ಇಂದು ಪ್ರೊ ಕಬಡ್ಡಿ ಆಟಗಾರರ ಹರಾಜು; ಪ್ರದೀಪ್ ನರ್ವಾಲ್ ಮೇಲೆ ಎಲ್ಲರ ಚಿತ್ತ
* 2021ನೇ ಸಾಲಿನ ಪ್ರೊ ಕಬಡ್ಡಿ ಆಟಗಾರರ ಹರಾಜಿಗೆ ಕ್ಷಣಗಣನೆ ಆರಂಭ
* ಹರಾಜಿನಲ್ಲಿ ಪ್ರದೀಪ್ ನರ್ವಾಲ್, ರಾಹುಲ್ ಚೌಧರಿ ಸೇರಿ ಹಲವು ಆಟಗಾರರು ಭಾಗಿ
* 12 ತಂಡಗಳು ಈಗಾಗಲೇ ಕೆಲ ಆಟಗಾರರನ್ನು ಉಳಿಸಿಕೊಂಡಿವೆ.
ಮುಂಬೈ(ಆ.30): ಪ್ರೊ ಕಬಡ್ಡಿ 8ನೇ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆ ಸೋಮವಾರ ನಡೆಯಲಿದೆ. ತಾರಾ ಆಟಗಾರರಾದ ಪ್ರದೀಪ್ ನರ್ವಾಲ್, ರೋಹಿತ್ ಕುಮಾರ್, ರಾಹುಲ್ ಚೌಧರಿ, ಅಜಯ್ ಠಾಕೂರ್ ಸೇರಿದಂತೆ ಹಲವರು ಹರಾಜಿನಲ್ಲಿ ಭಾಗಿಯಾಗಲಿದ್ದಾರೆ.
ಮೂರು ಬಾರಿ ಪಾಟ್ನಾ ಪೈರೇಟ್ಸ್ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಪ್ರದೀಪ್ ನರ್ವಾಲ್ ಅವರನ್ನು ಈ ಬಾರಿ ಯಾವ ಫ್ರಾಂಚೈಸಿ ಖರೀದಿಸಲಿದೆ ಎನ್ನುವ ಕುತೂಹಲ ಜೋರಾಗಿದೆ. ಇದಷ್ಟೇ ಅಲ್ಲದೇ ಅಜಯ್ ಠಾಕೂರ್, ರಾಹುಲ್ ಚೌಧರಿ(ತಮಿಳ್ ತಲೈವಾಸ್), ಸಿದ್ದಾರ್ಥ್ ದೇಸಾಯಿ(ತೆಲಗು ಟೈಟಾನ್ಸ್) ಈ ಬಾರಿ ಯಾವ ತಂಡ ಕೂಡಿಕೊಳ್ಳಲಿದ್ದಾರೆ ಎನ್ನುವ ಕುತೂಹಲ ಜೋರಾಗಿದೆ.
12 ತಂಡಗಳು ಈಗಾಗಲೇ ಕೆಲ ಆಟಗಾರರನ್ನು ಉಳಿಸಿಕೊಂಡಿವೆ. ಭಾನುವಾರ ನಡೆದ ‘ನ್ಯೂ ಯಂಗ್ ಪ್ಲೇಯರ್’ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದ 96 ಆಟಗಾರರ ಪೈಕಿ ನಾಲ್ವರು ವಿವಿಧ ತಂಡಗಳಿಗೆ ಆಯ್ಕೆಯಾದರು. ಪ್ರತಿ ತಂಡವೂ ಆಟಗಾರರ ಖರೀದಿಗೆ ಗರಿಷ್ಠ 4.4 ಕೋಟಿ ರು. ಖರ್ಚು ಮಾಡಬಹುದಾಗಿದೆ.
ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್ ತಂಡದಲ್ಲೇ ಉಳಿದ ಪವನ್, ಪ್ರದೀಪ್ ನರ್ವಾಲ್‌ಗೆ ಪಾಟ್ನಾ ಗೇಟ್‌ಪಾಸ್
22 ಎಲೈಟ್ ಆಟಗಾರರು ಸೇರಿ ಒಟ್ಟು 59 ಆಟಗಾರರು 12 ತಂಡಗಳಲ್ಲಿ ಉಳಿದುಕೊಂಡಿದ್ದಾರೆ. ಇರಾನ್ ಆಟಗಾರರಾದ ಫಜಲ್ ಅಟ್ರಾಚೆಲಿ(ಯು ಮುಂಬಾ), ಮೊಹಮದ್ ನಬೀಬಕ್ಷ್(ಬೆಂಗಾಲ್ ವಾರಿಯರ್ಸ್), ನವೀನ್ ಕುಮಾರ್(ದಬಾಂಗ್ ಡೆಲ್ಲಿ), ಪವನ್ ಶೆರಾವತ್(ಬೆಂಗಳೂರು ಬುಲ್ಸ್) ತಾವಿದ್ದ ತಂಡಗಳಲ್ಲೇ ಉಳಿದುಕೊಂಡಿದ್ದಾರೆ.