ಬೆಂಗಳೂರಿಗೆ ಕಾಮನ್‌ವೆಲ್ತ್‌ ಕ್ವೀನ್ಸ್‌ ಬ್ಯಾಟನ್: ಇಂದು ರಿಲೇ

* 2022ರ ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್ ಕ್ವೀನ್ಸ್‌ ಬ್ಯಾಟನ್‌ ಬೆಂಗಳೂರಿಗೆ ಆಗಮನ

* ನವದೆಹಲಿಯಿಂದ ಬೆಂಗಳೂರಿಗೆ ಆಗಮಿಸಿ ಕ್ವೀನ್ಸ್‌ ಬ್ಯಾಟನ್‌

* ವಿಧಾನ ಸೌಧದಲ್ಲಿ ಬ್ಯಾಟನ್‌ ರಿಲೇಗೆ ರಾಜ್ಯಪಾಲ ತಾವರ್‌ಚಂದ್‌ ಗೆಹಲೋತ್‌ ಚಾಲನೆ 

 

Birmingham Commonwealth Games Queens Baton arrives in Bengaluru kvn

ಬೆಂಗಳೂರು(ಜ.14): 2022ರ ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್‌ ಕ್ರೀಡಾಕೂಟದ (Birmingham Commonwealth Games 2022) ಕ್ವೀನ್ಸ್‌ ಬ್ಯಾಟನ್‌ ಗುರುವಾರ ನವದೆಹಲಿಯಿಂದ ಬೆಂಗಳೂರಿಗೆ ಆಗಮಿಸಿತು. ಭಾರತೀಯ ಒಲಿಂಪಿಕ್ಸ್‌ ಸಂಸ್ಥೆ(ಐಒಎ) ಸದಸ್ಯ ಹರಿ ಓಂ ಅವರು ಬ್ಯಾಟನ್‌ ಜೊತೆ ಆಗಮಿಸಿದರು. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕರ್ನಾಟಕ ರಾಜ್ಯ ಒಲಿಂಪಿಕ್ಸ್‌ ಸಂಸ್ಥೆ (ಕೆಒಎ) ಅಧ್ಯಕ್ಷ ಕೆ.ಗೋವಿಂದರಾಜು ಬ್ಯಾಟನನ್ನು ಬರಮಾಡಿಕೊಂಡರು. ವಿಮಾನ ನಿಲ್ದಾಣದಿಂದ ನೇರವಾಗಿ ಕಂಠೀರವ ಕ್ರೀಡಾಂಗಣದಲ್ಲಿರುವ ರಾಜ್ಯ ಒಲಿಂಪಿಕ್ಸ್‌ ಭವನಕ್ಕೆ ಕೊಂಡೊಯ್ಯಲಾಯಿತು.

ಶುಕ್ರವಾರ ಬೆಳಗ್ಗೆ ವಿಧಾನ ಸೌಧದಲ್ಲಿ ಬ್ಯಾಟನ್‌ ರಿಲೇಗೆ ರಾಜ್ಯಪಾಲ ತಾವರ್‌ಚಂದ್‌ ಗೆಹಲೋತ್‌ ಚಾಲನೆ ನೀಡಲಿದ್ದು, ಅಲ್ಲಿಂದ ಕಂಠೀರವ ಕ್ರೀಡಾಂಗಣದ ವರೆಗೂ ರಿಲೇ ನಡೆಯಲಿದೆ. ಅಂಜು ಬಿ. ಜಾರ್ಜ್‌ ಸೇರಿ ಹಲವು ಮಾಜಿ, ಹಾಲಿ ಅಂತಾರಾಷ್ಟ್ರೀಯ ಕ್ರೀಡಾಪಟುಗಳು, ಕೆಒಎ ಹಾಗೂ ಕ್ರೀಡಾ ಇಲಾಖೆ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.

ಏನಿದು ಕ್ವೀನ್ಸ್‌ ಬ್ಯಾಟನ್‌ ರಿಲೇ?

ಒಲಿಂಪಿಕ್ಸ್‌ ಕ್ರೀಡಾಜ್ಯೋತಿಯ ರೀತಿಯಲ್ಲೇ ಕಾಮನ್‌ವೆಲ್ತ್‌ ಗೇಮ್ಸ್‌ ಕ್ವೀನ್ಸ್‌ ಬ್ಯಾಟನನ್ನು (Queen's Baton) ಪರಿಗಣಿಸಲಾಗುತ್ತದೆ. ಕಾಮನ್‌ವೆಲ್ತ್‌ನ ಮುಖಸ್ಥೆ ರಾಣಿ ಎಲಿಜೆಬೆತ್‌ರ ಸಂದೇಶದೊಂದಿಗೆ ಲಂಡನ್‌ನ ಬಕಿಂಗ್‌ಹ್ಯಾಮ್‌ ಅರಮನೆಯಿಂದ ಈ ರಿಲೇ ಆರಂಭಗೊಳ್ಳಲಿದ್ದು, ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ರಾಷ್ಟ್ರಗಳಲ್ಲಿ ಸಂಚರಿಸಲಿದೆ. ಅಂತಾರಾಷ್ಟ್ರೀಯ ಕ್ರೀಡಾಪಟುಗಳು ಬ್ಯಾಟನ್‌ ಹಿಡಿದು ಓಡುವ ಮೂಲಕ ಕ್ರೀಡಾಕೂಟದ ಪ್ರಚಾರ ನಡೆಸಲಿದ್ದಾರೆ. ಕ್ರೀಡಾಕೂಟದ ಉದ್ಘಾಟನಾ ಸಮಾರಂಭದ ವೇಳೆ ಬ್ಯಾಟನನ್ನು ರಾಣಿ ಇಲ್ಲವೇ ಅವರ ಪ್ರತಿನಿಧಿಗೆ ಹಿಂದಿರುಗಿಸಲಾಗುತ್ತದೆ. ಆ ಬಳಿಕ ಕ್ರೀಡಾಕೂಟಕ್ಕೆ ಅಧಿಕೃತ ಚಾಲನೆ ದೊರೆಯಲಿದೆ. 1958ರ ಕಾರ್ಡಿಫ್‌ ಕಾಮನ್‌ವೆಲ್ತ್‌ ಕ್ರೀಡಾಕೂಟದ ವೇಳೆ ಈ ಸಂಪ್ರದಾಯ ಆರಂಭಗೊಂಡಿತು.

ಅಸ್ಸಾಂ ಡಿವೈಎಸ್‌ಪಿ ಆಗಿ ಬಾಕ್ಸರ್‌ ಲವ್ಲೀನಾ ನೇಮಕ

ನವದೆಹಲಿ: ಟೋಕಿಯೋ ಒಲಿಂಪಿಕ್ಸ್‌ (Tokyo Olympics) ಕಂಚಿನ ಪದಕ ವಿಜೇತ ಬಾಕ್ಸರ್‌ ಲವ್ಲೀನಾ ಬೊರ್ಗೊಹಐನ್‌ (Lovlina Borgohain) ಅಸ್ಸಾಂನ ಸಹಾಯಕ ಪೊಲೀಸ್‌ ಅಧೀಕ್ಷಕ(ಡಿವೈಎಸ್‌ಪಿ)ರಾಗಿ ನೇಮಕಗೊಂಡಿದ್ದಾರೆ. ಮುಖ್ಯಮಂತ್ರಿ ಹೇಮಂತ ಬಿಸ್ವಾ ಶರ್ಮಾ ಉಪಸ್ಥಿತಿಯಲ್ಲಿ ನಡೆದ ಸಮಾರಂಭದಲ್ಲಿ ಅವರು ಹುದ್ದೆ ಅಲಂಕರಿಸಿದರು. ಲವ್ಲೀನಾ ತಮ್ಮ ಸಂಬಳದ ಜೊತೆ ಪ್ರತಿ ತಿಂಗಳು ತರಬೇತಿಗಾಗಿ 1 ಲಕ್ಷ ರುಪಾಯಿ ಪಡೆಯಲಿದ್ದಾರೆ.

ಸರ್ಕಾರದ ಈ ದೊಡ್ಡ ಹುದ್ದೆ ಸಿಕ್ಕಿರುವುದಕ್ಕೆ ಒಲಿಂಪಿಕ್ಸ್ ಪದಕ ವಿಜೇತೆ ಸಂತಸ ವ್ಯಕ್ತಪಡಿಸಿದ್ದಾರೆ. ಇದರ ಜತೆಗೆ ಅಸ್ಸಾಂ ಮುಖ್ಯಮಂತ್ರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಆದರೆ ಪೊಲೀಸ್ ಹುದ್ದೆ ಸಿಕ್ಕಿದ್ದರೂ ಸಹಾ ತಮ್ಮ ಗುರಿಯೇನಿದ್ದರೂ 2024ರ ಒಲಿಂಪಿಕ್ಸ್‌ನಲ್ಲಿ ದೇಶಕ್ಕೆ ಚಿನ್ನ ಗೆಲ್ಲುವುದಾಗಿದೆ ಎಂದು ಟ್ವೀಟ್‌ ಮಾಡಿದ್ದಾರೆ.

Pro Kabaddi League: ಪವನ್ ಶೆರಾವತ್ ಬಿರುಗಾಳಿ, ಡೆಲ್ಲಿ ಎದುರು ಬುಲ್ಸ್‌ಗೆ ಭರ್ಜರಿ ಜಯಭೇರಿ

ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾರತವು ಒಂದು ಚಿನ್ನ ಹಾಗೂ ಎರಡು ಬೆಳ್ಳಿ ಪದಕ ಸಹಿತ ಒಟ್ಟು 7 ಪದಕಗಳನ್ನು ಜಯಿಸುವಲ್ಲಿ ಯಶಸ್ವಿಯಾಗಿತ್ತು. ಈ ಪೈಕಿ ಬಾಕ್ಸಿಂಗ್‌ನಲ್ಲಿ ಈ ಬಾರಿ ಪದಕ ಗೆದ್ದ ಏಕೈಕ ಭಾರತೀಯ ಬಾಕ್ಸರ್ ಎನ್ನುವ ಕೀರ್ತಿಗೆ ಅಸ್ಸಾಂನ ಲವ್ಲೀನಾ ಬೊರ್ಗೊಹಐನ್‌ ಪಾತ್ರರಾಗಿದ್ದರು. 

ಪ್ರೊ ಕಬಡ್ಡಿ: ಪುಣೇರಿ ಪಲ್ಟನ್‌, ಬೆಂಗಾಲ್‌ ವಾರಿಯರ್ಸ್‌ಗೆ ಜಯ

ಬೆಂಗಳೂರು: 8ನೇ ಆವೃತ್ತಿಯ ಪ್ರೊ ಕಬಡ್ಡಿಯಲ್ಲಿ (Pro Kabaddi League) ಬೆಂಗಾಲ್‌ ವಾರಿಯರ್ಸ್‌ 4ನೇ ಗೆಲುವು ದಾಖಲಿಸಿತು. ಗುರುವಾರ ತಮಿಳ್‌ ತಲೈವಾಸ್‌ ವಿರುದ್ಧ ಬೆಂಗಾಲ್‌ 28-37 ಅಂಕಗಳಿಂದ ಜಯಗಳಿಸಿತು. ನಾಯಕ ಮಣೀಂದರ್‌ ಸಿಂಗ್‌ 12 ರೈಡ್‌ ಅಂಕ ಗಳಿಸಿದರೆ, ಅಮಿತ್‌ 5 ಟ್ಯಾಕಲ್‌ ಅಂಕ ಪಡೆದರು. ಗೆಲುವಿನೊಂದಿಗೆ ಬೆಂಗಾಲ್‌ 9ನೇ ಸ್ಥಾನಕ್ಕೇರಿದರೆ, ತಲೈವಾಸ್‌ 4ನೇ ಸ್ಥಾನದಲ್ಲೇ ಉಳಿದಿದೆ. 

ಮಂಗಳವಾರದ ಇನ್ನೊಂದು ಪಂದ್ಯದಲ್ಲಿ ಯು ಮುಂಬಾ ವಿರುದ್ಧ ಪುಣೇರಿ ಪಲ್ಟನ್‌ 23-42 ಅಂಕಗಳಿಂದ ಜಯ ಸಾಧಿಸಿತು. ನಾಯಕ ನಿತಿನ್‌ ತೋಮರ್‌ 4 ರೈಡ್‌, 5 ಟ್ಯಾಕಲ್‌ ಅಂಕ ಪಡೆದು ಮಿಂಚಿದರು. ಸದ್ಯ ಮುಂಬಾ 5ನೇ ಹಾಗೂ ಪುಣೇರಿ 10ನೇ ಸ್ಥಾನದಲ್ಲಿದೆ.

Latest Videos
Follow Us:
Download App:
  • android
  • ios