Pro Kabaddi League : ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಬೆಂಗಳೂರು ಬುಲ್ಸ್!
ಪವನ್ ಶೇರಾವತ್ ಮತ್ತೊಂದು ಸೂಪರ್ 10
ಪುಣೇರಿ ಪಲ್ಟನ್ ವಿರುದ್ಧ ಬೆಂಗಳೂರು ಬುಲ್ಸ್ ಗೆ ಭರ್ಜರಿ ಜಯ
ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಬೆಂಗಳೂರು
ಬೆಂಗಳೂರು (ಜ. 2): ಸೋಲಿನೊಂದಿಗೆ 8ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ (Pro Kabaddi League) ಅನ್ನು ಆರಂಭಿಸಿದ್ದ ಬೆಂಗಳೂರು ಬುಲ್ಸ್, (Bengaluru Bulls)ಲೀಗ್ ಆರಂಭವಾದ 12 ದಿನಗಳ ಬಳಿಕ ಮೊದಲ ಬಾರಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಪಿಕೆಎಲ್ ನಲ್ಲಿ (PKL) ತನ್ನ ಅಜೇಯ ಗೆಲುವಿನ ಓಟವನ್ನು ಸತತ 5ನೇ ಪಂದ್ಯಕ್ಕೆ ವಿಸ್ತರಿಸಿದೆ. ಕಳೆದ ಪಂದ್ಯದಲ್ಲಿ ತೆಲುಗು ಟೈಟಾನ್ಸ್ (Telugu Titans)ವಿರುದ್ಧ ಅಂಕ ಹಂಚಿಕೊಂಡಿದ್ದ ಬೆಂಗಳೂರು ಬುಲ್ಸ್, ಈ ಬಾರಿ ಎಚ್ಚರಿಕೆಯ ಆಟವಾಡುವ ಮೂಲಕ ಪುಣೇರಿ ಪಲ್ಟನ್ (Puneri Paltan) ತಂಡವನ್ನು ಸೋಲಿಸುವಲ್ಲಿ ಯಶ ಕಂಡಿತು. ದಿನದ ಇನ್ನೊಂದು ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ (Haryana Steelers) ಕೇವಲ 2 ಅಂಕಗಳ ಅಂತರದಲ್ಲಿ ಗುಜರಾತ್ ಜೈಂಟ್ಸ್ (Gujarat Giants)ತಂಡವನ್ನು ಸೋಲಿಸಿತು.
ಬೆಂಗಳೂರಿನಲ್ಲಿ ನಡೆಯುತ್ತಿರುವ ಕದನದಲ್ಲಿ ಬೆಂಗಳೂರು ಬುಲ್ಸ್ ತಂಡ 40-29 ಅಂಕಗಳಿಂದ ಪುಣೇರಿ ಪಲ್ಟನ್ ತಂಡವನ್ನು ಸೋಲಿಸಿತು. ವಿರಾಮದ ವೇಳೆಗೆ 13-18 ರಿಂದ ಹಿನ್ನಡೆಯಲ್ಲಿದ್ದ ಬೆಂಗಳೂರು ಬುಲ್ಸ್ ಆ ಬಳಿಕ ಅದ್ಭುತ ನಿರ್ವಹಣೆ ನೀಡುವ ಮೂಲಕ ಪುಣೇರಿ ತಂಡಕ್ಕೆ ತಿರುಗೇಟು ನೀಡಿತು. 2ನೇ ಅವಧಿಯ ಆಟದಲ್ಲಿ ಬರೋಬ್ಬರಿ 27 ಅಂಕಗಳನ್ನು ಸಂಪಾದಿಸುವಲ್ಲಿ ಯಶ ಕಂಡ ಬುಲ್ಸ್ ಲೀಗ್ ನಲ್ಲಿ ನಾಲ್ಕನೇ ಗೆಲುವು ಕಾಣಲು ಯಶಸ್ವಿಯಾಯಿತು. ಮೊದಲ ಅವಧಿಯ ಆಟದಲ್ಲಿ ರೈಡಿಂಗ್ ವೇಳೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ ತಂಡದ ಅಗ್ರ ರೈಡರ್ ಪವನ್ ಕುಮಾರ್ ಶೇರಾವತ್ (Pawan Sehrawat), 2ನೇ ಅವಧಿಯ ಆಟದಲ್ಲಿ ತಮ್ಮ ಫಾರ್ಮ್ ಕಂಡುಕೊಂಡಿದ್ದು ಮಾತ್ರವಲ್ಲದೆ, ಮತ್ತೊಂದು ಸೂಪರ್ 10 ಸಾಹಸದ ಮೂಲಕ ತಂಡದ ಗೆಲುವನ್ನು ಖಚಿತ ಮಾಡಿದರು.
ಇವರಿಗೆ ರೈಡರ್ ಗಳಾದ ಚಂದ್ರನ್ ರಂಜಿತ್ (Chandran Ranjit)ಹಾಗೂ ಭರತ್ (Bharat) ಅವರಿಂದ ಉತ್ತಮ ಬೆಂಬಲ ಸಿಕ್ಕಿತು. ಡಿಫೆನ್ಸ್ ವಿಭಾಗದಲ್ಲಿ ಅದ್ಭುತ ಆಟವಾಡಿದ ಅಮಾನ್ (Aman) ಹಾಗೂ ಸೌರಭ್ (Sourabh) ತಲಾ ನಾಲ್ಕು ಅಂಕ ಸಂಪಾದಿಸಿ ಗೆಲುವಿಗೆ ನೆರವು ನೀಡಿದರು. ಪಂದ್ಯದ ಹೆಚ್ಚಿನ ಅವಧಿಯ ಆಟದಲ್ಲಿ ಪುಣೇರಿ ಪಲ್ಟನ್ ತಂಡ ಬಲಾಢ್ಯವಾಗಿ ಕಂಡರೂ, ಅನುಭವಿ ಆಟಗಾರರ ಕೊರತೆ ಎದ್ದು ಕಂಡಿತು. ಇದರ ಲಾಭ ಪಡೆದ ಬೆಂಗಳೂರು ಬುಲ್ಸ್, 2ನೇ ಅವಧಿಯ ಆಟದಲ್ಲಿ ಪುಣೇರಿ ಪಲ್ಟನ್ ತಂಡವನ್ನು ಎರಡು ಬಾರಿ ಆಲೌಟ್ ಮಾಡುವ ಮೂಲಕ ಪಂದ್ಯದಲ್ಲಿ ಮುನ್ನಡೆ ಕಂಡುಕೊಂಡಿತು. ಈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಬೆಂಗಳೂರು ತಂಡ 23 ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರಿದರೆ, ಆಡಿದ 5 ಪಂದ್ಯಗಳಲ್ಲಿ 1 ಗೆಲುವು ಹಾಗೂ 4 ಸೋಲು ಕಂಡಿರುವ ಪುಣೇರಿ ಪಲ್ಟನ್ 12ನೇ ಸ್ಥಾನದಲ್ಲಿದೆ.
ಬೆಂಗಳೂರು ಬುಲ್ಸ್ ತಂಡದ ಪರವಾಗಿ ಪವನ್ ಶೇರಾವತ್ 11 ಅಂಕ ಸಂಪಾದನೆ ಮಾಡಿದರೆ, ಚಂದ್ರನ್ ರಂಜಿತ್ 6 ಹಾಗೂ ಭರತ್ 5 ಅಂಕ ಸಂಪಾದನೆ ಮಾಡಿದರು. ಪುಣೇರಿ ಪಲ್ಟನ್ ಪರವಾಗಿ ಅಸ್ಲಂ ಇನಾಂದಾರ್ ಹಾಗೂ ಮೋಹಿತ್ ಗೋಯತ್ ತಲಾ 6 ಅಂಕ ಸಂಪಾದನೆ ಮಾಡಿದರೆ, ನಾಯಕ ವಿಶಾಲ್ ಭಾರದ್ವಾಜ್ ವೈಫಲ್ಯ ತಂಡಕ್ಕೆ ಬಹುವಾಗಿ ಕಾಡಿತು. ಬೆಂಗಳೂರು ಬುಲ್ಸ್ ತಂಡ ತನ್ನ ಮುಂದಿನ ಪಂದ್ಯದಲ್ಲಿ ಜನವರಿ 6 ರಂದು ಮಾಜಿ ಚಾಂಪಿಯನ್ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವನ್ನು ಎದುರಿಸಲಿದೆ.
SA vs India 2nd Test : ಸರಣಿ ಗೆಲುವಿನ ಸಾಹಸಕ್ಕೆ ಭಾರತ ಸಿದ್ಧ!
ಕೊನೇ ಹಂತದಲ್ಲಿ ಗೆಲುವು ಸಾಧಿಸಿದ ಹರಿಯಾಣ: ದಿನದ 2ನೇ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ ತಂಡ 38-36 ರಿಂದ ತೆಲುಗು ಟೈಟಾನ್ಸ್ ತಂಡವನ್ನು ಸೋಲಿಸಿತು. ಮೊದಲ ಅವಧಿಯ ವಿರಾಮದ ವೇಳೆಗೆ ಭರ್ಜರಿ 12 ಅಂಕಗಳ ಮುನ್ನಡೆಯಲ್ಲಿದ್ದ ಹರಿಯಾಣ ಸ್ಟೀಲರ್ಸ್ ತಂಡಕ್ಕ 2ನೇ ಅವಧಿಯ ಆಟದಲ್ಲಿ ಗುಜರಾತ್ ಭರ್ಜರಿಯಾಗಿ ತಿರುಗೇಟು ನೀಡಿತು. ಗುಜರಾತ್ ಜೈಂಟ್ಸ್ ಪರವಾಗಿ ಭರ್ಜರಿ ಆಟವಾಡಿದ ರಾಕೇಶ್ 19 ಅಂಕ ಸಂಪಾದನೆ ಮಾಡಿದರೆ, ಕೊನೆಯಲ್ಲಿ ಅತ್ಯುತ್ತಮ ಸೂಪರ್ ರೈಡ್ ನಡೆಸಿದ ಮೀತು ಹಾಗೂ ವಿಕಾಸ್ ಅವರ ಆಕರ್ಷಕ ಆಟ ಹರಿಯಾಣ ಸ್ಟೀಲರ್ಸ್ ತಂಡದ ಗೆಲುವಿಗೆ ಕಾರಣವಾಯಿತು. ಜಯದೊಂದಿಗೆ ಹರಿಯಾಣ ಸ್ಟೀಲರ್ಸ್ 8ನೇ ಸ್ಥಾನದಲ್ಲಿ ಮುಂದುವರಿದರೆ, ತೆಲುಗು ಟೈಟಾನ್ಸ್ 11ನೇ ಸ್ಥಾನದಲ್ಲಿದೆ.