ಆಸ್ಟ್ರೇಲಿಯನ್ ಓಪನ್: ನಡಾಲ್ 21ನೇ ಗ್ರ್ಯಾನ್ ಸ್ಲಾಂ ಕನಸು ಭಗ್ನ
ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ 21ನೇ ಗ್ರ್ಯಾನ್‌ಸ್ಲಾಂ ಗೆಲ್ಲುವ ರಾಫೆಲ್ ನಡಾಲ್ ಕನಸು ಭಗ್ನವಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಮೆಲ್ಬರ್ನ್(ಫೆ.18): ದಾಖಲೆಯ 21ನೇ ಗ್ರ್ಯಾನ್ ಸ್ಲಾಂ ಪ್ರಶಸ್ತಿ ಗೆಲ್ಲಲು ಸ್ಪೇನ್‌ನ ರಾಫೆಲ್ ನಡಾಲ್ ಮತ್ತಷ್ಟು ದಿನಗಳ ಕಾಲ ಕಾಯಬೇಕಿದೆ. ಬುಧವಾರ ನಡೆದ ಆಸ್ಪ್ರೇಲಿಯನ್ ಓಪನ್ ಕ್ವಾರ್ಟರ್ ಫೈನಲ್‌ನಲ್ಲಿ ನಡಾಲ್, ಗ್ರೀಸ್‌ನ ಸ್ಟೆಫಾನೋಸ್ ಟಿಟ್ಸಿಪಾಸ್ ವಿರುದ್ಧ 6-3, 6-2, 6-7, 4-6, 6-7 ಸೆಟ್‌ಗಳಲ್ಲಿ ಸೋಲು ಕಂಡರು.
ಗ್ರ್ಯಾನ್ ಸ್ಲಾಂಗಳಲ್ಲಿ 225ನೇ ಬಾರಿಗೆ ಮೊದಲೆರಡು ಸೆಟ್‌ಗಳಲ್ಲಿ ಗೆದ್ದು ಮುನ್ನಡೆ ಸಾಧಿಸಿದ ನಡಾಲ್, ಕೇವಲ 2ನೇ ಬಾರಿಗೆ ಕೊನೆಯ 3 ಸೆಟ್‌ಗಳಲ್ಲಿ ಸೋಲು ಕಂಡು ಹೊರಬಿದ್ದರು. ರೋಜರ್ ಫೆಡರರ್‌ರ 20 ಗ್ರ್ಯಾನ್ ಸ್ಲಾಂಗಳ ದಾಖಲೆ ಮುರಿಯಲು ನಡಾಲ್, ಮುಂಬರುವ ಫ್ರೆಂಚ್ ಓಪನ್ ವರೆಗೂ ಕಾಯಬೇಕಿದೆ.
ಆಸ್ಟ್ರೇಲಿಯನ್ ಓಪನ್: ಸೆಮೀಸ್‌ಗೇರಿದ ಜೋಕೋವಿಚ್, ಸೆರೆನಾ ವಿಲಿಯಮ್ಸ್
ಸೆಮೀಸ್‌ಗೆ ಮೆಡ್ವೆಡೆವ್: ಬುಧವಾರ ನಡೆದ ಮತ್ತೊಂದು ಕ್ವಾರ್ಟರ್ ಫೈನಲ್‌ನಲ್ಲಿ ರಷ್ಯಾದ ಡ್ಯಾನಿಲ್ ಮೆಡ್ವೆಡೆವ್, ರಷ್ಯಾದವರೇ ಆದ ಆ್ಯಂಡ್ರೆ ರುಬೆಲೆವ್ ವಿರುದ್ಧ 7-5, 6-3, 6-2 ಸೆಟ್‌ಗಳಲ್ಲಿ ಜಯಗಳಿಸಿದರು. ಸೆಮೀಸ್‌ನಲ್ಲಿ ಮೆಡ್ವೆಡೆವ್ ಹಾಗೂ ಟಿಟ್ಸಿಪಾಸ್ ಎದುರಾಗಲಿದ್ದು, ಇಬ್ಬರೂ ಮೊದಲ ಬಾರಿಗೆ ಆಸ್ಪ್ರೇಲಿಯನ್ ಓಪನ್ ಫೈನಲ್ ತಲುಪಲು ಸೆಣಸಲಿದ್ದಾರೆ.
ನಂ.1 ಬಾರ್ಟಿಗೆ ಸೋಲು: ಮಹಿಳಾ ಸಿಂಗಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಅಗ್ರ ಶ್ರೇಯಾಂಕಿತೆ ಆಸ್ಪ್ರೇಲಿಯಾದ ಆಶ್ಲೆ ಬಾರ್ಟಿ, ಚೆಕ್ ಗಣರಾಜ್ಯದ ಕ್ಯಾರೋಲಿನಾ ಮುಚೋವಾ ವಿರುದ್ಧ 6-1, 3-6, 2-6 ಸೆಟ್‌ಗಳಲ್ಲಿ ಸೋಲುಂಡು ಹೊರಬಿದ್ದರು. ಮತ್ತೊಂದು ಕ್ವಾರ್ಟರ್ ಫೈನಲ್‌ನಲ್ಲಿ ಅಮೆರಿಕದ ಜೆನಿಫರ್ ಬ್ರಾಡಿ, ತಮ್ಮ ದೇಶದವರೇ ಆದ ಜೆಸ್ಸಿಕಾ ಪೆಗುಲಾ ವಿರುದ್ಧ 4-6, 6-2, 6-1 ಸೆಟ್‌ಗಳಲ್ಲಿ ಗೆದ್ದು ಸೆಮೀಸ್‌ಗೇರಿದರು.
ಇಂದು ಸೆಮೀಸ್: ಮಹಿಳಾ ಸಿಂಗಲ್ಸ್‌ನ 2 ಹಾಗೂ ಪುರುಷರ ಸಿಂಗಲ್ಸ್‌ನ ಒಂದು ಸೆಮಿಫೈನಲ್ ಗುರುವಾರ ನಡೆಯಲಿದೆ. ಮೊದಲ ಸೆಮೀಸ್‌ನಲ್ಲಿ ಸೆರೆನಾ ವಿಲಿಯಮ್ಸ್ ಹಾಗೂ ನವೊಮಿ ಒಸಾಕ ಪೈಪೋಟಿ ನಡೆಸಲಿದ್ದರೆ, 2ನೇ ಸೆಮೀಸ್‌ನಲ್ಲಿ ಬ್ರಾಡಿ ಹಾಗೂ ಮುಚೋವಾ ಮುಖಾಮುಖಿಯಾಗಲಿದ್ದಾರೆ. ಪುರುಷರ ಸಿಂಗಲ್ಸ್ ಸೆಮೀಸ್‌ನಲ್ಲಿ ನೋವಾಕ್ ಜೋಕೋವಿಚ್ ಎದುರು ಅಸ್ಲನ್ ಕರಟ್ಸೆವ್ ಸೆಣಸಲಿದ್ದಾರೆ.