ಇಂದಿನಿಂದ ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಶಿಪ್, ಸಿಂಧು, ಲಕ್ಷ್ಯ ಸೆನ್ ಮೇಲೆ ಚಿತ್ತ
* ಇಂದಿನಿಂದ ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಶಿಪ್ ಆರಂಭ
* ಪದಕದ ಭರವಸೆ ಮೂಡಿಸಿದ್ದಾರೆ ಲಕ್ಷ್ಯ ಸೆನ್, ಪಿ ವಿ ಸಿಂಧು
* ಕೋವಿಡ್‌ನಿಂದಾಗಿ 2 ವರ್ಷ ಟೂರ್ನಿ ನಡೆದಿರಲಿಲ್ಲ
ಮನಿಲಾ(ಏ.26): 2 ಬಾರಿ ಒಲಿಂಪಿಕ್ ಪದಕ ವಿಜೇತೆ ಪಿ.ವಿ.ಸಿಂಧು (PV Sindhu) ಹಾಗೂ ವಿಶ್ವ ಚಾಂಪಿಯನ್‌ಶಿಪ್ ಕಂಚು ವಿಜೇತ ಲಕ್ಷ್ಯ ಸೆನ್ (Lakshya Sen), ಮಂಗಳವಾರದಿಂದ ಆರಂಭಗೊಳ್ಳಲಿರುವ ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಶಿಪ್‌ನಲ್ಲಿ (Badminton Asia Championships) ಭಾರತದ ಸವಾಲನ್ನು ಮುನ್ನಡೆಸಲಿದ್ದಾರೆ. ಕೋವಿಡ್‌ನಿಂದಾಗಿ 2 ವರ್ಷ ಟೂರ್ನಿ ನಡೆದಿರಲಿಲ್ಲ. ಪಿ.ವಿ ಸಿಂಧು ಹಾಗೂ ಲಕ್ಷ್ಯ ಸೆನ್ ಇಬ್ಬರೂ ಉತ್ತಮ ಲಯದಲ್ಲಿದ್ದು ಪದಕ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. ಮಹಿಳಾ ಸಿಂಗಲ್ಸ್ ಮೊದಲ ಸುತ್ತಿನಲ್ಲಿ ಸಿಂಧುಗೆ ಚೈನೀಸ್ ತೈಪೆಯ ಪಾಯ್ ಯು ಪೊ ಎದುರಾಗಲಿದ್ದಾರೆ. ಲಕ್ಷ್ಯ ಸೆನ್‌ಗೆ ಮೊದಲ ಸುತ್ತಿನಲ್ಲಿ ಚೀನಾ ಲೀ ಶಿ ಫೆಂಗ್ ಸವಾಲೆಸೆಯಲಿದ್ದಾರೆ. ಕಿದಂಬಿ ಶ್ರೀಕಾಂತ್ (Kidambi Srikanth), ಸಾಯಿ ಪ್ರಣೀತ್, ಸೈನಾ ನೆಹ್ವಾಲ್ (Saina Nehwal) ಸಹ ಕಣದಲ್ಲಿದ್ದಾರೆ.
2018ರಲಲಿ ಚೀನಾದ ವುಹಾನ್‌ನಲ್ಲಿ ನಡೆದ ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಎಚ್ ಎಸ್ ಪ್ರಣಯ್ ಕಂಚಿನ ಪದಕಕ್ಕೆ ಮುತ್ತಿಕ್ಕಿದ್ದರು. ಆದರೆ ಸ್ವಿಸ್ ಓಪನ್ ಫೈನಲ್ ವೇಳೆಯಲ್ಲಿ ಸಣ್ಣ ಗಾಯಕ್ಕೊಳಗಾಗಿರುವ ಎಚ್ ಎಸ್ ಪ್ರಣಯ್ ಈ ಬಾರಿಯ ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳುತ್ತಿಲ್ಲ. ಹೀಗಾಗಿ 20 ವರ್ಷದ ಲಕ್ಷ್ಯ ಸೆನ್ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.
ಏಷ್ಯಾಕಪ್‌ಗೆ ಭಾರತ ಹಾಕಿ ತಂಡ ಅಭ್ಯಾಸ ಆರಂಭ
ಬೆಂಗಳೂರು: ಮೇ 23ರಿಂದ ಜೂನ್ 1ರ ವರೆಗೂ ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆಯಲಿರುವ ಪುರುಷರ ಏಷ್ಯಾಕಪ್ ಹಾಕಿ ಟೂರ್ನಿಗೆ ಹಾಲಿ ಚಾಂಪಿಯನ್ ಭಾರತ ತಂಡ ಸೋಮವಾರದಿಂದ ಇಲ್ಲಿನ ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್)ದಲ್ಲಿ ಅಭ್ಯಾಸ ಆರಂಭಿಸಿದೆ. ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ, ಮಲೇಷ್ಯಾ, ಜಪಾನ್, ದ.ಕೊರಿಯಾ, ಇಂಡೋನೇಷ್ಯಾ, ಬಾಂಗ್ಲಾದೇಶ ಹಾಗೂ ಒಮಾನ್ ತಂಡಗಳು ಪಾಲ್ಗೊಳ್ಳಲಿವೆ. ಈ ವರೆಗೂ ಒಟ್ಟು 10 ಆವೃತ್ತಿಗಳು ನಡೆದಿದ್ದು, ಭಾರತ 2003, 2007 ಹಾಗೂ 2017ರಲ್ಲಿ ಚಾಂಪಿಯನ್ ಆಗಿತ್ತು.
Khelo India University Games: ಸ್ವರ್ಣಕ್ಕೆ ಮುತ್ತಿಟ್ಟ ಶ್ರೀಹರಿ, ಶಿವ ಶ್ರೀಧರ್
ಸಂತೋಷ್ ಟ್ರೋಫಿ: ಸೆಮೀಸ್‌ಗೆ ಕರ್ನಾಟಕ
ಮಲಪ್ಪುರಂ: 75ನೇ ಆವೃತ್ತಿಯ ಸಂತೋಷ್ ಟ್ರೋಫಿ ರಾಷ್ಟ್ರೀಯ ಫುಟ್ಬಾಲ್ ಟೂರ್ನಿಯ ಸೆಮಿಫೈನಲ್‌ಗೆ ಕರ್ನಾಟಕ ತಂಡ ಪ್ರವೇಶಿಸಿದೆ. ಸೋಮವಾರ ನಡೆದ ‘ಬಿ’ ಗುಂಪಿನ ಅಂತಿಮ ಪಂದ್ಯದಲ್ಲಿ ಗುಜರಾತ್ ವಿರುದ್ಧ 4-0 ಗೋಲುಗಳ ಗೆಲುವು ಸಾಧಿಸಿ, ಗುಂಪಿನ 2ನೇ ತಂಡವಾಗಿ ಅಂತಿಮ 4ರ ಸುತ್ತಿಗೇರಿತು. ಕರ್ನಾಟಕದ ಪರ ಸುಧೀರ್ 2 ಗೋಲು ಬಾರಿಸಿದರು. ಏ.28ರಂದು ನಡೆಯಲಿರುವ ಮೊದಲ ಸೆಮೀಸ್‌ನಲ್ಲಿ ಕರ್ನಾಟಕ ತಂಡ ಕೇರಳ ವಿರುದ್ಧ ಸೆಣಸಲಿದೆ. ಏ.29ಕ್ಕೆ 2ನೇ ಸೆಮೀಸ್‌ನಲ್ಲಿ ಪಶ್ಚಿಮ ಬಂಗಾಳ ಹಾಗೂ ಮಣಿಪುರ ಮುಖಾಮುಖಿಯಾಗಲಿವೆ.
ಟೆನಿಸ್ ರ‍್ಯಾಂಕಿಂಗ್: ಟಾಪ್ 10ಗೆ 18ರ ಕಾರ್ಲೊಸ್
ಬಾರ್ಸಿಲೋನಾ: ಟೆನಿಸ್ ವಿಶ್ವ ರ‍್ಯಾಂಕಿಂಗ್‌ನ ಟಾಪ್ 10 ಪಟ್ಟಿಯಲ್ಲಿ ಸ್ಪೇನ್‌ನ 18 ವರ್ಷದ ಕಾರ್ಲೊಸ್ ಆಲ್ಕರಾಝ್ ಸ್ಥಾನ ಪಡೆದಿದ್ದಾರೆ. ಬಾರ್ಸಿಲೋನಾ ಓಪನ್ ಗೆದ್ದ ಅವರು ನೂತನ ಪಟ್ಟಿಯಲ್ಲಿ 9ನೇ ಸ್ಥಾನ ಪಡೆದಿದ್ದಾರೆ. ಈ ಮೂಲಕ ರಾಫೆಲ್ ನಡಾಲ್ ಬಳಿಕ ಅಗ್ರ 10ರಲ್ಲಿ ಸ್ಥಾನ ಪಡೆದ ಅತಿಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ. 2005ರಲ್ಲಿ ನಡಾಲ್ ತಮಗೆ 18 ವರ್ಷವಿದ್ದಾಗ ಮೊದಲ ಬಾರಿಗೆ ಅಗ್ರ 10ರಲ್ಲಿ ಸ್ಥಾನ ಗಳಿಸಿದ್ದರು.