Asianet Suvarna News Asianet Suvarna News

Commonwealth Games Queens Baton ಕ್ರೀಡಾಳುಗಳಿಗೆ ವೈಜ್ಞಾನಿಕ ತರಬೇತಿ ಅಗತ್ಯ: ಸಿಎಂ ಬಸವರಾಜ ಬೊಮ್ಮಾಯಿ

* ಬೆಂಗಳೂರಿನಲ್ಲಿ ಕಾಮನ್‌ವೆಲ್ತ್‌ ಕ್ವೀನ್ಸ್‌ ಬ್ಯಾಟನ್‌ ರಿಲೇಗೆ ಚಾಲನೆ

* ವಿಧಾನಸೌಧದ ಪೂರ್ವ ಬಾಗಿಲಿನಲ್ಲಿ ಕಾರ‍್ಯಕ್ರಮಕ್ಕೆ ಚಾಲನೆ

* ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಅವರು ಬ್ಯಾಟನ್‌ ರಿಲೇಗೆ ಚಾಲನೆ

Commonwealth Games Queens Baton Ceremony Athletes need scientific training says Karnataka CM Basavaraj Bommai kvn
Author
Bengaluru, First Published Jan 15, 2022, 9:22 AM IST

ಬೆಂಗಳೂರು(ಜ.15): ಮುಂಬರುವ 2022ರ ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್‌ ಗೇಮ್ಸ್‌ನ (Birmingham Commonwealth Games 2022) ಬ್ಯಾಟನ್‌ ರಿಲೇ ಶುಕ್ರವಾರ ಬೆಂಗಳೂರಿನಲ್ಲಿ ನಡೆಯಿತು. ವಿಧಾನಸೌಧದ ಪೂರ್ವ ಬಾಗಿಲಿನಲ್ಲಿ ಕಾರ‍್ಯಕ್ರಮಕ್ಕೆ ಚಾಲನೆ ದೊರೆತ ಬಳಿಕ ಬ್ಯಾಟನ್‌ ವಾಕಥಾನ್‌ ನಗರದ ಶ್ರೀ ಕಂಠೀರವ ಕ್ರೀಡಾಂಗಣದವರೆಗೂ ಸಾಗಿತು. ಬೆಳಗ್ಗೆ ವಿಧಾನಸೌಧ ಮುಂಭಾಗ ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ಒಲಿಂಪಿಕ್‌ ಸಂಸ್ಥೆ(ಕೆಒಎ) ಆಯೋಜಿಸಿದ ಕಾರ‍್ಯಕ್ರಮದಲ್ಲಿ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ (Thawar Chand Gehlot) ಅವರು ಬ್ಯಾಟನ್‌ ರಿಲೇಗೆ ಚಾಲನೆ ನೀಡಿದರು. 

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ವರ್ಚುವಲ್‌ ಆಗಿ ಸಮಾರಂಭದಲ್ಲಿ ಪಾಲ್ಗೊಂಡರು. ಈ ವೇಳೆ ಮಾತನಾಡಿದ ಅವರು, ‘ಕ್ರೀಡಾಳುಗಳಿಗೆ ವೈಜ್ಞಾನಿಕವಾಗಿ ಮಾರ್ಗದರ್ಶನ ನೀಡುವ ಕೆಲಸವನ್ನು ತರಬೇತುಗೊಂಡಿರುವ ಕೋಚ್‌ಗಳು ಮಾಡಬೇಕಿದೆ. ಅವರಿಗೆ ಪಠ್ಯಕ್ರಮ ರೂಪಿಸಿ ಅದರಂತೆ ಸೂಕ್ತ ಮಾರ್ಗದರ್ಶನ ನೀಡುವ ಅವಶ್ಯಕತೆ ಇದೆ. ಅಮೃತ ಕ್ರೀಡಾ ಯೋಜನೆಯ ಗುರಿ ಈಡೇರಿಸಲು ಸರ್ಕಾರ ಅಗತ್ಯ ನೆರವು ನೀಡಲು ಬದ್ಧವಾಗಿದೆ’ ಎಂದರು.

ಕಾಮನ್‌ವೆಲ್ತ್‌ ಕ್ರೀಡಾಕೂಟದ ಬ್ಯಾಟನ್‌ 9,000 ಕಿ.ಮೀ. ಸಂಚರಿಸಿ ಭಾರತಕ್ಕೆ ಆಗಮಿಸಿದೆ. ದೇಶದ 4 ನಗರಗಳ ಪೈಕಿ ಬೆಂಗಳೂರಿಗೂ (Bengaluru) ಬ್ಯಾಟನ್‌ ಆಗಮಿಸಿದ್ದು ಸಂತೋಷದ ಸಂಗತಿ. ಖೇಲೋ ಇಂಡಿಯಾ (Khelo India) ಪ್ರಾರಂಭಿಸಿ ಹಳ್ಳಿ ಹಳ್ಳಿಗಳಲ್ಲಿ ವ್ಯವಸ್ಥಿತವಾಗಿ ಕ್ರೀಡಾಕೂಟಗಳು ನಡೆಯುತ್ತಿವೆ. ಕರ್ನಾಟಕ ರಾಜ್ಯ ಯುವಜನ ಸಬಲೀಕರಣಕ್ಕೆ ಮಹತ್ವವನ್ನು ನೀಡಿದೆ. ನೂತನ ಯುವ ನೀತಿಯನ್ನು ಸರ್ಕಾರ ಜಾರಿಗೊಳಿಸುತ್ತಿದೆ ಎಂದು ಸಿಎಂ ಹೇಳಿದರು.

ಬಳಿಕ ಮಕರ ಸಂಕ್ರಾಂತಿಗೆ ಕನ್ನಡದಲ್ಲೇ ಶುಭಾಶಯ ಕೋರುವುದರೊಂದಿಗೆ ಮಾತು ಆರಂಭಿಸಿದ ರಾಜ್ಯಪಾಲ ಗೆಹಲೋತ್‌, ಕಾಮನ್‌ವೆಲ್ತ್‌ ಗೇಮ್ಸ್‌ನಿಂದಾಗಿ ವಿಶ್ವದೆಲ್ಲೆಡೆ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ. ರಾಜ್ಯದಲ್ಲಿ ದೇಶದ ಇತರೆ ರಾಜ್ಯಗಳಿಗಿಂತ ಕ್ರೀಡೆಗೆ ಉತ್ತಮ ಅವಕಾಶವಿದೆ. ಒಲಿಂಪಿಕ್ಸ್‌ ದೃಷ್ಠಿಯಿಂದ ಕರ್ನಾಟಕದಲ್ಲಿ ಕ್ರೀಡಾ ಚಟುವಟಿಕೆಗಳು ಹೆಚ್ಚು ಮಾಡಬೇಕು. ರಾಷ್ಟ್ರೀಯ ತಂಡಕ್ಕೆ ರಾಜ್ಯದ ಕ್ರೀಡಾಳುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಬೇಕು’ ಎಂದರು.

ಬೆಂಗಳೂರಿಗೆ ಕಾಮನ್‌ವೆಲ್ತ್‌ ಕ್ವೀನ್ಸ್‌ ಬ್ಯಾಟನ್: ಇಂದು ರಿಲೇ

ವಿಧಾನಪರಿಷರ್‌ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ‘ಇಂತಹ ಕಾರ‍್ಯಕ್ರಮಗಳು ಇದ್ದಾಗ ಮಾತ್ರ ಕ್ರೀಡೆಯ ಬಗ್ಗೆ ಪ್ರೋತ್ಸಾಹದ ಮಾತನಾಡಬಾರದು. ರಾಜ್ಯದ ಮಕ್ಕಳಿಗೆ ಈಗಿಂದಲೇ ತರಬೇತಿ ನೀಡಿ ಕ್ರೀಡೆಗೆ ಸಜ್ಜುಗೊಳಿಸಬೇಕು. ಮುಂದೆ ಶ್ರೇಷ್ಠ ಕ್ರೀಡಾಳುಗಳಾಗಿ ಅವರು ಹೊರಬರಬೇಕು. ಸರ್ಕಾರ ಅವರಿಗೆ ಸೂಕ್ತ ಬೆಂಬಲ ನೀಡಬೇಕು’ ಎಂದರು. ಸಮಾರಂಭದಲ್ಲಿ ಕೆಒಎ ಅಧ್ಯಕ್ಷ ಡಾ ಕೆ.ಗೋವಿಂದರಾಜು, ಕಾರ‍್ಯದರ್ಶಿ ಅನಂತರಾಜು, ಕ್ರೀಡಾ ಇಲಾಖೆ ಅಪರ ಮುಖ್ಯ ಕಾರ‍್ಯದರ್ಶಿ ಶಾಲಿನಿ ರಜನೀಶ್‌ ಸೇರಿದಂತೆ ಹಲವರು ಹಾಜರಿದ್ದರು.

ಬ್ಯಾಟನ್‌ ರಿಲೇಯಲ್ಲಿ ಕ್ರೀಡಾ ತಾರೆಯರು

ಸಮಾರಂಭದ ಬಳಿಕ ಬ್ಯಾಟನನ್ನು ಖೇಲ್‌ ರತ್ನ ಹಾಗೂ ಪದ್ಮಶ್ರೀ ಪ್ರಶಸ್ತಿ ವಿಜೇತ ಅಥ್ಲೀಟ್‌ ಅಂಜು ಬಾಬಿ ಜಾರ್ಜ್‍, ಧ್ಯಾನ್‌ಚಂದ್‌ ಪ್ರಶಸ್ತಿ ವಿಜೇತ ಮಾಜಿ ಅಥ್ಲೀಟ್‌ ಉದಯ್‌ ಪ್ರಭು, ಒಲಿಂಪಿಯನ್‌ ಎ.ಬಿ.ಸುಬ್ಬಯ್ಯ, ಯುವ ಈಜು ತಾರೆ ರಿಧಿಮಾ ವೀರೇಂದ್ರ ಸೇರಿದಂತೆ ಹಲವರು ರಾಜ್ಯಪಾಲರಿಂದ ಸ್ವೀಕರಿಸಿದರು. ಈಜುಪಟು ಶ್ರೀಹರಿ ನಟರಾಜ್‌, ಶೂಟರ್‌ ಪ್ರಕಾಶ್‌ ನಂಜಪ್ಪ, ಅಥ್ಲೀಟ್‌ಗಳಾದ ಬಿಂದು ರಾಣಿ, ಜಿ. ಪ್ರಮೀಳಾ, ಪ್ರಿಯಾ ಮೋಹನ್‌, ಹಾಕಿ ತಾರೆಯರಾದ ಎಸ್‌.ವಿ. ಸುನಿಲ್‌, ವಿ.ಆರ್‌.ರಘುನಾಥ್‌ ಸೇರಿದಂತೆ ಹಲವು ಮಾಜಿ, ಹಾಲಿ ಅಂತಾರಾಷ್ಟ್ರೀಯ ಕ್ರೀಡಾಪಟುಗಳು, ಒಲಿಂಪಿಯನ್‌ಗಳು, ಕೆಒಎ ಹಾಗೂ ಕ್ರೀಡಾ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದ ರಿಲೇ, ವಿಧಾನಸೌಧದಿಂದ ಕಬ್ಬನ್‌ ಪಾರ್ಕ್ ಮೂಲಕ ಸಾಗಿ ಕಂಠಿರವ ಕ್ರೀಡಾಂಗಣಕ್ಕೆ ಆಗಮಿಸಿತು. ಕೆಲ ಹೊತ್ತು ರಿಲೇ ಪ್ರದರ್ಶನದ ಬಳಿಕ ಬ್ಯಾಟನನ್ನು ಭಾರತೀಯ ಒಲಿಂಪಿಕ್‌ ಸಂಸ್ಥೆ(ಐಒಎ) ಸದಸ್ಯ ಹರಿ ಓಂ ಅವರಿಗೆ ಹಸ್ತಾಂತರಿಸಿದ್ದು, ಸಂಜೆ ಬ್ಯಾಟನ್‌ ಒಡಿಶಾದ ಭುವನೇಶ್ವರಕ್ಕೆ ತಲುಪಿತು.

ಬ್ಯಾಟನ್‌ ರಾಜ್ಯಕ್ಕೆ ಬಂದಿದ್ದು ಸೌಭಾಗ್ಯ

ಕಾಮನ್ವೆಲ್ತ್‌ ಕ್ವೀನ್ಸ್‌ ಬ್ಯಾಟನ್‌ ಕರ್ನಾಟಕಕ್ಕೆ ಬಂದಿದ್ದು ನಮ್ಮ ಸೌಭಾಗ್ಯ. ಗೇಮ್ಸ್‌ ಶಾಂತಿ, ಸೌಹಾರ್ದತೆಯನ್ನು ಪಸರಿಸಲಿದೆ. ರಾಜ್ಯದಲ್ಲಿ ಕ್ರೀಡಾಪಟುಗಳಿಗೆ ನಮ್ಮ ಸಂಸ್ಥೆಯಿಂದ ಎಲ್ಲಾ ರೀತಿಯ ಪ್ರೋತ್ಸಾಹ ನೀಡಲಾಗುತ್ತಿದೆ. ಚಿಕ್ಕ ಮಕ್ಕಳನ್ನು ದೊಡ್ಡ ಕ್ರೀಡಾಪಟುಗಳಾಗಿ ಬೆಳೆಸಲು ಯೋಜನೆಗಳನ್ನು ಕೈಗೊಂಡಿದ್ದೇವೆ. ಎಲ್ಲಾ ಜಿಲ್ಲೆಗಳಲ್ಲಿಯೂ ಇದಕ್ಕೆ ಬೇಕಾದ ವ್ಯವಸ್ಥೆ ಮಾಡಿದ್ದೇವೆ. ಮುಂದೆ ಕ್ರಿಕೆಟ್‌ನಂತೆಯೇ ಇತರೆ ಕ್ರೀಡೆಗಳೂ ಬೆಳೆಯಲಿವೆ.

-ಡಾ. ಕೆ.ಗೋವಿಂದರಾಜು, ಕೆಒಎ ಅಧ್ಯಕ್ಷ

Follow Us:
Download App:
  • android
  • ios