Asianet Suvarna News Asianet Suvarna News

Pro Kabaddi League: ಸೋಲಿನ ಸರಪಳಿ ಕಳಚಿದ ಬೆಂಗಾಲ್ ವಾರಿಯರ್ಸ್‌..!

* ಸತತ ಸೋಲಿನಿಂದ ಕಂಗೆಟ್ಟಿದ್ದ ಬೆಂಗಾಲ್ ವಾರಿಯರ್ಸ್‌ಗೆ ಸಿಕ್ಕಿತು ಗೆಲುವಿನ ಖುಷಿ

* ಜೈಪುರ ಪಿಂಕ್ ಪ್ಯಾಂಥರ್ಸ್‌ ಎದುರು ರೋಚಕ ಜಯ ಸಾಧಿಸಿದ ಹಾಲಿ ಚಾಂಪಿಯನ್‌

* ಪ್ರೊ ಕಬಡ್ಡಿಯಲ್ಲಿ 800 ರೈಡ್‌ ಅಂಕ ಪೂರೈಸಿದ ಮಣೀಂದರ್ ಸಿಂಗ್

Bengal Warriors beat Jaipur Pink Panthers and Winning track in Pro Kabaddi League Season 8 kvn
Author
Bengaluru, First Published Jan 4, 2022, 8:26 AM IST

ಬೆಂಗಳೂರು(ಜ.04): ಮಣೀಂದರ್‌ ಸಿಂಗ್‌ (Maninder Singh) ಪ್ರೊ ಕಬಡ್ಡಿಯಲ್ಲಿ 800 ರೈಡಿಂಗ್‌ ಅಂಕಗಳ ಮೈಲಿಗಲ್ಲು ತಲುಪುವ ಜೊತೆಗೆ ತಮ್ಮ ತಂಡ ಬೆಂಗಾಲ್‌ ವಾರಿಯ​ರ್ಸ್‌ (Bengal Warriors) 8ನೇ ಆವೃತ್ತಿಯಲ್ಲಿ ಸೋಲಿನ ಸರಪಳಿ ಕಳಚಲು ಸಹ ನೆರವಾದರು. ಸೋಮವಾರ ನಡೆದ ಜೈಪುರ ಪಿಂಕ್‌ ಪ್ಯಾಂಥ​ರ್ಸ್‌ (Jaipur Pink Panthers) ವಿರುದ್ಧದ ಪಂದ್ಯದಲ್ಲಿ ಬೆಂಗಾಲ್‌ 31-28ರ ರೋಚಕ ಗೆಲುವು ಸಾಧಿಸಿತು. 12 ಅಂಕ ಗಳಿಸಿದ ಮಣೀಂದರ್‌, ಪ್ರೊ ಕಬಡ್ಡಿಯಲ್ಲಿ 800 ರೈಡ್‌ ಅಂಕ ಪೂರೈಸಿದ 4ನೇ ಆಟಗಾರ ಎನಿಸಿಕೊಂಡರು.

ಹ್ಯಾಟ್ರಿಕ್‌ ಸೋಲಿನಿಂದ ಕಂಗೆಟ್ಟಿದ್ದ ಹಾಲಿ ಚಾಂಪಿಯನ್‌ ಬೆಂಗಾಲ್‌ಗೆ ಈ ಗೆಲುವು ಅತ್ಯವಶ್ಯಕ ಎನಿಸಿತ್ತು. 6 ಪಂದ್ಯಗಳಲ್ಲಿ ತಲಾ 3 ಗೆಲುವು, 3 ಸೋಲುಗಳೊಂದಿಗೆ 16 ಅಂಕ ಹೊಂದಿರುವ ಬೆಂಗಾಲ್‌ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ. ಸತತ 2ನೇ ಸೋಲು ಕಂಡಿರುವ ಜೈಪುರ 9ನೇ ಸ್ಥಾನದಲ್ಲಿ ಮುಂದುವರಿದಿದೆ. ಪಂದ್ಯದಲ್ಲಿ ಮೊಹಮದ್‌ ನಬೀಬಕ್ಷ್‌ 7 ರೈಡ್‌, 3 ಟ್ಯಾಕಲ್‌ ಅಂಕ ಗಳಿಸಿ ಬೆಂಗಾಲ್‌ ಗೆಲುವಿಗೆ ನೆರವಾದರೆ, 16 ರೈಡ್‌ ಅಂಕ ಗಳಿಸಿದ ಹೊರತಾಗಿಯೂ ಅರ್ಜುನ್‌ ದೇಶ್ವಾಲ್‌ ಜೈಪುರ ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ.

ಪಾಟ್ನಾ ಪೈರೇಟ್ಸ್‌ಗೆ ಹ್ಯಾಟ್ರಿಕ್‌ ಜಯ

ಬೆಂಗಳೂರು: ತಾರಾ ರೈಡರ್‌ ಸಚಿನ್‌ ತನ್ವರ್‌ ಕೊನೆ ರೈಡ್‌ನಲ್ಲಿ ಗಳಿಸಿದ ಅಂಕದ ನೆರವಿನಿಂದ ಮಾಜಿ ಚಾಂಪಿಯನ್‌ ಪಾಟ್ನಾ ಪೈರೇಟ್ಸ್‌ (Patna Pirates) ಹ್ಯಾಟ್ರಿಕ್‌ ಗೆಲುವು ಸಾಧಿಸಿತು. ಸೋಮವಾರ ನಡೆದ ತೆಲುಗು ಟೈಟಾನ್ಸ್‌ (Telugu Titans) ವಿರುದ್ಧದ ಪಂದ್ಯದಲ್ಲಿ ಪಾಟ್ನಾ 31-30ರಲ್ಲಿ ಜಯಿಸಿತು. ಇದರೊಂದಿಗೆ ಪಾಟ್ನಾ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದರೆ, ಇನ್ನೂ ಗೆಲುವಿನ ಖಾತೆ ತೆರೆಯದ ಟೈಟಾನ್ಸ್‌ 11ನೇ ಸ್ಥಾನದಲ್ಲೇ ಉಳಿದಿದೆ.

ಇಂದಿನ ಪಂದ್ಯಗಳು: 
ಹರ್ಯಾಣ-ಯು ಮುಂಬಾ, ಸಂಜೆ 7.30ಕ್ಕೆ, 
ಯು.ಪಿ.ಯೋಧಾ-ತಮಿಳ್‌ ತಲೈವಾಸ್‌, ರಾತ್ರಿ 8.30ಕ್ಕೆ,
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

ಕೋವಿಡ್‌: ಐ-ಲೀಗ್‌ ಫುಟ್ಬಾಲ್‌ 6 ವಾರ ಸ್ಥಗಿತ

ಕೋಲ್ಕತಾ: ಮತ್ತಷ್ಟು ಆಟಗಾರರಲ್ಲಿ ಕೊರೋನಾ ಸೋಂಕು (Coronavirus) ಕಾಣಿಸಿಕೊಂಡ ಹಿನ್ನೆಲೆಯಲ್ಲಿ ದೇಸಿ ಫುಟ್ಬಾಲ್‌ ಟೂರ್ನಿ ಐ-ಲೀಗ್‌ (I_League) ಕನಿಷ್ಠ ಆರು ವಾರಗಳ ಕಾಲ ಸ್ಥಗಿತಗೊಳಿಸಲಾಗಿದೆ. ಆಟಗಾರರು, ಸಿಬ್ಬಂದಿ ಸೇರಿ ಒಟ್ಟು 45 ಮಂದಿಗೆ ಇದುವರೆಗೆ ಸೋಂಕು ಕಾಣಿಸಿಕೊಂಡಿದ್ದು, ಹೀಗಾಗಿ ಭಾರತೀಯ ಫುಟ್ಬಾಲ್‌ ಫೆಡರೇಶನ್‌(ಎಐಎಫ್‌ಎಫ್‌) ಟೂರ್ನಿಯನ್ನು ಮುಂದೂಡಿದೆ. 

Pro Kabaddi League : ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಬೆಂಗಳೂರು ಬುಲ್ಸ್!

ಮುಂದಿನ ತಿಂಗಳು ಕೋವಿಡ್‌ ಪರಿಸ್ಥಿತಿಯನ್ನು ಅವಲೋಕಿಸಿ ಲೀಗ್‌ ಪುನಾರಂಭದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಎಐಎಫ್‌ಎಫ್‌ ಮಾಹಿತಿ ನೀಡಿದೆ. ಡಿಸೆಂಬರ್ 26ಕ್ಕೆ ಆರಂಭವಾಗಿದ್ದ ಲೀಗ್‌, ಬಳಿಕ ಕೋವಿಡ್‌ ಕಾರಣದಿಂದ 1 ವಾರ ಮುಂದೂಡಲ್ಪಟ್ಟಿತ್ತು.

ರಾಜ್ಯದ ಮಾಜಿ ಫುಟ್ಬಾಲಿಗ ಮೊಹಮದ್‌ ಘೋಷ್‌ ನಿಧನ

ಬೆಂಗಳೂರು: ಕರ್ನಾಟಕದ ಮಾಜಿ ಫುಟ್ಬಾಲ್‌ ಆಟಗಾರ ಮೊಹಮದ್‌ ಘೋಷ್‌(88) ಅವರು ಹೃದಯಾಘಾತದಿಂದ ಸೋಮವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರು ಮೂವರು ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. 

ಘೋಷ್‌ ಅವರು 1965, 66ರಲ್ಲಿ ಸಂತೋಷ್‌ ಟ್ರೋಫಿ ಫುಟ್ಬಾಲ್‌ ಟೂರ್ನಿಯನ್ನು ರಾಜ್ಯ ತಂಡದ ಪರ ಆಡಿದ್ದರು. ಅಲ್ಲದೇ, ಡುರಾಂಡ್‌ ಕಪ್‌, ರೋವ​ರ್ಸ್‌ ಕಪ್‌, ಐಎಫ್‌ಎ ಶೀಲ್ಡ್‌ ಸೇರಿ ಹಲವು ಮಹತ್ವದ ಟೂರ್ನಿಗಳಲ್ಲಿ ಆಡಿದ್ದರು. ಘೋಷ್‌ ನಿಧನಕ್ಕೆ ಕರ್ನಾಟಕ ರಾಜ್ಯ ಫುಟ್ಬಾಲ್‌ ಸಂಸ್ಥೆ ಸಂತಾಪ ಸೂಚಿಸಿದೆ.

Follow Us:
Download App:
  • android
  • ios