ಬೊಂಜೌರ್‌ ಪ್ಯಾರಿಸ್‌: ಬ್ರೇಕ್‌ಡ್ಯಾನ್ಸ್ ಹೊಸ ಸೇರ್ಪಡೆ, ಪದಕ ತಯಾರಿಗೆ ಐಫೆಲ್‌ ಟವರ್‌ನ ಕಬ್ಬಿಣ ಬಳಕೆ!

ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಇಂದು ಅಧಿಕೃತ ಚಾಲನೆ ಸಿಗಲಿದೆ. ಈ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದ ವಿಶೇಷತೆಗಳೇನು ಎನ್ನುವುದನ್ನು ನಾವಿಂದು ನೋಡೋಣ ಬನ್ನಿ

Bonjour Paris 2024 Breakdance is a new addition using Eiffel Tower iron for medal preparation kvn

ಬೊಂಜೌರ್‌ ಪ್ಯಾರಿಸ್‌...ಅರ್ಥಾತ್‌ ಹಲೋ ಪ್ಯಾರಿಸ್‌. ಖಂಡ, ದೇಶ, ಪ್ರಾಂತ್ಯ, ಜಿಲ್ಲೆ, ಗ್ರಾಮ...ಹೀಗೆ ಯಾವುದರ ಗಡಿಗಳಿಲ್ಲದೆ ವಿಶ್ವದ ಅಷ್ಟ ದಿಕ್ಕುಗಳ ಅಥ್ಲೀಟ್‌ಗಳನ್ನು ಒಗ್ಗೂಡಿಸುವ ಜಾಗತಿಕ ಕ್ರೀಡಾ ಸಂಗಮ ಒಲಿಂಪಿಕ್ಸ್‌ಗೆ ಪ್ಯಾರಿಸ್‌ ನಗರ ಸಜ್ಜಾಗಿ ನಿಂತಿದೆ. ಒಂದೆಡೆ ವಿಶ್ವ ಶ್ರೇಷ್ಠ ಅಥ್ಲೀಟ್‌ಗಳ ಸಾಮರ್ಥ್ಯ ಪ್ರದರ್ಶನಕ್ಕೆ ವೇದಿಕೆ ಒದಗಿಸಿಕೊಡಲು ಫ್ರಾನ್ಸ್‌ ರಾಜಧಾನಿ ಪ್ಯಾರಿಸ್‌ ಸಿದ್ಧಗೊಂಡಿದ್ದರೆ, ಮತ್ತೊಂದೆಡೆ ಕ್ರೀಡಾಕೂಟವನ್ನು ಕಣ್ತುಂಬಿಕೊಳ್ಳಲು ಕೋಟ್ಯಂತರ ಅಭಿಮಾನಿಗಳು ಕುತೂಹಲದ ಕಣ್ಣುಗಳಿಂದ ಕಾಯುತ್ತಿದ್ದಾರೆ. ಅಡೆತಡೆ, ಸವಾಲುಗಳನ್ನು ಹಿಮ್ಮೆಟ್ಟಿಸಿ ಪ್ಯಾರಿಸ್‌ ಒಲಿಂಪಿಕ್ಸ್‌ ಯಶಸ್ವಿಯಾಗಲಿ ಎಂಬುದೇ ಜಗದ ಆಶಯ.

ಜಗತ್ತಿನ ಅತಿದೊಡ್ಡ ಕ್ರೀಡಾಕೂಟ ಒಲಿಂಪಿಕ್ಸ್‌ಗೆ ಕ್ಷಣಗಣನೆ ಆರಂಭಗೊಂಡಿದ್ದು, ಪ್ಯಾರಿಸ್‌ನಲ್ಲಿ ಶುಕ್ರವಾರ ಕ್ರೀಡಾಕೂಟಕ್ಕೆ ಅಧಿಕೃತ ಚಾಲನೆ ಸಿಗಲಿದೆ. ಸೀನ್‌ ನದಿಯ ಮೇಲೆ ವರ್ಣರಂಜಿತ ಆರಂಭ ಪಡೆಯಲಿರುವ ಒಲಿಂಪಿಕ್ಸ್‌, ಪ್ಯಾರಿಸ್‌ನ ವಿವಿಧ ನಗರಗಳಲ್ಲಿ ಆ.11ರ ವರೆಗೂ ನಡೆಯಲಿದೆ. ಸಾವಿರಾರು ಕೋಟಿ ಖರ್ಚು ಮಾಡಿ ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸುತ್ತಿರುವ ಫ್ರಾನ್ಸ್‌, ಹಲವು ಸವಾಲುಗಳಿದ್ದರೂ ಅದನ್ನು ಸಮರ್ಥವಾಗಿ ಎದುರಿಸುವ ಗಟ್ಟಿ ನಿರ್ಧಾರದೊಂದಿಗೆ ಕ್ರೀಡಾಕೂಟದ ಆಯೋಜನೆಗೆ ಪಣತೊಟ್ಟಿದೆ. ಅಂದ ಹಾಗೆ ಇದು ಪ್ಯಾರಿಸ್‌ನಲ್ಲಿ ನಡೆಯುತ್ತಿರುವ 3ನೇ ಒಲಿಂಪಿಕ್ಸ್‌. 1900 ಹಾಗೂ 1924ರಲ್ಲಿ ಪ್ಯಾರಿಸ್‌ ನಗರ ಒಲಿಂಪಿಕ್ಸ್‌ ಆಯೋಜಿಸಿತ್ತು. ಭರ್ತಿ 1 ಶತಮಾನದ ಬಳಿಕ ಮತ್ತೊಮ್ಮೆ ಒಲಿಂಪಿಕ್ಸ್‌ ಕ್ರೀಡಾಕೂಟ ಪ್ಯಾರಿಸ್‌ ನಗರದಲ್ಲಿ ರಂಗೇರಲಿದೆ.

ಸಿಟಿ ಆಫ್‌ ಲವ್‌ ಪ್ಯಾರಿಸ್‌ನಲ್ಲಿ ಇಂದು ಒಲಿಂಪಿಕ್ಸ್‌ಗೆ ವರ್ಣರಂಜಿತ ಚಾಲನೆ..!

2017ರಲ್ಲಿ ಒಲಿಂಪಿಕ್ಸ್‌ ಆತಿಥ್ಯಕ್ಕೆ ಪ್ಯಾರಿಸ್‌ ಆಯ್ಕೆ

ಈ ಬಾರಿ ಒಲಿಂಪಿಕ್ಸ್‌ ಆತಿಥ್ಯಕ್ಕೆ ಪ್ಯಾರಿಸ್‌ನ್ನು 2017ರಲ್ಲೇ ಆಯ್ಕೆ ಮಾಡಲಾಗಿತ್ತು. ಪ್ಯಾರಿಸ್‌, ಹಂಬರ್ಗ್‌, ಬಾಸ್ಟನ್‌, ಬುಡಾಪೆಸ್ಟ್‌, ರೋಮ್‌ ಹಾಗೂ ಲಾಸ್‌ ಏಂಜಲೀಸ್‌ ನಗರಗಳು ಆತಿಥ್ಯಕ್ಕೆ ಬಿಡ್‌ ಸಲ್ಲಿಸಿದ್ದವು. ಆದರೆ ರಾಜಕೀಯ ಅಸ್ಥಿರತೆ ಹಾಗೂ ಇನ್ನಿತರ ಕಾರಣಗಳಿಂದಾಗಿ ಹಂಬರ್ಗ್‌, ಬಾಸ್ಟನ್‌, ಬುಡಾಪೆಸ್ಟ್‌, ರೋಮ್‌ ಆತಿಥ್ಯ ಹಕ್ಕು ರೇಸ್‌ನಿಂದ ಹಿಂದೆ ಸರಿದಿದ್ದವು. ಬಳಿಕ 2017ರಲ್ಲಿ ನಡೆದ ಅಂತಾರಾಷ್ಟ್ರೀಯ ಒಲಿಂಪಿಕ್‌ ಸಮಿತಿ ಸಭೆಯಲ್ಲಿ ಪ್ಯಾರಿಸ್‌ಗೆ 2024, ಲಾಸ್‌ ಏಂಜಲೀಸ್‌ಗೆ 2028ರ ಒಲಿಂಪಿಕ್ಸ್‌ ಆತಿಥ್ಯ ನೀಡಿತು.

ಪದಕ ತಯಾರಿಗೆ ಐಫೆಲ್‌ ಟವರ್‌ನ ಕಬ್ಬಿಣ ಬಳಕೆ!

ಇದು ಅಚ್ಚರಿಯಾದರೂ ಸತ್ಯ. ಒಲಿಂಪಿಕ್ಸ್‌ ವಿಜೇತರಿಗೆ ನೀಡಲಾಗುವ ಪದಕಗಳಿಗೆ ವಿಶ್ವಪ್ರಸಿದ್ಧ ಐಫೆಲ್‌ ಟವರ್‌ನಿಂದ ನವೀಕರಣ ವೇಳೆ ತೆಗೆಯಲಾದ ಕಬ್ಬಿಣದ ತುಂಡುಗಳನ್ನು ಬಳಸಲಾಗಿದೆ. ಫ್ರೆಂಚ್‌ ಸಂಸ್ಕೃತಿ ಹಾಗೂ ಪರಂಪರೆಯನ್ನು ಬಿಂಬಿಸುವ ನಿಟ್ಟಿನಲ್ಲಿ ಆಯೋಜಕರು ಟವರ್‌ನ ಕಬ್ಬಿಣದ ತುಂಡುಗಳನ್ನು ಬಳಸಿದ್ದಾರೆ. ಪದಕದ ಒಂದು ಬದಿಯಲ್ಲಿ ನಡುವೆ ಷಟ್ಕೋನಾಕೃತಿಯಲ್ಲಿ ಕಬ್ಬಿಣವನ್ನು ಅಳವಡಿಸಲಾಗಿದೆ.

ಪ್ಯಾರಿಸ್‌ ಒಲಿಂಪಿಕ್ಸ್‌ಗೆ ₹68.6 ಸಾವಿರ ಕೋಟಿ ವೆಚ್ಚ

ಪ್ಯಾರಿಸ್‌ ಒಲಿಂಪಿಕ್ಸ್‌ ಆಯೋಜನೆಗೆ ಬರೋಬ್ಬರಿ 8.2 ಬಿಲಿಯನ್‌ ಯುಎಸ್‌ ಡಾಲರ್‌ ಅಂದರೆ ಸುಮಾರು 68.6 ಸಾವಿರ ಕೋಟಿ ರು. ವೆಚ್ಚವಾಗಲಿದೆ. ಒಲಿಂಪಿಕ್ಸ್‌ ಕ್ರೀಡಾಂಗಣಗಳು, ಕ್ರೀಡಾ ಗ್ರಾಮ, ಪ್ಯಾರಿಸ್‌ನಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿ, ಅಥ್ಲೀಟ್‌ಗಳ ನಿತ್ಯ ಓಟಾಟ, ವೈದ್ಯಕೀಯ ಸೌಲಭ್ಯ ಸೇರಿದಂತೆ ವಿವಿಧ ರೀತಿಯ ಖರ್ಚುಗಳಿವೆ. ಇದು ಒಂದು ಅಂದಾಜು ಲೆಕ್ಕವಾಗಿದ್ದು, ಖರ್ಚು ಜಾಸ್ತಿಯಾದರೂ ಅಚ್ಚರಿಯಿಲ್ಲ.

ಒಲಿಂಪಿಕ್ಸ್‌ ಅಧಿಕೃತ ಆರಂಭಕ್ಕೂ ಮುನ್ನವೇ ಭಾರತಕ್ಕೆ ಗುಡ್‌ನ್ಯೂಸ್‌, ಆರ್ಚರಿಯಲ್ಲಿ ಕ್ವಾರ್ಟರ್‌ಫೈನಲ್‌ ಪ್ರವೇಶ!

ಪ್ಯಾರಿಸ್‌ನಿಂದ 16000 ಕಿ.ಮೀ. ದೂರದಲ್ಲೂ ಸ್ಪರ್ಧೆ

ಒಲಿಂಪಿಕ್ಸ್‌ನ ಕ್ರೀಡೆಗಳು ಆತಿಥ್ಯ ರಾಷ್ಟ್ರದ ನಿರ್ದಿಷ್ಟ ನಗರದಲ್ಲೇ ನಡೆಯುವುದು ಸಾಮಾನ್ಯ. ಆದರೆ ಇದೇ ಮೊದಲ ಬಾರಿ ಆತಿಥ್ಯ ನಗರದಿಂದ ಅಂದರೆ ಪ್ಯಾರಿಸ್‌ನಿಂದ ಸುಮಾರು 16000 ಕಿ.ಮೀ. ದೂರದಲ್ಲಿ ಸ್ಪರ್ಧೆಯೊಂದು ನಡೆಯಲಿದೆ. ಫ್ರಾನ್ಸ್‌ಗೆ ಸೇರಿದ ತಹಿಟಿಯಲ್ಲಿ ಸರ್ಫಿಂಗ್‌ ಸ್ಪರ್ಧೆ ಆಯೋಜನೆಗೊಳ್ಳಲಿದೆ. ಉಳಿದಂತೆ ಎಲ್ಲಾ ಸ್ಪರ್ಧೆಗಳು ಪ್ಯಾರಿಸ್‌ ನಗರದಲ್ಲೇ ಇರುವ ಕ್ರೀಡಾಂಗಣಗಳಲ್ಲಿ ನಡೆಯಲಿವೆ.

ಬ್ರೇಕ್‌ಡ್ಯಾನ್ಸ್ ಹೊಸ ಸೇರ್ಪಡೆ

ಈ ಬಾರಿ ಒಲಿಂಪಿಕ್ಸ್‌ಗೆ ಹೊಸದಾಗಿ 2 ಕ್ರೀಡೆಗಳನ್ನು ಸೇರ್ಪಡೆಗೊಳಿಸಲಾಗಿದೆ. ಬ್ರೇಕ್‌ಡ್ಯಾನ್ಸ್‌, ಕಾಯಕ್‌ಕ್ರಾಸ್‌ ಕ್ರೀಡೆಗಳನ್ನು ಇದೇ ಮೊದಲ ಬಾರಿ ಒಲಿಂಪಿಕ್ಸ್‌ನಲ್ಲಿ ಆಡಿಸಲಾಗುತ್ತದೆ. ಇನ್ನು, ಸ್ಪೋರ್ಟ್‌ ಕ್ಲೈಂಬಿಂಗ್‌, ಸ್ಕೇಟ್‌ಬೋರ್ಡಿಂಗ್‌ ಹಾಗೂ ಸರ್ಫಿಂಗ್‌ ಸ್ಪರ್ಧೆಗಳನ್ನು ಕೂಡಾ ಒಲಿಂಪಿಕ್ಸ್‌ನಲ್ಲಿ ಮತ್ತೆ ಸೇರ್ಪಡೆಗೊಳಿಸಲಾಗಿದೆ. ಕರಾಟೆಯನ್ನು ಕೈಬಿಡಲಾಗಿದೆ.

ಪ್ಯಾರಿಸ್ ಒಲಿಂಪಿಕ್ಸ್‌ಗೆ ಭಯೋತ್ಪಾದಕರು, ಸೈಬರ್‌ ಕಳ್ಳರ ದಾಳಿ ಭೀತಿ! ನಗರಕ್ಕೆ 45,000+ ಸೈನಿಕರಿಂದ ಕಾವಲು!

‘ಗೇಮ್ಸ್‌ ವೈಡ್ ಓಪನ್‌’ ಧ್ಯೇಯವಾಕ್ಯ

ಈ ಬಾರಿ ಒಲಿಂಪಿಕ್ಸ್‌ನ ಧ್ಯೇಯವಾಕ್ಯ ‘ಗೇಮ್ಸ್‌ ವೈಡ್‌ ಓಪನ್‌’. ಅಂದರೆ ಕ್ರೀಡೆ ಎಲ್ಲರಿಗೂ ಮುಕ್ತವಾಗಿದೆ. ಈ ವರ್ಷ ಒಲಿಂಪಿಕ್ಸ್‌ ಜೊತೆಗೆ ಪ್ಯಾರಾಲಿಂಪಿಕ್ಸ್‌ಗೂ ಇದೇ ಧ್ಯೇಯವಾಕ್ಯ ಬಳಸಲಾಗುತ್ತದೆ.

ಪ್ಯಾರಿಸ್‌ ಒಲಿಂಪಿಕ್ಸ್‌ನ ಲಾಂಛನದ ಗುಟ್ಟೇನು?

ಈ ಬಾರಿ ಪ್ಯಾರಿಸ್‌ ಕ್ರೀಡಾಕೂಟದ ಲಾಂಛನ ವಿಶೇಷವಾದದ್ದು. ಚಿನ್ನದ ಪದಕ, ಜ್ವಾಲೆ ಹಾಗೂ ಫ್ರೆಂಚ್‌ ರಾಷ್ಟ್ರೀಯ ಲಾಂಛನವನ್ನು ಪ್ರತಿನಿಧಿಸುವ ‘ಮೇರಿಯಾನ್ನೆ’ ಮೂರ್ತಿಯ ಚಿತ್ರ ಗೇಮ್ಸ್‌ನ ಲೋಗದಲ್ಲಿದೆ. ಲಾಂಛನವು ಕ್ರೀಡೆಯ ಶಕ್ತಿ ಹಾಗೂ ಚಮತ್ಕಾರವನ್ನು ಪ್ರತಿಬಿಂಬಿಸುವುದಾಗಿ ಮತ್ತು ಆಯೋಜಕರು ತಿಳಿಸಿದ್ದಾರೆ. ಲಾಂಛನವನ್ನು ಫ್ರಾನ್ಸ್‌ನ ಖ್ಯಾತ ವಿನ್ಯಾಸಕಾರ ಸಿಲ್‌ವೈನ್‌ ಬೊಯೆರ್‌ ಎಂಬವರು 2019ರಲ್ಲಿ ರಚಿಸಿದ್ದಾರೆ.
 

Latest Videos
Follow Us:
Download App:
  • android
  • ios