭಾರತ ಹಾಗೂ ಡೆನ್ಮಾರ್ಕ್ ನಡುವಿನ ಡೇವಿಸ್‌ ಕಪ್‌ ಟೆನಿಸ್‌ ಟೂರ್ನಿಯ (Davis Cup Tennis Tournament) ವಿಶ್ವ ಗುಂಪು ಪ್ಲೇ-ಆಫ್‌ ಮುಖಾಮುಖಿ ಶುಕ್ರವಾರ ಆರಂಭಗೊಳ್ಳಲಿದೆ. ಪಂದ್ಯಗಳು 2 ದಿನ ನಡೆಯಲಿದ್ದು, ಗೆಲ್ಲುವ ತಂಡ ಸೆಪ್ಟೆಂಬರ್ 14ರಿಂದ ಆರಂಭವಾಗುವ ವಿಶ್ವ ಗುಂಪಿನ ಪಂದ್ಯಕ್ಕೆ ಅರ್ಹತೆ ಗಿಟ್ಟಿಸಲಿದೆ. 

Russia Ukraine Crisis: ರಷ್ಯಾಗೆ ಕ್ರೀಡಾ ಲೋಕದಿಂದ ಮತ್ತಷ್ಟು ನಿರ್ಬಂಧ

ಉಭಯ ತಂಡಗಳು 1984ರ ಬಳಿಕ ಮೊದಲ ಬಾರಿ ಮುಖಾಮುಖಿಯಾಗುತ್ತಿದ್ದು, ಹುಲ್ಲಿನ ಅಂಕಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಭಾರತ ಗೆಲ್ಲುವ ಫೇವರಿಟ್‌ ಎನಿಸಿಕೊಂಡಿದೆ. ಸಿಂಗಲ್ಸ್‌ ವಿಭಾಗದಲ್ಲಿ ರಾಮನಾಥನ್‌ ರಾಮಕುಮಾರ್‌, ಪ್ರಜ್ನೇಶ್‌ ಗುಣೇಶ್ವರ್‌ ಹಾಗೂ ಯೂಕಿ ಭಾಂಬ್ರಿ ಕಣಕ್ಕಿಳಿಯಲಿದ್ದು, ರೋಹಣ್‌ ಬೋಪಣ್ಣ ಹಾಗೂ ದಿವಿಜ್‌ ಶರಣ್‌ ಜೋಡಿ ಡಬಲ್ಸ್‌ನಲ್ಲಿ ಆಡುವ ನಿರೀಕ್ಷೆಯಿದೆ.

ಪಂದ್ಯ ಆರಂಭ: ಬೆಳಗ್ಗೆ 11ಕ್ಕೆ 

ಚಳಿಗಾಲದ ಪ್ಯಾರಾಲಿಂಪಿಕ್ಸ್‌: ರಷ್ಯಾ, ಬೆಲಾರಸ್‌ ಔಟ್‌

ಬೀಜಿಂಗ್‌: ಉಕ್ರೇನ್‌ ವಿರುದ್ಧ ಯುದ್ಧ ಮುಂದುವರಿಸಿರುವ ರಷ್ಯಾ ಹಾಗೂ ಅದಕ್ಕೆ ಬೆಂಬಲಿಸಿರುವ ಬೆಲಾರಸ್‌ ವಿರುದ್ಧ ಅಂತಾರಾಷ್ಟ್ರೀಯ ಪ್ಯಾರಾಲಿಂಪಿಕ್ಸ್‌ ಸಮಿತಿ(ಐಪಿಸಿ) ನಿರ್ಬಂಧ ಹೇರಿದ್ದು, ಅಲ್ಲಿನ ಸ್ಪರ್ಧಿಗಳು ಚಳಿಗಾಲದ ಪ್ಯಾರಾಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಅವಕಾಶ ನಿರಾಕರಿಸಿದೆ. ಬುಧವಾರವಷ್ಟೇ ಸಮಿತಿಯು ರಷ್ಯಾ, ಬೆಲಾರಸ್‌ನ ಸ್ಪರ್ಧಿಗಳಿಗೆ ತಮ್ಮ ದೇಶದ ಧ್ವಜ, ಹೆಸರು ಬಳಸದೆ ತಟಸ್ಥವಾಗಿ ಸ್ಪರ್ಧಿಸಲು ಅವಕಾಶ ನೀಡಿತ್ತು. 

ಗುರುವಾರ ತನ್ನ ನಿರ್ಧಾರ ಬದಲಿಸಿ ಪ್ರಕಟಣೆ ಹೊರಡಿಸಿದೆ. ಪ್ಯಾರಾಲಿಂಪಿಕ್ಸ್‌ ಮಾ.4ರಿಂದ 13ರ ವರೆಗೆ ನಿಗದಿಯಾಗಿದೆ. ಇನ್ನು, ಸೆಪ್ಟಂಬರ್‌ನಲ್ಲಿ ನಡೆಯಬೇಕಿದ್ದ ರಷ್ಯನ್‌ ಗ್ರ್ಯಾನ್‌ ಪ್ರಿ ಎಫ್‌ 1 ರೇಸ್‌ ಅನ್ನು ರದ್ದುಗೊಳಿಸಿದ್ದ ಅಂತಾರಾಷ್ಟ್ರೀಯ ಆಟೋಮೊಬೈಲ್‌ ಫೆಡರೇಶನ್‌(ಎಫ್‌ಐಎ), ರೇಸ್‌ ಆತಿಥ್ಯದಿಂದ ರಷ್ಯಾವನ್ನು ಶಾಶ್ವತವಾಗಿ ಹೊರಗಿಟ್ಟಿದೆ. ‘ರಷ್ಯಾ ಜೊತೆಗಿನ ಒಪ್ಪಂದ ಕೊನೆಗೊಳಿಸಿದ್ದೇವೆ. ಇನ್ನು ರಷ್ಯಾದಲ್ಲಿ ರೇಸ್‌ ನಡೆಯುವುದಿಲ್ಲ’ ಎಂದು ಎಫ್‌ಐಎ ತಿಳಿಸಿದೆ.

ಶೂಟಿಂಗ್‌ ವಿಶ್ವಕಪ್‌ನಲ್ಲಿ ಭಾರತಕ್ಕೆ 2ನೇ ಚಿನ್ನ

ಕೈರೋ: ವರ್ಷದ ಮೊದಲ ಶೂಟಿಂಗ್‌ ವಿಶ್ವಕಪ್‌ನಲ್ಲಿ ಭಾರತ 2ನೇ ಚಿನ್ನದ ಪದಕ ಗೆದ್ದುಕೊಂಡಿದೆ. ಮಹಿಳೆಯರ 10 ಮೀ. ಏರ್‌ ಪಿಸ್ತೂಲ್‌ ತಂಡ ವಿಭಾಗದಲ್ಲಿ ಭಾರತದ ಶ್ರೀ ನಿವೇಥ, ಈಶಾ ಸಿಂಗ್‌ ಹಾಗೂ ರುಚಿತಾ ವಿನೇರ್ಕರ್‌ ಬಂಗಾರದ ಪದಕ ಜಯಿಸಿದರು. 

ಜರ್ಮನಿಯ ಜೋಡಿ ಬೆಳ್ಳಿ ಗೆದ್ದುಕೊಂಡಿತು. ಪುರುಷರ 10 ಮೀ. ಏರ್‌ ಪಿಸ್ತೂಲ್‌ ತಂಡ ವಿಭಾಗದ ಕಂಚಿನದ ಪದಕದ ಸ್ಪರ್ಧೆಯಲ್ಲಿ ಸೌರಭ್‌ ಚೌಧರಿ, ಗೌರವ್‌ ರಾಣಾ, ಬಾಲಕೃಷ್ಣ ಜೋಡಿ ಸೋತು, ಪದಕ ಗೆಲ್ಲುವ ಅವಕಾಶ ಕೈಚೆಲ್ಲಿತು. 2 ಚಿನ್ನ, 1 ಬೆಳ್ಳಿ ಗೆದ್ದಿರುವ ಭಾರತ ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
 

Follow Us:
Download App:
  • android
  • ios