ಬೆಂಗಳೂರು(ಫೆ.15): ಭಾರತದ ದಿಗ್ಗಜ ಟೆನಿಸಿಗ ಲಿಯಾಂಡರ್‌ ಪೇಸ್‌ ಜೋಡಿ, ಇಲ್ಲಿ ನಡೆಯುತ್ತಿರುವ 3ನೇ ಆವೃತ್ತಿಯ ಎಟಿಪಿ ಚಾಲೆಂಜರ್‌ ಬೆಂಗಳೂರು ಓಪನ್‌ ಟೆನಿಸ್‌ ಟೂರ್ನಿಯ ಡಬಲ್ಸ್‌ನಲ್ಲಿ ಫೈನಲ್‌ ಪ್ರವೇಶಿಸಿದ್ದಾರೆ. ಭಾರತದಲ್ಲಿ ವೃತ್ತಿ ಜೀವನದ ಕೊನೆಯ ಟೂರ್ನಿ ಆಡುತ್ತಿರುವ ಪೇಸ್‌, ಪ್ರಶಸ್ತಿ ಸುತ್ತಿಗೇರಿದ್ದು ಚಾಂಪಿಯನ್‌ ಆಗುವ ವಿಶ್ವಾಸದಲ್ಲಿದ್ದಾರೆ. ಈ ಮೂಲಕ 2020ರ ‘ಲಾಸ್ಟ್‌ ರೋವರ್‌’ ನ್ನು ಸ್ಮರಣೀಯವಾಗಿಸಿಕೊಳ್ಳುವ ಉತ್ಸಾಹದಲ್ಲಿ ಪೇಸ್‌ ಇದ್ದಾರೆ.

ಶುಕ್ರವಾರ ನಡೆದ ಪುರುಷರ ಡಬಲ್ಸ್‌ ವಿಭಾಗದ ಸೆಮಿಫೈನಲ್‌ ಪಂದ್ಯದಲ್ಲಿ ಪೇಸ್‌ ಹಾಗೂ ಅವರ ಜೊತೆಗಾರ ಆಸ್ಪ್ರೇಲಿಯಾದ ಎಬ್ಡೆನ್‌ ಮ್ಯಾಥ್ಯೂ ಜೋಡಿ, ಇಸ್ರೇಲ್‌ನ ಜೋನಾಥನ್‌ ಎರ್ಲಿಚ್‌ ಹಾಗೂ ಬೇಲಾರಸ್‌ನ ಆ್ಯಂಡ್ರೆ ವಸಿಲೆವಸ್ಕಿ ಜೋಡಿ ವಿರುದ್ಧ 6-4, 3-6, 10-7 ಸೆಟ್‌ಗಳಲ್ಲಿ ಗೆಲುವು ಸಾಧಿಸಿತು.

ಬೆಂಗಳೂರು ಓಪನ್ ಟೆನಿಸ್: ಸೆಮೀಸ್‌ಗೆ ಪೇಸ್‌ ಜೋಡಿ

ಪಂದ್ಯದ ಆರಂಭದಿಂದಲೂ ಆಕ್ರಮಣಾಕಾರಿ ಆಟಕ್ಕೆ ಮುಂದಾದ ಪೇಸ್‌ ಜೋಡಿ, ಎದುರಾಳಿ ಎರ್ಲಿಚ್‌-ಆ್ಯಂಡ್ರೆ ಜೋಡಿ ವಿರುದ್ಧ ಮೇಲುಗೈ ಸಾಧಿಸಿತು. ಮೊದಲ ಸೆಟ್‌ನಲ್ಲಿ ಎದುರಾಳಿ ಜೋಡಿಯ ಸರ್ವರ್ ಬ್ರೇಕ್‌ ಮಾಡಿದ ಪೇಸ್‌ ಜೋಡಿ 2 ಗೇಮ್‌ಗಳ ಅಂತರದಲ್ಲಿ ಮುನ್ನಡೆ ಸಾಧಿಸಿತು. 2ನೇ ಸೆಟ್‌ನಲ್ಲಿ ಎದುರಾಳಿ ಆಟಗಾರರು, ಪೇಸ್‌ ಜೋಡಿಗೆ ತಿರುಗೇಟು ನೀಡುವಲ್ಲಿ ಯಶಸ್ವಿಯಾದರು. ತಲಾ ಒಂದೊಂದು ಸೆಟ್‌ ಗೆದ್ದಿದ್ದರಿಂದ ಟೈ ಬ್ರೇಕರ್‌ನಲ್ಲಿ ಫಲಿತಾಂಶ ನಿರ್ಧರಿಸಲಾಯಿತು. ಆರಂಭದಲ್ಲಿ ಇಸ್ರೇಲ್‌-ಬೇಲಾರಸ್‌ ಜೋಡಿ ಮುನ್ನಡೆ ಸಾಧಿಸಿತ್ತು. ಆದರೆ ಮರು ಹೋರಾಟಕ್ಕಿಳಿದ ಪೇಸ್‌ ಜೋಡಿ 10-7 ರಲ್ಲಿ ಸೆಟ್‌ ವಶಪಡಿಸಿಕೊಂಡು ಪಂದ್ಯ ಗೆದ್ದಿತು.

ಶನಿವಾರ ನಡೆಯಲಿರುವ ಡಬಲ್ಸ್‌ ಫೈನಲ್‌ನಲ್ಲಿ ಪೇಸ್‌-ಎಬ್ಡೆನ್‌ ಜೋಡಿ, ಭಾರತದ ಸಾಕೇತ್‌ ಮೈನೇನಿ- ಆಸ್ಪ್ರೇಲಿಯಾದ ಮ್ಯಾಟ್‌ ರೀಡ್‌ ಅಥವಾ ಭಾರತದ ರಾಮ್‌ಕುಮಾರ್‌ ರಾಮನಾಥನ್‌-ಪೂರವ್‌ ರಾಜಾ ಜೋಡಿಯನ್ನು ಎದುರಿಸಲಿದೆ.

ಸೆಮೀಸ್‌ಗೆ ಒಕ್ಲೆಪ್ಪೊ, ಡಕ್ವರ್ಥ್:

ಸಿಂಗಲ್ಸ್‌ನಲ್ಲಿ ಭಾರತದ ಟೆನಿಸಿಗರು ಹೊರಬಿದ್ದಿರುವ ಪರಿಣಾಮ ಪ್ರಶಸ್ತಿಗಾಗಿ ವಿದೇಶಿಗರಲ್ಲಿ ಭಾರೀ ಪೈಪೋಟಿ ಏರ್ಪಟ್ಟಿದೆ. ಶುಕ್ರವಾರ ನಡೆದ ಸಿಂಗಲ್ಸ್‌ ಕ್ವಾರ್ಟರ್‌ಫೈನಲ್‌ನಲ್ಲಿ ಇಟಲಿಯ ಯುವ ಟೆನಿಸಿಗ ಜುಲಿಯಾನ್‌ ಒಕ್ಲೆಪ್ಪೊ, ಸ್ಟೆಫೆನೊ ಟ್ರವಗ್ಲಿಯಾ, ಆಸ್ಪ್ರೇಲಿಯಾದ ಜೇಮ್ಸ್‌ ಡಕ್ವರ್ಥ್ ಹಾಗೂ ಫ್ರಾನ್ಸ್‌ನ ಬೆಂಜಮಿನ್‌ ಬೊಂಜಿ ಸೆಮಿಫೈನಲ್‌ ಪ್ರವೇಶಿಸಿದ್ದಾರೆ.