ಇಂದಿನಿಂದ ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಟೂರ್ನಿ ಆರಂಭ
* ಇಂದಿನಿಂದ ಬ್ಯಾಡ್ಮಿಂಟನ್ ಏಷ್ಯಾ ಟೀಂ ಚಾಂಪಿಯನ್‌ಶಿಪ್ ಟೂರ್ನಿ ಆರಂಭ
* ಇಂಡಿಯಾ ಓಪನ್ ಚಾಂಪಿಯನ್ ಲಕ್ಷ್ಯ ಸೆನ್ ಪುರುಷರ ತಂಡವನ್ನು ಮುನ್ನಡೆಸಲಿದ್ದಾರೆ.
* ಫೆಬ್ರವರಿ 20ರ ವರೆಗೆ ನಡೆಯಲಿರುವ ಟೂರ್ನಿಯ ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿರುವ ಪುರುಷರ ತಂಡ
ಕೌಲಾಲಂಪುರ(ಫೆ.15): ಬ್ಯಾಡ್ಮಿಂಟನ್ ಏಷ್ಯಾ ಟೀಂ ಚಾಂಪಿಯನ್‌ಶಿಪ್ (Badminton Asia Team Championships 2022) ಮಂಗಳವಾರ ಮಲೇಷ್ಯಾದ ಶೆಲಂಗೋರ್‌ನಲ್ಲಿ ಆರಂಭವಾಗಲಿದ್ದು, ಇಂಡಿಯಾ ಓಪನ್ (Indian Open) ಚಾಂಪಿಯನ್ ಲಕ್ಷ್ಯ ಸೆನ್ (Lakshya Sen) ಹಾಗೂ ಸಯ್ಯದ್ ಮೋದಿ ಟೂರ್ನಿಯ ರನ್ನರ್-ಅಪ್ ಮಾಳವಿಕಾ ಬನ್ಸೋದ್ ಕ್ರಮವಾಗಿ ಭಾರತದ ಪುರುಷ ಹಾಗೂ ಮಹಿಳಾ ತಂಡಗಳನ್ನು ಮುನ್ನಡೆಸಲಿದ್ದಾರೆ.
ಫೆಬ್ರವರಿ 20ರ ವರೆಗೆ ನಡೆಯಲಿರುವ ಟೂರ್ನಿಯ ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿರುವ ಪುರುಷರ ತಂಡ ಮೊದಲ ಪಂದ್ಯದಲ್ಲಿ ಕೊರಿಯಾ ವಿರುದ್ಧ ಸ್ಪರ್ಧಿಸಲಿದ್ದು, ಬಳಿಕ ಹಾಲಿ ಚಾಂಪಿಯನ್ ಇಂಡೋನೇಷ್ಯಾ ಹಾಗೂ ಹಾಂಕಾಂಗ್ ವಿರುದ್ಧ ಆಡಲಿದೆ. ‘ವೈ’ ಗುಂಪಿನಲ್ಲಿರುವ ಮಹಿಳಾ ತಂಡ ಆತಿಥೇಯ ಮಲೇಷ್ಯಾ ವಿರುದ್ಧ ಕಣಕ್ಕಿಳಿಯಲಿದ್ದು, ಬಳಿಕ ಜಪಾನ್ ವಿರುದ್ಧ ಸ್ಪರ್ಧಿಸಲಿದೆ. ಎರಡೂ ವಿಭಾಗದಲ್ಲಿ ಪ್ರತೀ ಗುಂಪಿನ ಅಗ್ರ 2 ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ. ಜೊತೆಗೆ ಮೇನಲ್ಲಿ ನಡೆಯಲಿರುವ ಥಾಮಸ್ ಕಪ್ ಫೈನಲ್ಸ್‌ಗೂ ಅರ್ಹತೆ ಗಿಟ್ಟಿಸಲಿವೆ.
ಪುರುಷರ ಸಿಂಗಲ್ಸ್‌ನಲ್ಲಿ ಸೆನ್ ಜೊತೆಗೆ ಮಿಥುನ್, ಕಿರಣ್ ಜಾರ್ಚ್, ರಘು ಮರಿಸ್ವಾಮಿ ಸ್ಪರ್ಧಿಸಲಿದ್ದು, ಮಾಳವಿಕಾ ಜೊತೆ ಮಹಿಳಾ ಸಿಂಗಲ್ಸ್‌ನಲ್ಲಿ ಆಕರ್ಷಿ ಕಶ್ಯಪ್, ಅಶ್ಮಿತಾ ಚಾಲಿಹಾ ಕಣದಲ್ಲಿದ್ದಾರೆ. ಪುರುಷರ ಡಬಲ್ಸ್‌ನಲ್ಲಿ ರವಿಕೃಷ್ಣಾ-ಉದಯ್ ಕುಮಾರ್, ಹರಿಹರಣ್-ರುಬಾನ್, ಡಿಂಕು ಸಿಂಗ್-ಮಂಜಿತ್ ಸಿಂಗ್, ಮಹಿಳಾ ಡಬಲ್ಸ್‌ನಲ್ಲಿ ಸಿಮ್ರಾನ್-ಖುಷಿ, ನೀಲಾ-ಅರುಬಲಾ, ಆರಥಿ-ರಿಝಾ ಜೋಡಿ ಸ್ಪರ್ಧಿಸಲಿದೆ.
ಫೆಬ್ರವರಿ 27ರಿಂದ ಶಟಲ್ ಬ್ಯಾಡ್ಮಿಂಟನ್ ಟೂರ್ನಿ
ಗೋಣಿಕೊಪ್ಪ: ಶಿವರಾತ್ರಿ ಪ್ರಯುಕ್ತ ಮಾಯಮುಡಿ ಬಸವೇಶ್ವರ ಯುವಕ ಸಂಘದ ವತಿಯಿಂದ ಮಾಯಮುಡಿ ಗ್ರಾಮದ ಕೋಲ್‌ಬಾಣೆಯಲ್ಲಿರುವ ಮಾಯಮುಡಿ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಫೆಬ್ರವರಿ 27ರಿಂದ ಆಪಟ್ಟೀರ ಪಿ. ಚಂಗಪ್ಪ ಸ್ಮರಣಾರ್ಥ ಶಟಲ್ ಬ್ಯಾಡ್ಮಿಂಟನ್ ಟೂರ್ನಿ ಆಯೋಜಿಸಿದೆ.
Pro Kabaddi League: ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಗೆದ್ದ ಬೆಂಗಳೂರು ಬುಲ್ಸ್..!
ಫೆಬ್ರವರಿ 27, 28 ಮತ್ತು ಮಾರ್ಚ್ 1ರಂದು ಟೂರ್ನಿ ನಡೆಯಲಿದ್ದು, ಸಿಂಗಲ್ಸ್ ಮತ್ತು ಡಬಲ್ಸ್ ವಿಭಾಗದಲ್ಲಿ ಪಂದ್ಯಗಳು ನಡೆಯಲಿದೆ. ಭಾಗವಹಿಸುವವರು 9880897187 ಸಂಖ್ಯೆಯಲ್ಲಿ ಸಂಪರ್ಕಿಸಬಹುದಾಗಿ ಎಂದು ಬಸವೇಶ್ವರ ಯುವಕ ಸಂಘದ ಅಧ್ಯಕ್ಷ ಕೆ.ಡಿ. ಶಾಂತಕುಮಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರು ಓಪನ್: ಮೊದಲ ಸುತ್ತಲ್ಲೇ ಪ್ರಜ್ನೇಶ್‌ಗೆ ಆಘಾತ
ಬೆಂಗಳೂರು ಓಪನ್ 2 ಎಟಿಪಿ ಚಾಲೆಂಜರ್ ಟೆನಿಸ್ ಟೂರ್ನಿಯಲ್ಲಿ (Bengaluru Open) ಭಾರತದ ತಾರಾ ಟೆನಿಸಿಗ ಪ್ರಜ್ನೇಶ್ ಗುಣೇಶ್ವರಣ್ ಮೊದಲ ಸುತ್ತಿನಲ್ಲೇ ಸೋತು ಆಘಾತ ಅನುಭವಿಸಿದ್ದಾರೆ.
ಸೋಮವಾರ ನಡೆದ ಪಂದ್ಯದಲ್ಲಿ ಅವರು 3ನೇ ಶ್ರೇಯಾಂಕಿತ ಆಸ್ಪ್ರೇಲಿಯಾದ ಅಲೆಕ್ಸಾಂಡರ್ ವುಕಿಚ್ ವಿರುದ್ಧ 4-6, 2-6 ನೇರ ಸೆಟ್‌ಗಳಲ್ಲಿ ಸೋಲು ಅನುಭವಿಸಿದರು. ಪ್ರಜ್ನೇಶ್ ಪಂದ್ಯದುದ್ದಕ್ಕೂ ಹಲವು ತಪ್ಪುಗಳನ್ನೆಸೆಗಿದರು. ಭಾರತೀಯನ ವಿರುದ್ಧ ಸಂಪೂರ್ಣ ಪ್ರಾಬಲ್ಯ ಸಾಧಿಸಿದ ವುಕಿಚ್ ಸುಲಭ ಗೆಲುವು ದಾಖಲಿಸಿ ಪ್ರಿ ಕ್ವಾರ್ಟರ್ ಪ್ರವೇಶಿಸಿದರು. ಆದರೆ ಅರ್ಜುನ್ ಖಾಡೆ ಭಾರತದವರೇ ಆದ ಆದಿಲ್ ಕಲ್ಯಾಣ್‌ಪುರ್ ವಿರುದ್ಧ 6-2, 6-2 ಸೆಟ್‌ಗಳಲ್ಲಿ ಗೆದ್ದು 2ನೇ ಸುತ್ತು ಪ್ರವೇಶಿಸಿದರು. ಬಲ್ಗೇರಿಯಾದ ದಿಮಿತಾರ್, ಆಸ್ಪ್ರೇಲಿಯಾದ ಮಾರ್ಕ್ ಪೊಲ್‌ಮನ್ಸ್, ಮ್ಯಾಕ್ಸ್ ಪುರ್ಸೆಲ್, ಬೆಲ್ಜಿಯಂನ ಕಿಮ್ಮರ್ ಕೂಡಾ ಪ್ರಿ ಕ್ವಾರ್ಟರ್‌ಗೆ ಲಗ್ಗೆ ಇಟ್ಟರು.
ಇದಕ್ಕೂ ಮೊದಲು ಅರ್ಹತಾ ಸುತ್ತಿನಲ್ಲಿ ಜಪಾನ್‌ನ ರಿಯೋ ನೊಗುಚಿ ವಿರುದ್ಧ ಗೆದ್ದ ಭಾರತದ ನಿತಿನ್ ಕುಮಾರ್, ಮುಕುಂದನ್ ಶಶಿಕುಮಾರ್ ಪ್ರಧಾನ ಸುತ್ತಿಗೆ ಅರ್ಹತೆ ಗಿಟ್ಟಿಸಿಕೊಂಡರು. ಆದರೆ ದಿಗ್ವಿಯಜ್ ಪ್ರತಾಪ್ ಸಿಂಗ್, ಶ್ರೀರಾಮ್ ಬಾಲಾಜಿ ಅರ್ಹತಾ ಸುತ್ತಿನಲ್ಲಿ ಸೋಲನುಭವಿಸಿದರು.