ಬೆಂಗಳೂರು(ಫೆ.13): ತವರಲ್ಲಿ ವೃತ್ತಿ ಜೀವನದ ಕೊನೆಯ ಟೂರ್ನಿಯಾಡುತ್ತಿರುವ ಭಾರತದ ದಿಗ್ಗಜ ಟೆನಿಸಿಗ ಲಿಯಾಂಡರ್‌ ಪೇಸ್‌, ಇಲ್ಲಿ ನಡೆಯುತ್ತಿರುವ ಎಟಿಪಿ ಚಾಲೆಂಜರ್‌ ಟೂರ್‌ ಬೆಂಗಳೂರು ಓಪನ್‌ ಟೆನಿಸ್‌ನಲ್ಲಿ ಶುಭಾರಂಭ ಮಾಡಿದ್ದು, ಕ್ವಾರ್ಟರ್‌ಫೈನಲ್‌ ಪ್ರವೇಶಿಸಿದ್ದಾರೆ.

ಇದನ್ನೂ ಓದಿ: ಡೇವಿಸ್ ಕಪ್: ಪಾಕ್‌ ವಿರುದ್ಧ ಭಾರತ ಕ್ಲೀನ್‌ ಸ್ವೀಪ್‌

ಡಬಲ್ಸ್‌ ವಿಭಾಗದ ಅಂತಿಮ 16ರ ಸುತ್ತಿನಲ್ಲಿ ಲಿಯಾಂಡರ್‌ ಪೇಸ್‌ ಹಾಗೂ ಆಸ್ಪ್ರೇಲಿಯಾದ ಎಬ್ಡೆನ್‌ ಮ್ಯಾಥ್ಯೂ ಜೋಡಿ, ಸ್ಲೋವೇನಿಯಾದ ಬ್ಲಾಜ್‌ ರೋಲಾ, ಚೀನಾದ ಜಾಂಗ್‌ ಜಿಜಾನ್‌ ಜೋಡಿ ವಿರುದ್ಧ 7-6(7-2), 6-4 ಸೆಟ್‌ಗಳಲ್ಲಿ ಗೆಲುವು ಸಾಧಿಸಿತು.

ಪಂದ್ಯದ ಮೊದಲ ಸೆಟ್‌ನಲ್ಲಿ ಪೇಸ್‌ ಜೋಡಿಗೆ ಎದುರಾಳಿ ಆಟಗಾರರು ಉತ್ತಮ ಪೈಪೋಟಿ ನೀಡಿದರು. ಎದುರಾಳಿ ಜೋಡಿಯ ಸವ್‌ರ್‍ ಬ್ರೇಕ್‌ ಮಾಡಲು ಪೇಸ್‌ ಸಾಕಷ್ಟುಪ್ರಯತ್ನ ಪಟ್ಟರೂ ಯಶಸ್ವಿಯಾಗಲಿಲ್ಲ. 6-6ರಲ್ಲಿ ಸಮಬಲ ಸಾಧಿಸಿದ ಪರಿಣಾಮ ಟೈ ಬ್ರೇಕರ್‌ ಮೊರೆ ಹೋಗಲಾಯಿತು. ಟೈ ಬ್ರೇಕರ್‌ನಲ್ಲಿ 7-2 ರಿಂದ ಮುನ್ನಡೆ ಸಾಧಿಸಿದ ಪೇಸ್‌ ಜೋಡಿ ಸೆಟ್‌ ವಶಪಡಿಸಿಕೊಂಡಿತು. ಇನ್ನು 2ನೇ ಸೆಟ್‌ನಲ್ಲಿ ಬ್ಲಾಜ್‌-ಜಾಂಗ್‌ ಜೋಡಿ, ಪೇಸ್‌ ಜೋಡಿ ಆಟದ ಎದುರು ಮಂಕಾಯಿತು. ಕ್ವಾರ್ಟರ್‌ ಫೈನಲ್‌ನಲ್ಲಿ ಪೇಸ್‌ ಜೋಡಿ, ಸ್ವೀಡನ್‌ನ ಆ್ಯಂಡ್ರೆ ಗೊರೆನ್ಸನ್‌, ಇಂಡೋನೇಷ್ಯಾದ ಕ್ರಿಸ್ಟೋಫರ್‌ ರಂಕಟ್‌ ಜೋಡಿಯನ್ನು ಎದುರಿಸಲಿದೆ.

ಇದನ್ನೂ ಓದಿ: ಪೇಸ್ 42ರಲ್ಲಿ ಗ್ರ್ಯಾಂಡ್ ಸ್ಲಾಂ ಗೆಲ್ಲೋದಾದ್ರೆ ನಾನ್ಯಾಕೆ ಕ್ರಿಕೆಟ್ ಆಡಬಾರದು: ಶ್ರೀಶಾಂತ್!..

ಕ್ವಾರ್ಟರ್‌ಗೆ ಸಾಕೇತ್‌ ಜೋಡಿ: ಭಾರತದ ಸಾಕೇತ್‌ ಮೈನೇನಿ, ಆಸ್ಪ್ರೇಲಿಯಾದ ಮ್ಯಾಟ್‌ ರೀಡ್‌ ಜೋಡಿ, ಭಾರತದವರೇ ಆದ ನಿಕ್ಷೇಪ್‌ ಬೆಲ್ಲೆಕೆರೆ, ವಸಿಷ್ಠ ಚೆರುಕು ಜೋಡಿ ವಿರುದ್ಧ 6-3, 6-1 ಸೆಟ್‌ಗಳಲ್ಲಿ ಜಯಿಸಿತು.

ಪ್ರಜ್ನೇಶ್‌ಗೆ ಜಯ: ಮೊದಲ ಸುತ್ತಲ್ಲಿ ಬೈ ಪಡೆದಿದ್ದ ಹಾಲಿ ಚಾಂಪಿಯನ್‌ ಭಾರತದ ಪ್ರಜ್ನೇಶ್‌ ಗುಣೇಶ್ವರನ್‌, ಜರ್ಮನಿಯ ಸೆಬಾಸ್ಟಿನ್‌ ಫನ್ಸಲೆವ್‌ ವಿರುದ್ಧ 6-2, 4-6, 6-4 ಸೆಟ್‌ಗಳಲ್ಲಿ ಪ್ರಯಾಸದ ಗೆಲುವು ಪಡೆದು ಪ್ರಿ ಕ್ವಾರ್ಟರ್‌ ಹಂತಕ್ಕೇರಿದರು. ಮುಂದಿನ ಸುತ್ತಿನಲ್ಲಿ ಪ್ರಜ್ನೇಶ್‌, ಫ್ರಾನ್ಸ್‌ನ ಬೆಂಜಮಿನ್‌ ಬೊನ್ಜಿ ಎದುರು ಸೆಣಸಲಿದ್ದಾರೆ.

ಇನ್ನೊಂದು ಪಂದ್ಯದಲ್ಲಿ ರಾಮಕುಮಾರ್‌ ರಾಮನಾಥನ್‌, ಭಾರತದವರೇ ಆದ ಅಭಿನವ್‌ ಶಣ್ಮುಗಂ ವಿರುದ್ಧ 6-1, 6-3 ಸೆಟ್‌ಗಳಲ್ಲಿ ಸುಲಭ ಜಯ ಪಡೆದರು.