Asianet Suvarna News Asianet Suvarna News

ಕಾಮನ್‌ವೆಲ್ತ್‌ ಗೇಮ್ಸ್‌: ಮೊದಲ ದಿನ ಪದಕ ಗೆಲ್ಲದ ಭಾರತ

- ಮೊದಲ ದಿನ ಭಾರತಕ್ಕೆ ಮಿಶ್ರ ಫಲ
- ಬ್ಯಾಡ್ಮಿಂಟನ್‌, ಬಾಕ್ಸಿಂಗ್‌, ಟಿಟಿಯಲ್ಲಿ ಗೆಲುವಿನ ಆರಂಭ
- ಮಹಿಳಾ ಕ್ರಿಕೆಟ್‌ ನಲ್ಲಿ ಸೋಲಿನ ಆರಂಭ

Birmingham commonwealth games 2022 Indias results of July 29 and schedule san
Author
Bengaluru, First Published Jul 30, 2022, 8:30 AM IST

ಬರ್ಮಿಂಗ್‌ಹ್ಯಾಮ್‌ (ಜುಲೈ 30): 22ನೇ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಭಾರತ ಪದಕ ಮೊದಲ ದಿನ ಪದಕ ಖಾತೆ ತೆರೆಯಲು ವಿಫಲವಾಗಿದೆ. ಸೈಕ್ಲಿಂಗ್‌, ಟ್ರಯಥ್ಲಾನ್‌, ಈಜು ಸ್ಪರ್ಧೆಗಳಲ್ಲಿ ಭಾರತಕ್ಕೆ ಪದಕ ಗೆಲ್ಲುವ ಅವಕಾಶಗಳಿದ್ದವು. ಆದರೆ ಭಾರತೀಯ ಕ್ರೀಡಾಪಟುಗಳು ನಿರಾಸೆ ಮೂಡಿಸಿದರು. ಇನ್ನು ಬ್ಯಾಡ್ಮಿಂಟನ್‌, ಬಾಕ್ಸಿಂಗ್‌, ಟೇಬಲ್‌ ಟೆನಿಸ್‌ ಸ್ಪರ್ಧೆಗಳಲ್ಲಿ ಭರ್ಜರಿ ಗೆಲುವು ಸಾಧಿಸಿದರೆ, ಚೊಚ್ಚಲ ಬಾರಿಗೆ ಸೇರ್ಪಡೆಗೊಂಡಿರುವ ಮಹಿಳಾ ಟಿ20 ಕ್ರಿಕೆಟ್‌ನಲ್ಲಿ ಭಾರತ ಸೋಲಿನ ಆರಂಭ ಪಡೆದು ಮಂಕಾಯಿತು. 2ನೇ ದಿನವಾದ ಶನಿವಾರ ಮೊದಲ ಪದಕ ಗೆಲ್ಲುವ ನಿರೀಕ್ಷೆ ಇಟ್ಟುಕೊಂಡಿದೆ. ಭಾರತೀಯ ಶಟ್ಲರ್‌ಗಳು ತಂಡ ವಿಭಾಗದ ತಮ್ಮ ಮೊದಲ ಪಂದ್ಯದಲ್ಲಿ ಪಾಕಿಸ್ತಾನವನ್ನು 5-0 ಅಂತರದಲ್ಲಿ ಬಗ್ಗುಬಡಿದರು. ಸಿಂಗಲ್ಸ್‌ನಲ್ಲಿ ಕಿದಂಬಿ ಶ್ರೀಕಾಂತ್‌, ಪಿ.ವಿ.ಸಿಂಧು ಸುಲಭ ಗೆಲುವು ಸಾಧಿಸಿದರೆ, ಮಿಶ್ರ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ-ಸುಮಿತ್‌ ರೆಡ್ಡಿ, ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌-ಚಿರಾಗ್‌ ಶೆಟ್ಟಿ, ಮಹಿಳಾ ಡಬಲ್ಸ್‌ನಲ್ಲಿ ತ್ರೀಸಾ ಜಾಲಿ, ಗಾಯತ್ರಿ ಗೋಪಿಚಂದ್‌ ಜಯಿಸಿದರು. ಶನಿವಾರ 2ನೇ ಪಂದ್ಯದಲ್ಲಿ ಭಾರತಕ್ಕೆ ಶ್ರೀಲಂಕಾ ಎದುರಾಗಲಿದೆ.

ಬಾಕ್ಸಿಂಗ್‌ನಲ್ಲಿ ಪ್ರಿ ಕ್ವಾರ್ಟರ್‌ ಪ್ರವೇಶಿಸಿದ ಶಿವ ಥಾಪ: ಭಾರತದ ತಾರಾ ಬಾಕ್ಸರ್‌ ಶಿವ ಥಾಪ ಪುರುಷರ 63.5 ಕೆ.ಜಿ ವಿಭಾಗದಲ್ಲಿ ಶುಭಾರಂಭ ಮಾಡಿ ಪ್ರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಮೊದಲ ಸುತ್ತಿನಲ್ಲಿ ಪಾಕಿಸ್ತಾನದ ಸುಲೆಮಾನ್‌ ಬಲೂಚ್‌ ವಿರುದ್ಧ 5-0 ಅಂತರದಲ್ಲಿ ಜಯಿಸಿದರು. ಭಾನುವಾರ ಅಂತಿಮ 16ರ ಸುತ್ತಿನಲ್ಲಿ ಸ್ಕಾಟ್ಲೆಂಡ್‌ನ ರೀಸ್‌ ಲಿಂಚ್‌ ವಿರುದ್ಧ ಸೆಣಸಲಿದ್ದಾರೆ.

ಫೈನಲ್‌ಗೇರಲು ಭಾರತದ ಸೈಕ್ಲಿಸ್ಟ್‌ಗಳು ವಿಫಲ: ಭಾರತದ ಸೈಕ್ಲಿಂಗ್‌ ಪಟುಗಳು ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ತಮ್ಮ ಅಭಿಯಾನವನ್ನು ನಿರಾಸೆಯೊಂದಿಗೆ ಆರಂಭಿಸಿದ್ದಾರೆ. ಮೊದಲ ದಿನ ಸ್ಪರ್ಧೆಗಿಳಿದಿದ್ದ ಮೂರೂ ತಂಡಗಳು ಫೈನಲ್‌ಗೇರಲು ವಿಫಲವಾದವು. ಪುರುಷರ ಸ್ಟ್ರಿಂಟ್‌ ತಂಡ ವಿಭಾಗದಲ್ಲಿ ರೊನಾಲ್ಡೊ, ರೊಜಿತ್‌ ಸಿಂಗ್‌, ಡೇವಿಡ್‌ ಬೆಕ್ಹಾಮ್‌ ಅರ್ಹತಾ ಸುತ್ತಿನಲ್ಲಿ 6ನೇ ಸ್ಥಾನ ಪಡೆದರು. ಮಹಿಳೆಯರ ಸ್ಟ್ರಿಂಟ್‌ ತಂಡ ವಿಭಾಗವು 7ನೇ ಸ್ಥಾನ ಪಡೆದರೆ, ಪುರುಷರ 4000 ಮೀ. ಪಸ್ರ್ಯೂಟ್‌ ತಂಡವು ಅರ್ಹತಾ ಸುತ್ತಿನಲ್ಲಿ ಕೊನೆ ಸ್ಥಾನ ಗಳಿಸಿತು.

ಹಾಕಿಯಲ್ಲಿ ಘಾನಾ ವಿರುದ್ಧ ಭಾರತಕ್ಕೆ 5-0 ಗೆಲುವು: ಭಾರತ ಮಹಿಳಾ ಹಾಕಿ ತಂಡ ಭರ್ಜರಿ ಗೆಲುವಿನೊಂದಿಗೆ ಅಭಿಯಾನ ಆರಂಭಿಸಿದೆ. ಗುಂಪು ಹಂತದ ಮೊದಲ ಪಂದ್ಯದಲ್ಲಿ ಶುಕ್ರವಾರ ಘಾನಾ ವಿರುದ್ಧ 5-0 ಗೋಲುಗಳಲ್ಲಿ ಗೆಲುವು ದಾಖಲಿಸಿತು. ಭಾರತ ಪರ ಗುರ್ಜಿತ್‌(3ನೇ ನಿಮಿಷ, 34ನೇ ನಿ.,), ನೇಹಾ(28ನೇ ನಿ.,), ಸಂಗೀತಾ(36ನೇ ನಿ.,) ಮತ್ತು ಸಲಿಮಾ(56ನೇ ನಿ.,) ಗೋಲು ಬಾರಿಸಿದರು. ಶನಿವಾರ 2ನೇ ಪಂದ್ಯದಲ್ಲಿ ಭಾರತಕ್ಕೆ ವೇಲ್ಸ್‌ ಎದುರಾಗಲಿದೆ.

ಟಿಟಿಯಲ್ಲಿ ಸುಲಭ ಜಯ ಪಡೆದ ಭಾರತ ತಂಡಗಳು: ಭಾರತ ಪುರುಷ ಮತ್ತು ಮಹಿಳಾ ಟೇಬಲ್‌ ಟೆನಿಸ್‌ ತಂಡಗಳು ಭರ್ಜರಿ ಗೆಲುವುಗಳೊಂದಿಗೆ ಅಭಿಯಾನ ಆರಂಭಿಸಿವೆ. ತಂಡ ವಿಭಾಗದ ಸ್ಪರ್ಧೆಯಲ್ಲಿ ಪುರುಷರ ತಂಡ ಮೊದಲ ಪಂದ್ಯದಲ್ಲಿ ಬಾರ್ಬಡೊಸ್‌ ವಿರುದ್ಧ 3-0ಯಲ್ಲಿ ಗೆದ್ದರೆ, ಮಹಿಳಾ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 3-0 ಅಂತರದಲ್ಲಿ ಗೆಲುವು ಸಾಧಿಸಿತು. ಪುರುಷರ ತಂಡದಲ್ಲಿ ಹರ್ಮೀತ್‌ ದೇಸಾಯಿ, ಜಿ.ಸತ್ಯನ್‌ ಮತ್ತು ಶರತ್‌ ಕಮಲ್‌ ಇದ್ದರೆ, ಮಹಿಳಾ ತಂಡದಲ್ಲಿ ಮನಿಕಾ ಬಾತ್ರಾ, ಶ್ರೀಜಾ ಅಕುಲಾ, ರೀತ್‌ ಟೆನಿಸ್ಸನ್‌ ಇದ್ದಾರೆ.

Commonwealth Games: ಭಾರತ ಮಹಿಳಾ ತಂಡಕ್ಕೆ ಸೋಲು

ಈಜು ಸ್ಪರ್ಧೆಯಲ್ಲಿ ಶ್ರೀಹರಿ ಸೆಮೀಸ್‌ಗೆ, ಸಾಜನ್‌, ಕುಶಾಗ್ರ ಔಟ್‌:  ಭಾರತದ ಈಜುಪಟು ಶ್ರೀಹರಿ ನಟರಾಜ್‌ ಪುರುಷರ 100 ಮೀ. ಬ್ಯಾಕ್‌ಸ್ಟೊ್ರೕಕ್‌ ಸ್ಪರ್ಧೆಯಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದಾರೆ. 54.68 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ ಶ್ರೀಹರಿ ತಾವು ಸ್ಪರ್ಧಿಸಿದ್ದ ಹೀಟ್ಸ್‌ನಲ್ಲಿ 3ನೇ ಮತ್ತು ಒಟ್ಟಾರೆ 5ನೇ ಸ್ಥಾನ ಪಡೆದು ಸೆಮೀಸ್‌ಗೇರಿದರು. ತಮ್ಮ ವೈಯಕ್ತಿಕ ಶ್ರೇಷ್ಠ 53.77 ಸೆಕೆಂಡ್‌ಗಳಲ್ಲಿ ಸ್ಪರ್ಧೆ ಪೂರೈಸಿದ್ದರೆ ಶ್ರೀಹರಿ ಮೊದಲ ಸ್ಥಾನ ಪಡೆಯುತ್ತಿದ್ದರು. ದ.ಆಫ್ರಿಕಾದ ಪೀಟರ್‌ ಕೋಟ್ಜೆ 53.91 ಸೆಕೆಂಡ್‌ಗಳಲ್ಲಿ ಕ್ರಮಿಸಿ ಮೊದಲ ಸ್ಥಾನ ಗಳಿಸಿದರು. ಇನ್ನು ಪುರುಷರ 50 ಮೀ. ಬಟರ್‌ಫ್ಲೈ ಸ್ಪರ್ಧೆಯಲ್ಲಿ ಸಾಜನ್‌ ಪ್ರಕಾಶ್‌, 400 ಮೀ. ಫ್ರೀ ಸ್ಟೈಲ್‌ ಸ್ಪರ್ಧೆಯಲ್ಲಿ ಕುಶಾಗ್ರ ರಾವತ್‌ ಅರ್ಹತಾ ಸುತ್ತಿನಲ್ಲೇ ಹೊರಬಿದ್ದರು.

ಯಾರೀಕೆ ಅನಾಹತ್‌ ಸಿಂಗ್‌? ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಸ್ಪರ್ಧಿಸಲಿರುವ ಭಾರತದ ಅತ್ಯಂತ ಕಿರಿಯ ಅಥ್ಲೀಟ್‌ಗೆ ಬರೀ 14 ವರ್ಷ!

ಭಾರತದ ಇಂದಿನ ಸ್ಪರ್ಧೆಗಳು

ಈಜು: ಪುರುಷರ 200 ಮೀ.ಫ್ರೀಸ್ಟೈಲ್‌-ಕುಶಾಗ್ರ-ಮಧ್ಯಾಹ್ನ 3.06ಕ್ಕೆ

ಜಿಮ್ನಾಸ್ಟಿಕ್ಸ್‌: ಮಹಿಳಾ ತಂಡ ವಿಭಾಗದ ಫೈನಲ್‌ ಮತ್ತು ವೈಯಕ್ತಿಕ ವಿಭಾಗದ ಅರ್ಹತಾ ಸುತ್ತು: ಋುತುಜಾ, ಪ್ರೊತಿಷ್ಠ, ಪ್ರಣತಿ-ರಾತ್ರಿ 9ಕ್ಕೆ

ಬ್ಯಾಡ್ಮಿಂಟನ್‌: ಮಿಶ್ರ ತಂಡ ವಿಭಾಗ ‘ಎ’ ಗುಂಪು: ಭಾರತ-ಶ್ರೀಲಂಕಾ, ಮಧ್ಯಾಹ್ನ 1.30ಕ್ಕೆ. ಭಾರತ-ಆಸ್ಪ್ರೇಲಿಯಾ, ರಾತ್ರಿ 11.30ಕ್ಕೆ

ಬಾಕ್ಸಿಂಗ್‌: ಪುರುಷರ 54 ಕೆ.ಜಿ ವಿಭಾಗ-ಅಂತಿಮ 32ರ ಸುತ್ತು: ಮೊಹಮದ್‌, ಸಂಜೆ 5ಕ್ಕೆ. ಮಹಿಳೆಯರ 66 ಕೆ.ಜಿ-ಅಂತಿಮ 16ರ ಸುತ್ತು: ಲವ್ಲೀನಾ, ಮಧ್ಯರಾತ್ರಿ 12ಕ್ಕೆ, ಪುರುಷರ 86 ಕೆ.ಜಿ-ಅಂತಿಮ 16ರ ಸುತ್ತು: ಸಂಜೀತ್‌, ಮಧ್ಯರಾತ್ರಿ 1ಕ್ಕೆ.

ಸ್ಕ್ವಾಷ್‌: ಪುರುಷರ ಸಿಂಗಲ್ಸ್‌ ಅಂತಿಮ 32ರ ಸುತ್ತು: ರಮಿತ್‌ ಟಂಡನ್‌, ಸಂಜೆ 5ಕ್ಕೆ, ಸೌರವ್‌ ಘೋಷಾಲ್‌, ಸಂಜೆ 6.15ಕ್ಕೆ. ಮಹಿಳಾ ಸಿಂಗಲ್ಸ್‌ ಅಂತಿಮ 32ರ ಸುತ್ತು: ಸುನಯ ಸಾರಾ ಸಂಜೆ 5.45ಕ್ಕೆ, ಜೋಶ್ನಾ ಚಿನ್ನಪ್ಪ ಸಂಜೆ 5.45ಕ್ಕೆ.

ಟೇಬಲ್‌ ಟೆನಿಸ್‌: ಮಹಿಳೆಯರ ಗುಂಪು 2: ಭಾರತ-ಗಯಾನ, ಮಧ್ಯಾಹ್ನ 2ಕ್ಕೆ I ಪುರುಷರ ಗುಂಪು 3: ಭಾರತ-ಉತ್ತರ ಐರ್ಲೆಂಡ್‌, ಸಂಜೆ 4.30ಕ್ಕೆ

Follow Us:
Download App:
  • android
  • ios