Commonwealth Games: ಟೇಬಲ್‌ ಟೆನಿಸ್‌ ತಂಡಕ್ಕೆ ಚಿನ್ನ, ಬೆಳ್ಳಿ ಭಾರ ಎತ್ತಿದ ವಿಕಾಸ್‌ ಠಾಕೂರ್‌!

ಬರ್ಮಿಂಗ್‌ಹ್ಯಾಂನಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಭಾರತದ ಪದಕದ ಅಭಿಯಾನ ಭರ್ಜರಿಯಾಗಿ ಮುಂದುವರಿದಿದೆ. ಲಾನ್‌ ಬೌಲ್ಸ್‌ ತಂಡ ಚಿನ್ನದ ಪದಕ ಗೆದ್ದ ಬಳಿಕ, ಪುರುಷರ ಟೇಬಲ್‌ ಟೆನಿಸ್‌ ತಂಡ ಕೂಡ ಚಿನ್ನದ ಪದಕದ ಸಾಧನೆ ಮಾಡಿದೆ. ಇದರ ನಡುವೆ ವೇಟ್‌ ಲಿಫ್ಟಿಂಗ್‌ನಲ್ಲಿ ಭಾರತ ಪದಕ ಎತ್ತುವುದು ಮುಂದುವರಿದಿದ್ದು, ಮಂಗಳವಾರ ವಿಕಾಸ್‌ ಠಾಕೂರ್‌ ಬೆಳ್ಳಿ ಪದಕ ಜಯಿಸಿದ್ದಾರೆ.

Commonwealth Games 2022 India won gold medal in table tennis Vikas Thakur wins silver in weightlifting san

ಬರ್ಮಿಂಗ್‌ ಹ್ಯಾಂ (ಆ.2): ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಪುರುಷರ ಟೇಬಲ್ ಟೆನಿಸ್ ತಂಡ ಚಿನ್ನದ ಪದಕವನ್ನು ಗೆದ್ದುಕೊಂಡಿದೆ. ಅಂತಿಮ ಪಂದ್ಯದಲ್ಲಿ ಭಾರತ 3-1 ರಿಂದ  ಸಿಂಗಾಪುರವನ್ನು ಸೋಲಿಸಿತು. ಭಾರತದ ಪರ ಹರ್ಮೀತ್ ದೇಸಾಯಿ ಮತ್ತು ಜಿ ಸತ್ಯನ್ ಡಬಲ್ಸ್ ಪಂದ್ಯದಲ್ಲಿ ಗೆಲುವನ್ನು ದಾಖಲಿಸುವ ಮೂಲಕ ಭಾರತಕ್ಕೆ ಉತ್ತಮ ಆರಂಭ ನೀಡಿದರು. ಆದಾಗ್ಯೂ, ಚೆವ್ ಝೆ ಯು ಕ್ಲಾರೆನ್ಸ್ ಮುಂದಿನ ಗೇಮ್ ಅನ್ನು ಗೆದ್ದು ಸಿಂಗಾಪುರವನ್ನು 1-1 ರಲ್ಲಿ ಸಮಬಲಗೊಳಿಸಿದರು. ಆದರೆ ಜಿ.ಸತ್ಯನ್ ಮತ್ತು ಹರ್ಮೀತ್ ದೇಸಾಯಿ ತಮ್ಮ ಪಂದ್ಯಗಳನ್ನು ಗೆಲ್ಲುವ ಮೂಲಕ ಭಾರತಕ್ಕೆ ಚಿನ್ನವನ್ನು ಖಚಿತಪಡಿಸಿದರು. ಆ ಬಳಿಕ ನಡೆದ ವೇಟ್‌ಲಿಫ್ಟಿಂಗ್‌ ಸ್ಪರ್ಧೆಯಲ್ಲಿ ವಿಕಾಸ್ ಠಾಕೂರ್ ಪುರುಷರ 96 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕವನ್ನು ಗೆದ್ದರು ಮತ್ತು 2022 ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕ್ರೀಡೆಯಲ್ಲಿ ಭಾರತದ ಅದ್ಭುತ ಓಟವನ್ನು ಮುಂದುವರೆಸಿದರು. ಇದು ಹಾಲಿ ಗೇಮ್ಸ್‌ನಲ್ಲಿ ಭಾರತ ವೇಟ್‌ ಲಿಫ್ಟಿಂಗ್‌ ಸ್ಪರ್ಧೆಯಲ್ಲಿ ಗೆದ್ದ 8ನೇ ಪದಕ ಇದಾಗಿದೆ. ವಿಕಾಸ್‌ ಠಾಕೂರ್‌ 346 ಕೆಜಿ ಭಾರ ಎತ್ತುವ ಮೂಲಕ ಬೆಳ್ಳಿ ಪದಕ ಜಯಿಸಿದರು. ಸ್ನ್ಯಾಚ್‌ ವಿಭಾಗದಲ್ಲಿ ಗರಿಷ್ಠ 155 ಕೆಜಿ ಭಾರ ಎತ್ತಿದರೆ, ಕ್ಲೀನ್‌ ಆಂಡ್‌ ಜರ್ಕ್‌ನಲ್ಲಿ ಗರಿಷ್ಠ 191 ಕೆಜಿ ಭಾರ ಎತ್ತುವ ಮೂಲಕ ಪದಕ ಗೆದ್ದರು.

ಕಾಮನ್ವೆಲ್ತ್ ಗೇಮ್ಸ್ 2022 ರಲ್ಲಿ, ಭಾರತ ಇದುವರೆಗೆ 12 ಪದಕಗಳನ್ನು ಗೆದ್ದಿದೆ, ಇದರಲ್ಲಿ ಐದು ಚಿನ್ನ, ನಾಲ್ಕು ಬೆಳ್ಳಿ ಮತ್ತು ಮೂರು ಕಂಚಿನ ಪದಕಗಳು ಸೇರಿವೆ. ವಿಶೇಷವೆಂದರೆ ವೇಟ್ ಲಿಫ್ಟಿಂಗ್ ನಲ್ಲಿ ಎಂಟು ಪದಕಗಳು ಬಂದಿವೆ. ಅದೇ ಸಮಯದಲ್ಲಿ, ಭಾರತವು ಜೂಡೋದಲ್ಲಿ ಎರಡು ಪದಕಗಳನ್ನು ಜಯಿಸಿದೆ. ಲಾನ್ ಬೌಲ್ಸ್‌ನಲ್ಲಿ ಮಹಿಳೆಯರ ತಂಡ ಹಾಗೂ ಟೇಬಲ್ ಟೆನಿಸ್ ನಲ್ಲಿ ಪುರುಷರ ತಂಡ ಚಿನ್ನದ ಪದಕ ಗೆದ್ದುಕೊಂಡಿತು. ಪುರುಷರ ಟೇಬಲ್ ಟೆನಿಸ್‌ನ ಟೀಮ್ ಇವೆಂಟ್‌ನಲ್ಲಿ ಭಾರತ ಸತತ ಎರಡನೇ ಬಾರಿಗೆ ಚಿನ್ನದ ಪದಕ ಗೆದ್ದಿದೆ. 2018 ರ ಗೋಲ್ಡ್ ಕೋಸ್ಟ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತೀಯ ಪುರುಷರ ಟೇಬಲ್ ಟೆನಿಸ್ ಚಿನ್ನದ ಪದಕವನ್ನು ಗೆದ್ದಿದೆ. ಅಂದು ಫೈನಲ್ ಪಂದ್ಯದಲ್ಲಿ ಭಾರತ ತಂಡ ನೈಜೀರಿಯಾವನ್ನು 3-0 ಅಂತರದಿಂದ ಸೋಲಿಸಿತ್ತು.

Commonwealth Games: ಲಾನ್‌ ಬೌಲ್ಸ್‌ನಲ್ಲಿ ಐತಿಹಾಸಿಕ ಚಿನ್ನ ಗೆದ್ದ ಭಾರತ

198 ಕೆಜಿ ಎತ್ತುವಲ್ಲಿ ವಿಫಲರಾದ ಠಾಕೂರ್‌: ಸ್ನ್ಯಾಚ್ ಸುತ್ತಿನ ನಂತರ ವಿಕಾಸ್‌ ಠಾಕೂರ್‌ ಫಿಜಿಯ ರೈನಿಬೋಗಿಯೊಂದಿಗೆ ಜಂಟಿ-ಮೂರನೇ ಸ್ಥಾನ ಪಡೆದುಕೊಂಡಿದ್ದರು. ಕ್ಲೀನ್‌ ಆಂಡ್‌ ಜರ್ಕ್‌ನಲ್ಲಿ ಮೊದಲು 187 ಕೆಜಿಯಿಂದ ಆರಂಭಿಸಿದ ವಿಕಾಸ್‌ ಠಾಕೂರ್‌ ಅದರಲ್ಲಿ ಯಶಸ್ವಿಯಾಗಿದ್ದರು. ಅದರೊಂದಿಗೆ ಫಿಜಿಯ ವೇಟ್‌ ಲಿಫ್ಟರ್‌ ವಿರುದ್ಧ 2 ಕೆಜಿಯ ಮುನ್ನಡೆ ಪಡೆದುಕೊಂಡಿದ್ದರು. ಆ ಬಳಿಕ ನಡೆದ 2ನೇ ಲಿಫ್ಟ್‌ನಲ್ಲಿ ಫಿಜಿ ಲಿಫ್ಟರ್‌ 188 ಕೆಜಿ ಭಾರ ಎತ್ತಿದರೆ, ಭಾರತದ ವಿಕಾಸ್‌ ಠಾಕೂರ್ 191 ಕೆಜಿ ಭಾರ ಎತ್ತಿದರು.

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತಕ್ಕೆ ಮತ್ತೊಂದು ಪದಕ, ಕಂಚು ಗೆದ್ದ ಹರ್ಜಿಂದರ್ ಕೌರ್!

ಆದರೆ, ಅಂತಿಮ ಅವಕಾಶದಲ್ಲಿ 198 ಕೆಜಿ ಭಾರ ಎತ್ತಲು ಪ್ರಯತ್ನಿಇದ ವಿಕಾಸ್‌ ಠಾಕೂರ್‌ ಅದರಲ್ಲಿ ವಿಫಲರಾಗಿದ್ದರು. ಆದರೆ, ಈ ವೇಳೆಗಾಗಲೇ ಅವರು ತಮ್ಮ ಬೆಳ್ಳಿ ಪದಕವನ್ನು ಖಚಿತಪಡಿಸಿಕೊಂಡಿದ್ದರು. ಇದು ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ವಿಕಾಸ್‌ ಠಾಕೂರ್‌ ಅವರ ಸತತ ಮೂರನೇ ಪದಕ ಇದಾಗಿದೆ. 2014ರ ಗೇಮ್ಸ್‌ನಲ್ಲಿ ಬೆಳ್ಳಿ ಗೆದ್ದಿದ್ದ ವಿಕಾಸ್‌ ಠಾಕೂರ್‌, 2018ರಲ್ಲಿ ಕಂಚಿನ ಪದಕ ಜಯಿಸಿದ್ದರು. ಸಮೋವಾದ ಡಾನ್ ಒಪೆಲೋಜ್ ಒಟ್ಟು 381 ಕೆಜಿ ಎತ್ತುವ ಮೂಲಕ ಚಿನ್ನದ ಪದಕ ಗೆದ್ದರು.

 


 

Latest Videos
Follow Us:
Download App:
  • android
  • ios