ಟೋಕಿಯೋ ಒಲಿಂಪಿಕ್ ಪದಕ ವಿಜೇತ ಬಜರಂಗ್ ಫೂನಿಯಾ, ಇದೀಗ ವಿನೇಶ್ ಫೋಗಟ್ ಅವರನ್ನು ಸ್ವಾಗತಿಸುವ ಭರದಲ್ಲಿ ತ್ರಿವರ್ಣ ಧ್ವಜದ ಮೇಲೆ ಕಾಲಿಟ್ಟು ಅವಮಾನ ಮಾಡಿರುವ ಆರೋಪ ಕೇಳಿ ಬಂದಿದೆ.
ನವದೆಹಲಿ: ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಬಜರಂಗ್ ಪೂನಿಯಾ, ವಿನೇಶ್ ಫೋಗಟ್ ಅವರನ್ನು ಸ್ವಾಗತಿಸುವ ಭರದಲ್ಲಿ ಭಾರತದ ಬಾವುಟದ ಮೇಲೆ ಕಾಲಿಡುವ ಮೂಲಕ ವಿವಾದವನ್ನು ಮೈಮೇಲೆಳೆದುಕೊಂಡಿದ್ದಾರೆ. ಇಂದು ವಿನೇಶ್ ಫೋಗಟ್, ಪ್ಯಾರಿಸ್ ಒಲಿಂಪಿಕ್ಸ್ ಮುಗಿಸಿ ರಾಷ್ಟ್ರರಾಜಧಾನಿಯಲ್ಲಿರುವ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ವಿನೇಶ್ ಅವರನ್ನು ಒಲಿಂಪಿಯನ್‌ಗಳಾದ ಸಾಕ್ಷಿ ಮಲಿಕ್, ಬಜರಂಗ್ ಪೂನಿಯಾ ಸೇರಿದಂತೆ ಅಪಾರ ಸಂಖ್ಯೆಯ ಅಭಿಮಾನಿಗಳು ಆತ್ಮೀಯವಾಗಿ ಸ್ವಾಗತಿಸಿದರು.
ಒಲಿಂಪಿಕ್ ಪದಕದ ನಿರೀಕ್ಷೆಯಲ್ಲಿದ್ದ ತಾರಾ ಕುಸ್ತಿಪಟು ವಿನೇಶ್ ಫೋಗಟ್‌ಗೆ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ನ್ಯಾಯಾಲಯದ ಹಂಗಾಮಿ ಪೀಠ ಶಾಕ್ ನೀಡಿತ್ತು. 100 ಗ್ರಾಮ್ ತೂಕ ಹೆಚ್ಚಳದ ಕುರಿತಂತೆ ತಮ್ಮನ್ನು ಅನರ್ಹಗೊಳಿಸಿದ್ದನ್ನು ಪ್ರಶ್ನಿಸಿ ವಿನೇಶ್ ಫೋಗಟ್ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ನ್ಯಾಯಾಲಯದ ಹಂಗಾಮಿ ಪೀಠ ಮೆಟ್ಟಿಲೇರಿದ್ದರು. ಅದರೆ ಆಗಸ್ಟ್ 14ರಂದು ಈ ಪೀಠವು ವಿನೇಶ್ ಅರ್ಜಿಯನ್ನು ತಿರಸ್ಕರಿಸುವ ಮೂಲಕ ಶಾಕ್ ನೀಡಿತ್ತು. ಸಾಕಷ್ಟು ಕಾನೂನು ಹೋರಾಟದ ಹೊರತಾಗಿಯೂ ನಿರಾಸೆ ಅನುಭವಿಸಿದ ವಿನೇಶ್ ಇಂದು ಡೆಲ್ಲಿ ಏರ್‌ಪೋರ್ಟ್‌ಗೆ ಬಂದಿಳಿದರು.
ಪ್ಯಾರಿಸ್‌ನಿಂದ ಭಾರತಕ್ಕೆ ಬಂದಿಳಿಯುತ್ತಿದ್ದಂತೆಯೇ ಕಣ್ಣೀರಿಟ್ಟ ವಿನೇಶ್ ಫೋಗಟ್..!
ಡೆಲ್ಲಿ ಏರ್‌ಪೋರ್ಟ್‌ಗೆ ಬಂದಿಳಿದ ವಿನೇಶ್ ಫೋಗಟ್ ಅವರನ್ನು ಸಹ ಒಲಿಂಪಿಯನ್‌ಗಳಾದ ಸಾಕ್ಷಿ ಮಲಿಕ್ ಹಾಗೂ ಬಜರಂಗ್ ಪೂನಿಯಾ ಆತ್ಮೀಯವಾಗಿ ಭರಮಾಡಿಕೊಂಡರು. ಇದಾದ ಬಳಿಕ ತೆರೆದ ವಾಹನದ ಮೇಲೆ ವಿನೇಶ್ ಫೋಗಟ್ ಅವರನ್ನು ಅವರ ಮನೆಗೆ ಮೆರವಣಿಗೆಯ ಮೂಲಕ ಕರೆದೊಯ್ಯಲಾಯಿತು. ಈ ಸಂದರ್ಭದಲ್ಲಿ ಕಾರ್‌ನ ಬಾನೆಟ್ ಮೇಲೆ ಹಾಕಲಾಗಿದ್ದ ತ್ರಿವರ್ಣ ಧ್ವಜದ ಪೋಸ್ಟರ್ ಇರುವ ಬ್ಯಾನರ್ ಮೇಲೆ ಬಜರಂಗ್ ಪೂನಿಯಾ ನಿಂತಿರುವ ವಿಡಿಯೋ ತುಣುಕುಗಳು ಇದೀಗ ವೈರಲ್ ಆಗಿದೆ.
ನೀವು ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದ್ದೀರ ಎಂದರೇ ನಿಮ್ಮನ್ನು ಟೀಕಿಸಲೇಬಾರದು ಎಂದೇನಿಲ್ಲ, ನೀವು ತ್ರಿವರ್ಣ ಧ್ವಜದ ಮೇಲೆ ಕಾಲಿಟ್ಟಿರುವುದು ಸರಿಯಲ್ಲ ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.
