ರೈಲು ಹತ್ತುವ ಆಸೆಯಿಂದ ಅಥ್ಲೆಟಿಕ್ಸ್‌ಗೆ ಬಂದ ರಕ್ಷಿತಾ ಈಗ ಪ್ಯಾರಾಲಿಂಪಿಕ್ಸ್‌ಗೆ!
ಶಾಲೆಯಲ್ಲಿ ಇದ್ದಾಗ ರೈಲಿನಲ್ಲಿ ಹೋಗಬಹುದು ಎನ್ನುವ ಆಸೆಯಿಂದಾಗಿ ಕ್ರೀಡೆಗೆ ಕಾಲಿಟ್ಟ ರಕ್ಷಿತಾ ಈಗ ದೇಶ ವಿದೇಶಗಳಲ್ಲಿ ಭಾರತದ, ಕರ್ನಾಟಕದ ಬಾವುಟವನ್ನು ಹಾರಿಸುತ್ತಿದ್ದಾರೆ. ಮಲೆನಾಡಿನ ಹೆಮ್ಮೆಯ ಸಾಧಕಿ ಇದೀಗ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕಮಾಲ್ ಮಾಡಲು ಸಜ್ಜಾಗಿದ್ದಾರೆ.
- ನಾಸಿರ್ ಸಜಿಪ, ಕನ್ನಡಪ್ರಭ
ಬೆಂಗಳೂರು: ಹುಟ್ಟುವಾಗಲೇ ಕಣ್ಣಿಲ್ಲದ ಕುರುಡಿ. ಬದುಕಿಗೆ ಬೆಳಕಾಗಬೇಕಿದ್ದ ತಾಯಿಯನ್ನು ತನ್ನ 2ನೇ ವರ್ಷಕ್ಕೆ, ಜೀವನದ ಹಾದಿಗೆ ಊರುಗೋಲಾಗಬೇಕಿದ್ದ ತಂದೆಯನ್ನು 10ನೇ ವರ್ಷಕ್ಕೇ ಕಳೆದುಕೊಂಡ ಅನಾಥೆ ಆಕೆ. ಹೆಸರು ರಕ್ಷಿತಾ ರಾಜು. ಕಣ್ಣಿಲ್ಲದ ಬಾಲಕಿಗೆ ಕಣ್ಣಾಗಬೇಕಿದ್ದ ಪೋಷಕರೇ ಇಲ್ಲದಿರುವಾಗ ರಕ್ಷಿತಾ ಎಂಬ ಮಲೆನಾಡ ಮಗಳ ಬದುಕು ಒಂದರ್ಥದಲ್ಲಿ ಮುಗಿದಂತೆ. ಆದರೆ ಛಲವೊಂದಿದ್ದರೆ ಏನು ಬೇಕಾದರೂ ಮಾಡಬಹುದು ಎಂದರಿತಿದ್ದ ರಕ್ಷಿತಾ, ಈಗ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಲು ಪ್ಯಾರಿಸ್‌ಗೆ ವಿಮಾನ ಹತ್ತಿದ್ದಾರೆ.
ಶಾಲೆಯಲ್ಲಿ ಇದ್ದಾಗ ರೈಲಿನಲ್ಲಿ ಹೋಗಬಹುದು ಎನ್ನುವ ಆಸೆಯಿಂದಾಗಿ ಕ್ರೀಡೆಗೆ ಕಾಲಿಟ್ಟ ರಕ್ಷಿತಾ ಈಗ ದೇಶ ವಿದೇಶಗಳಲ್ಲಿ ಭಾರತದ, ಕರ್ನಾಟಕದ ಬಾವುಟವನ್ನು ಹಾರಿಸುತ್ತಿದ್ದಾರೆ.
ಕ್ರಿಸ್ಟಿಯಾನೋ ರೊನಾಲ್ಡೊ ಗೆಳತಿ ಜಾರ್ಜಿನಾ ರೊಡ್ರಿಗಸ್ ಬಗ್ಗೆ ನಿಮಗೆ ಗೊತ್ತಿರದ 7 ಇಂಟ್ರೆಸ್ಟಿಂಗ್ ಸಂಗತಿಗಳಿವು
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರು ಗುಡ್ನಳ್ಳಿಯ ಅಂಧ ಹೆಣ್ಣುಮಗಳು ರಕ್ಷಿತಾ, ಆ.28ರಿಂದ ಆರಂಭಗೊಳ್ಳಲಿರುವ ಪ್ಯಾರಾಲಿಂಪಿಕ್ಸ್‌ನಲ್ಲಿ ಮಹಿಳೆಯರ 1500 ಮೀ. ಓಟದ ರೇಸ್‌ನಲ್ಲಿ ಸ್ಪರ್ಧಿಸಲಿದ್ದಾರೆ. ಈ ವಿಭಾಗದಲ್ಲಿ ಸ್ಪರ್ಧಿಸಲಿರುವ ಭಾರತದ ಮೊದಲ ಅಥ್ಲೀಟ್ ಎಂಬ ಖ್ಯಾತಿಗೂ ಪಾತ್ರರಾಗಿದ್ದಾರೆ. ಈಗಾಗಲೇ ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲಿ 2 ಬಾರಿ ಬಂಗಾರದ ಸಾಧನೆ ಮಾಡಿರುವ 22 ವರ್ಷದ ರಕ್ಷಿತಾ, ಪ್ಯಾರಾಲಿಂಪಿಕ್ಸ್‌ನಲ್ಲೂ ಚಿನ್ನದ ಗರಿ ತೊಡುವ ಕಾತರದಲ್ಲಿದ್ದಾರೆ.
2028ರ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಸೇರ್ಪಡೆ; ಕೊಹ್ಲಿ ಗತ್ತು ಒಲಿಂಪಿಕ್ಸ್‌ಗೂ ಗೊತ್ತು..!
ಬದುಕೇ ರೋಚಕ: ಬಾಲ್ಯದಲ್ಲೇ ಪೋಷಕರನ್ನು ಕಳೆದುಕೊಂಡ ರಕ್ಷಿತಾ ಬೆಳೆದಿದ್ದು ಮಾತು ಬಾರದ, ಕಿವಿ ಕೇಳದ ಅಜ್ಜಿಯ ಪಾಲನೆಯಲ್ಲಿ. ಅವರಿವರ ಚುಚ್ಚು, ಅಪಹಾಸ್ಯದ ಮಾತುಗಳು ಅಜ್ಜಿ ಕೇಳಿಸಿಕೊಳ್ಳಲಿಲ್ಲ. 12ನೇ ವರ್ಷಕ್ಕೆ ರಕ್ಷಿತಾರನ್ನು ಊರಿನ ಸಮೀಪದ ಶಾಲೆಗೆ ಸೇರಿಸಿದ್ದ ಅವರು, ಬಳಿಕ ಅಲ್ಲಿನ ಶಿಕ್ಷಕರ ಸೂಚನೆ ಮೇರೆಗೆ ಚಿಕ್ಕಮಗಳೂರಿನ ಆಶಾಕಿರಣ ಅಂಧರ ಶಾಲೆಗೆ ಕಳುಹಿಸಿದರು. 2016ರಲ್ಲಿ ಡೆಲ್ಲಿಯಲ್ಲಿ ನಡೆದ ಐಬಿಎಸ್ಎ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ರಕ್ಷಿತಾ ಮೊದಲ ಬಾರಿ 400 ಮೀ. ಓಟದಲ್ಲಿ ಚಿನ್ನ, 100 ಮೀ. ಓಟದಲ್ಲಿ ಬೆಳ್ಳಿ ಗೆದ್ದರು. 2017ರಲ್ಲಿ ಕಿರಿಯರ ಏಷ್ಯನ್ ಗೇಮ್ಸ್‌ಗೂ ಆಯ್ಕೆಯಾದರು. ಆದರೆ, ಪಾಸ್‌ಪೋರ್ಟ್ ಇಲ್ಲದ ಕಾರಣ ದುಬೈಗೆ ಪ್ರಯಾಣಿಸುವ ಅವಕಾಶ ಕಳೆದುಕೊಂಡರು.
ವಿನೇಶ್ ಫೋಗಟ್ ಸ್ವಾಗತಿಸುವ ಭರದಲ್ಲಿ ಭಾರತದ ಬಾವುಟ ತುಳಿದ ಬಜರಂಗ್ ಪೂನಿಯಾ..! ವಿಡಿಯೋ ವೈರಲ್
ಬದುಕು ಬದಲಿಸಿದ ರೈಲು ಪ್ರಯಾಣ!
ರಕ್ಷಿತಾ 2016ರಲ್ಲಿ ಚಿಕ್ಕಮಗಳೂರಿನ ಆಶಾಕಿರಣ ಅಂಧರ ಶಾಲೆಯಲ್ಲಿದ್ದಾಗ ಇತರ ಮಕ್ಕಳು ಚಾಂಪಿಯನ್‌ಶಿಪ್‌ಗಾಗಿ ನವದೆಹಲಿಗೆ ರೈಲಿನಲ್ಲಿ ತೆರಳುತ್ತಿದ್ದರು. ಇದನ್ನು ಅರಿತ ರಕ್ಷಿತಾಗೂ ರೈಲಿನಲ್ಲಿ ಪ್ರಯಾಣಿಸುವ ಆಸೆ ಹುಟ್ಟಿತು. ಚಿಕ್ಕಮಗಳೂರು ದಾಟಿ ಆಚೆ ಹೋಗಿರದ ರಕ್ಷಿತಾಗೆ ಹೊರ ಜಗತ್ತಿಗೆ ಕಾಲಿಡುವ ತವಕ. ಶಿಕ್ಷಕರಲ್ಲಿ ತಮಗೂ ಅಥ್ಲೆಟಿಕ್ಸ್‌ನಲ್ಲಿ ಸೇರುವ ಬಯಕೆಯಿದೆ ಎಂದು ಹೇಳಿದ ಆಕೆ, ಅನುಮತಿ ಪಡೆದು ನವದೆಹಲಿಗೆ ಪ್ರಯಾಣಿಸಿದರು. ತಮ್ಮ ಮೊದಲ ಪ್ರಯತ್ನದಲ್ಲೇ ಪದಕ ಗೆದ್ದ ರಕ್ಷಿತಾ ಆ ಬಳಿಕ ಹಿಂದಿರುಗಿ ನೋಡಿದ್ದೇ ಇಲ್ಲ.
ಗುರಿ ಮುಟ್ಟಿಸುವ ಗುರು ರಾಹುಲ್
ರಕ್ಷಿತಾ ರಾಜು ಸಾಧನೆಯ ಹಿಂದೆ ಅವರ ಗುರು, ಗೈಡ್ ರನ್ನರ್ ರಾಹುಲ್ ಬಾಲಕೃಷ್ಣ ಕೊಡುಗೆ ಅಪಾರ. ಒಂದರ್ಥದಲ್ಲಿ ರಕ್ಷಿತಾರ ಬೆನ್ನುಲುಬು. ರಕ್ಷಿತಾಗೆ ಗುರಿ ಇದ್ದರೆ, ಆ ಗುರಿಯನ್ನು ಮುಟ್ಟಿಸುವುದು ಇದೇ ರಾಹುಲ್. 2017ರಲ್ಲಿ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಮೊದಲ ಬಾರಿ ರಕ್ಷಿತಾರ ಪ್ರತಿಭೆಯನ್ನು ಗುರುತಿಸಿದ್ದ ಬೆಂಗಳೂರಿನ ರಾಹುಲ್, ರಕ್ಷಿತಾರನ್ನು ತಮ್ಮೊಂದಿಗೇ ಇರಿಸಿಕೊಂಡು ತರಬೇತಿ ನೀಡಿದರು. ಕೆಲವು ಬಾರಿ ಕೂಟಗಳಿಗೆ ತೆರಳಲು ಹಣವಿಲ್ಲದಿದ್ದಾಗ ಸಾಲ ಮಾಡಿದ್ದೂ ಇದೆ ಎನ್ನುತ್ತಾರೆ ರಾಹುಲ್. ಕಳೆದ ಕೆಲ ವರ್ಷಗಳಿಂದ ರಕ್ಷಿತಾಗೆ ಬೆಂಗಳೂರಿನ ಸಾಯ್ ಕೇಂದ್ರದಲ್ಲಿ ತರಬೇತಿ ನೀಡುತ್ತಿರುವ ಅವರು, ಪ್ಯಾರಾಲಿಂಪಿಕ್ಸ್‌ನಲ್ಲೂ ರಕ್ಷಿತಾರ ಕೈ ಹಿಡಿದೇ ಓಡಲಿದ್ದಾರೆ.
ಪ್ರಧಾನಿ ಮೋದಿಗೆ ವಿಶೇಷ ಉಡುಗೊರೆ ನೀಡಿದ್ದ ಕನ್ನಡತಿ
2023ರ ಪ್ಯಾರಾ ಏಷ್ಯಾಡ್‌ನಲ್ಲಿ ಪಾಲ್ಗೊಂಡ ಕ್ರೀಡಾಪಟುಗಳಿಗೆ ಪ್ರಧಾನಿ ಮೋದಿ ನವೆಂಬರ್‌ನಲ್ಲಿ ಅಭಿನಂದನಾ ಸಮಾರಂಭ ಏರ್ಪಡಿಸಿದ್ದರು. ಈ ವೇಳೆ ರಕ್ಷಿತಾ, ತಾವು ಗೈಡ್ ರನ್ನರ್ ಜೊತೆ ಓಡುವಾಗ ಧರಿಸುವ ಟಿಟ್ಟರ್ ಅನ್ನು ಪ್ರಧಾನಿಗೆ ಉಡುಗೊರೆಯಾಗಿ ನೀಡಿ ಗಮನ ಸೆಳೆದಿದ್ದರು.
ಈಗಾಗಲೇ ಹಲವು ಪದಕ ಗೆದ್ದಿರುವ ರಕ್ಷಿತಾ!
2018ರಲ್ಲಿ ಏಷ್ಯನ್ ಪ್ಯಾರಾ ಗೇಮ್ಸ್‌ನ 1500 ಮೀ.ನಲ್ಲಿ ಚಿನ್ನ ಗೆದ್ದ ರಕ್ಷಿತಾ, 2023ರ ಪ್ಯಾರಾ ಏಷ್ಯಾಡ್‌ನಲ್ಲೂ ಸ್ವರ್ಣ ಪದಕಕ್ಕೆ ಕೊರಳೊಡ್ಡಿದ್ದಾರೆ. ಅಲ್ಲದೆ 2023ರಲ್ಲಿ ಅಂತಾರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ ಬೆಳ್ಳಿ, ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 5ನೇ ಸ್ಥಾನ ಪಡೆದಿದ್ದಾರೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಚಾಂಪಿಯನ್‌ಶಿಪ್‌ಗಳಲ್ಲಿ ಹಲವು ಬಾರಿ ಚಾಂಪಿಯನ್ ಆಗಿರುವ ಅವರು, ತಮ್ಮ ಚೊಚ್ಚಲ ಪ್ಯಾರಾಲಿಂಪಿಕ್ಸ್‌ನಲ್ಲೇ ಪದಕ ಸಾಧನೆಯ ಕಾತರದಲ್ಲಿದ್ದಾರೆ.