ವಿಶ್ವ ಟೂರ್ ಫೈನಲ್ಸ್: ಸೆಮೀಸ್ ರೇಸ್‌ನಿಂದ ಸಿಂಧು, ಶ್ರೀಕಾಂತ್ ಔಟ್
ವಿಶ್ವ ಟೂರ್ ಫೈನಲ್ಸ್ ಟೂರ್ನಿಯಲ್ಲಿ ಭಾರತದ ಹೋರಾಟ ಬಹುತೇಕ ಅಂತ್ಯವಾದಂತೆ ಆಗಿದೆ. ದೇಶದ ತಾರಾ ಬ್ಯಾಡ್ಮಿಂಟನ್ ಪಟುಗಳಾದ ಪಿ.ವಿ. ಸಿಂಧು ಹಾಗೂ ಕಿದಂಬಿ ಶ್ರೀಕಾಂತ್ ಟೂರ್ನಿಯಲ್ಲಿ ಸತತ ಎರಡು ಸೋಲು ಕಂಡು ನಿರಾಸೆ ಅನುಭವಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಬ್ಯಾಂಕಾಕ್(ಜ.29): ಭಾರತದ ಶಟ್ಲರ್‌ಗಳಾದ ಪಿ.ವಿ.ಸಿಂಧು ಹಾಗೂ ಕಿದಂಬಿ ಶ್ರೀಕಾಂತ್ ವಿಶ್ವ ಟೂರ್ ಫೈನಲ್ಸ್ ಟೂರ್ನಿಯ ಸೆಮಿಫೈನಲ್ ರೇಸ್‌ನಿಂದ ಹೊರಬಿದ್ದಿದ್ದಾರೆ. ಗುರುವಾರ ನಡೆದ ಗುಂಪು ಹಂತದ 2ನೇ ಪಂದ್ಯದಲ್ಲೂ ಸಿಂಧು ಹಾಗೂ ಶ್ರೀಕಾಂತ್ ಸೋಲು ಅನುಭವಿಸಿದರು.
ಮಹಿಳಾ ಸಿಂಗಲ್ಸ್‌ನ ‘ಬಿ’ ಗುಂಪಿನ ಪಂದ್ಯದಲ್ಲಿ ವಿಶ್ವ ಚಾಂಪಿಯನ್ ಸಿಂಧು ಥಾಯ್ಲೆಂಡ್‌ನ ರಚನಾಕ್ ಇಂಟನಾನ್ ವಿರುದ್ಧ 18-21, 13-21 ನೇರ ಗೇಮ್‌ಗಳಲ್ಲಿ ಪರಾಭವಗೊಂಡರು. ಮೊದಲ ಪಂದ್ಯದಲ್ಲಿ ಸಿಂಧು, ತೈಪೆಯ ತೈ ತ್ಸು ಯಿಂಗ್ ವಿರುದ್ಧ ಸೋಲುಂಡಿದ್ದರು. ಅಂತಿಮ ಪಂದ್ಯದಲ್ಲಿ ಭಾರತೀಯ ತಾರೆ, ಥಾಯ್ಲೆಂಡ್‌ನ ಪೊರ್ನ್‌ಪಾವಿ ಚೊಚುವಾಂಗ್ ವಿರುದ್ಧ ಸೆಣಸಲಿದ್ದಾರೆ.
ವಿಶ್ವ ಟೂರ್ ಫೈನಲ್ಸ್: ಸಿಂಧು, ಶ್ರೀಕಾಂತ್‌ಗೆ ಆರಂಭಿಕ ಆಘಾತ
ಪುರುಷರ ಸಿಂಗಲ್ಸ್‌ನ ‘ಬಿ’ ಗುಂಪಿನ 2ನೇ ಪಂದ್ಯದಲ್ಲಿ ಶ್ರೀಕಾಂತ್, ಚೈನೀಸ್ ತೈಪೆಯ ವಾಂಗ್ ತ್ಸು ವೀ ವಿರುದ್ಧ 21-19, 9-21, 19-21 ಗೇಮ್‌ಗಳಲ್ಲಿ ಸೋಲುಂಡರು. ಸತತ 2ನೇ ಪಂದ್ಯದಲ್ಲಿ ಮೊದಲ ಗೇಮ್ ಜಯಿಸಿದ ಹೊರತಾಗಿಯೂ ಶ್ರೀಕಾಂತ್‌ಗೆ ಪಂದ್ಯ ಗೆಲ್ಲಲು ಸಾಧ್ಯವಾಗಲಿಲ್ಲ. ಶುಕ್ರವಾರ ಗುಂಪು ಹಂತದ 3ನೇ ಹಾಗೂ ಅಂತಿಮ ಪಂದ್ಯದಲ್ಲಿ ಹಾಂಕಾಂಗ್‌ನ ಆ್ಯಂಗುಸ್ ಕಾ ಲಾಂಗ್ ವಿರುದ್ಧ ಸ್ಪರ್ಧಿಸಲಿದ್ದಾರೆ.