ಟೋಕಿಯೋ ಪ್ಯಾರಾಲಿಂಪಿಕ್ಸ್ ಪದಕ ವಿಜೇತರಿಗೆ ಕೇಂದ್ರ ಸರ್ಕಾರ ಸನ್ಮಾನ
* ಟೋಕಿಯೋ ಪ್ಯಾರಾಲಿಂಪಿಕ್ಸ್ ಸಾಧಕರನ್ನು ಸನ್ಮಾನಿಸಿದ ಕ್ರೀಡಾಸಚಿವ ಅನುರಾಗ್ ಠಾಕೂರ್
* ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ 19 ಪದಕಗಳನ್ನು ಬೇಟೆಯಾಡಿದ ಭಾರತ
* ಭಾರತದಿಂದ ಈ ಬಾರಿ ಒಟ್ಟು 54 ಪ್ಯಾರಾಥ್ಲೀಟ್‌ಗಳು ಪಾಲ್ಗೊಂಡಿದ್ದರು.
ನವದೆಹಲಿ(ಸೆ.09): ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಭಾರತದ ಕ್ರೀಡಾಪಟುಗಳನ್ನು ಕೇಂದ್ರ ಕ್ರೀಡಾ ಸಚಿವಾಲಯದಿಂದ ಬುಧವಾರ ಸನ್ಮಾನ ಮಾಡಲಾಯಿತು. ಕ್ರೀಡಾ ಸಚಿವ ಅನುರಾಗ್ ಠಾಕೂರ್, ಕ್ರೀಡಾ ಇಲಾಖೆಯ ರಾಜ್ಯ ಖಾತೆ ಸಚಿವ ನಿಶಿತ್ ಪ್ರಮಾಣಿಕ್, ಕಾನೂನು ಸಚಿವ ಕಿರಣ್ ರಿಜಿಜು ಪ್ಯಾರಾಲಿಂಪಿಕ್ಸ್ ಸಾಧಕರನ್ನು ಸನ್ಮಾನಿಸಿ, ಶುಭ ಹಾರೈಸಿದರು.
ಶೂಟಿಂಗ್‌ನಲ್ಲಿ ಚಿನ್ನ ಗೆದ್ದ ಅವನಿ ಲೇಖರಾ, ಶಟ್ಲರ್ ಸುಹಾಸ್ ಯತಿರಾಜ್, ಜಾವೆಲಿನ್ ಪಟು ದೇವೇಂದ್ರ ಝಾಝರಿಯ ಸೇರಿದಂತೆ ಕೆಲ ಕ್ರೀಡಾಳುಗಳು ಟೋಕಿಯೋದ ತಮ್ಮ ಅನುಭವಗಳನ್ನು ತೆರೆದಿಟ್ಟರು. ಟೋಕಿಯೋ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದಿಂದ ಈ ಬಾರಿ ಒಟ್ಟು 54 ಪ್ಯಾರಾಥ್ಲೀಟ್‌ಗಳು ಪಾಲ್ಗೊಂಡಿದ್ದರು.
ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಆಯ್ಕೆ ಸಮಿತಿಗೆ ವೆಂಕಟೇಶ್ ಪ್ರಸಾದ್, ದೇವೇಂದ್ರ ಝಝಾರಿಯಾ ನೇಮಕ
2016ರ ರಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದಿಂದ ಒಟ್ಟು 19 ಪ್ಯಾರಾಥ್ಲೀಟ್‌ಗಳು ಪಾಲ್ಗೊಂಡಿದ್ದರು. ಈ ಬಾರಿ ಭಾರತೀಯ ಕ್ರೀಡಾಪಟುಗಳು ಒಟ್ಟು 19 ಪದಕಗಳನ್ನು ಜಯಿಸಿದ್ದಾರೆ. ಮಾನವ ಚೈತನ್ಯ ಎಲ್ಲದಕ್ಕಿಂತ ದೊಡ್ಡದು ಎನ್ನುವುದನ್ನು ನೀವೆಲ್ಲಾ ಸಾಬೀತು ಮಾಡಿದ್ದೀರ ಎಂದು ಪದಕ ವಿಜೇತರನ್ನು ಸನ್ಮಾನಿಸಿದ ಕ್ರೀಡಾಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.
ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ 17 ಸಾಧಕರು ದೇಶಕ್ಕೆ ಒಟ್ಟು 19 ಪದಕಗಳನ್ನು ಗೆಲ್ಲುವ ಮೂಲಕ ಪ್ಯಾರಾಲಿಂಪಿಕ್ಸ್‌ನಲ್ಲಿ ಶ್ರೇಷ್ಠ ಪದಕಗಳ ಸಾಧನೆ ಮಾಡಿದ್ದರು. ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ 5 ಚಿನ್ನ, 8 ಬೆಳ್ಳಿ ಹಾಗೂ 6 ಕಂಚಿನ ಪದಕಗಳನ್ನು ಜಯಿಸಿದ ಸಾಧನೆ ಮಾಡಿತ್ತು. ಅವನಿ ಲೇಖಾರಾ ಶೂಟಿಂಗ್‌ನಲ್ಲಿ ಚಿನ್ನ ಹಾಗೂ ಕಂಚಿನ ಪದಕ ಜಯಿಸಿದರೆ, ಸಿಂಗ್‌ರಾಜ್ ಅದಾನ ಬೆಳ್ಳಿ ಹಾಗೂ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದರು.