ಮೆಲ್ಬರ್ನ್‌(ಜ.24): ವಿಶ್ವ ನಂ.1 ಟೆನಿಸಿಗ ಸ್ಪೇನ್‌ನ ರಾಫೆಲ್‌ ನಡಾಲ್‌, ಆಸ್ಪ್ರೇಲಿಯನ್‌ ಓಪನ್‌ ಗ್ರ್ಯಾಂಡ್‌ಸ್ಲಾಂನಲ್ಲಿ 3ನೇ ಸುತ್ತು ಪ್ರವೇಶಿಸಿದ್ದಾರೆ. ಉಳಿದಂತೆ ಆಸ್ಪ್ರೇಲಿಯಾದ ನಿಕ್‌ ಕಿರಿಯೋಸ್‌, ವಿಂಬಲ್ಡನ್‌ ಚಾಂಪಿಯನ್‌ ರೋಮೇನಿಯಾದ ಸಿಮೋನಾ ಹಾಲೆಪ್‌, 2ನೇ ಶ್ರೇಯಾಂಕಿತೆ ಕ್ಯಾರೋಲಿನಾ ಪ್ಲಿಸ್ಕೋವಾ 3ನೇ ಸುತ್ತಿಗೇರಿದ್ದಾರೆ.

ಗುರುವಾರ ನಡೆದ ಪುರುಷರ ಸಿಂಗಲ್ಸ್‌ 2ನೇ ಸುತ್ತಿನಲ್ಲಿ ನಡಾಲ್‌, ಅರ್ಜೆಂಟೀನಾದ ಫೆಡ್ರಿಕೊ ಡೆಲ್ಬೊನಿಸ್‌ ವಿರುದ್ಧ 6-3, 7-6(7-4), 6-1 ಸೆಟ್‌ಗಳಲ್ಲಿ ಗೆಲುವು ಪಡೆದರು. ಇದು ಸೇರಿದಂತೆ ಒಟ್ಟಾರೆ ಆಸ್ಪ್ರೇಲಿಯನ್‌ ಓಪನ್‌ನಲ್ಲಿ ನಡಾಲ್‌ 14ನೇ ಬಾರಿ ಮೂರನೇ ಸುತ್ತು ಪ್ರವೇಶಿಸಿದಂತಾಗಿದೆ.

ಆಸ್ಪ್ರೇಲಿಯನ್‌ ಓಪನ್‌ ಗ್ರ್ಯಾಂಡ್‌ಸ್ಲಾಂ; ಸೆರೆನಾ, ಜೋಕೋಗೆ ಸುಲಭ ಜಯ

ಸ್ವಿಜರ್‌ಲೆಂಡ್‌ನ ಸ್ಟಾನ್‌ ವಾವ್ರಿಂಕಾ, ಇಟಲಿಯ ಆ್ಯಂಡ್ರೆಸ್‌ ಸೆಪ್ಪಿ ಎದುರು 4-6, 7-5, 6-3, 3-6, 6-4 ಸೆಟ್‌ಗಳಲ್ಲಿ ಪ್ರಯಾಸದ ಗೆಲುವು ದಾಖಲಿಸಿದರು. 2017ರ ಬಳಿಕ ವಾವ್ರಿಂಕಾ, ಆಸ್ಪ್ರೇಲಿಯನ್‌ ಓಪನ್‌ನಲ್ಲಿ ಮೊದಲ ಬಾರಿ 3ನೇ ಸುತ್ತು ಪ್ರವೇಶಿಸಿದ್ದಾರೆ.

ಬಾಲ್‌ ಗರ್ಲ್‌ಗೆ ಮುತ್ತಿಟ್ಟ ನಡಾಲ್‌: ಪಂದ್ಯದ ವೇಳೆ ನಡಾಲ್‌ ಹೊಡೆದ ಚೆಂಡು, ಕೋರ್ಟ್‌ನಲ್ಲಿದ್ದ ಬಾಲ್ ಗರ್ಲ್‌ಗೆ ತಲೆಗೆ ಬಡಿಯಿತು. ಈ ವೇಳೆ ನಡಾಲ್‌ ಗಾಬರಿಯಾಗಿದ್ದರು. ಆದರೆ ಸುಧಾರಿಸಿಕೊಂಡ ಬಾಲ್‌ ಗರ್ಲ್‌ಗೆ ಪೆಟ್ಟು ಬಿದ್ದಿಲ್ಲ ಎಂದು ಹೇಳಿದಾಗ, ಹತ್ತಿರಕ್ಕೆ ಕರೆದ ನಡಾಲ್‌ ಆಕೆಯ ಕೆನ್ನೆಗೆ ಮುತ್ತಿಟ್ಟು ಕ್ಷಮೆ ಕೋರಿದರು. ಈ ವಿಡಿಯೋ ವೈರಲ್‌ ಆಗಿದೆ.

ಪ್ಲಿಸ್ಕೋವಾ, ಕೆರ್ಬರ್‌ಗೆ ಮುನ್ನಡೆ: ಮಹಿಳಾ ಸಿಂಗಲ್ಸ್‌ನಲ್ಲಿ 4ನೇ ಶ್ರೇಯಾಂಕಿತೆ ರೋಮೇನಿಯಾದ ಸಿಮೋನಾ ಹಾಲೆಪ್‌, 2ನೇ ಶ್ರೇಯಾಂಕಿತೆ ಕ್ಯಾರೋಲಿನಾ ಪ್ಲಿಸ್ಕೋವಾ, ಎಲಿನಾ ಸ್ವಿಟೋಲಿನಾ, ಏಂಜೆಲಿಕ್‌ ಕೆರ್ಬರ್‌, ಸ್ಪೇನ್‌ನ ಗಾರ್ಬೈನ್‌ ಮುಗುರುಜಾ ಮೂರನೇ ಸುತ್ತಿಗೆ ಪ್ರವೇಶ ಪಡೆದಿದ್ದಾರೆ.

ಸಾನಿಯಾಗೆ ಗಾಯ: ಟೂರ್ನಿಯಿಂದ ಔಟ್‌

ಮಹಿಳಾ ಡಬಲ್ಸ್‌ನ ಮೊದಲ ಸುತ್ತಲ್ಲೇ ಭಾರತದ ಸಾನಿಯಾ ಮಿರ್ಜಾ ಹಾಗೂ ಉಕ್ರೇನ್‌ನ ನಾಡಿಯಾ ಕಿಚನೊಕ್‌ ಜೋಡಿ ಹೊರಬಿದ್ದಿದೆ. ಪಂದ್ಯ ನಡೆಯುವ ವೇಳೆಯಲ್ಲಿ ಗಾಯಗೊಂಡ ಸಾನಿಯಾ, ಆಟ ಮುಂದುವರಿಸಲು ನಿರಾಕರಿಸಿದರು. ಇದೇ ವೇಳೆ ಮಿಶ್ರ ಡಬಲ್ಸ್‌ನಲ್ಲಿ ಸಾನಿಯಾ ಜತೆ ಆಡಬೇಕಿದ್ದ ರೋಹನ್‌ ಬೋಪಣ್ಣ, ಸಾನಿಯಾರ ಜತೆಗಾರ್ತಿ ಕಿಚನೊಕ್‌ ಜತೆ ಕಣಕ್ಕಿಳಿಯದ್ದಾರೆ. ಲಿಯಾಂಡರ್‌ ಪೇಸ್‌, 2017ರ ಫ್ರೆಂಚ್‌ ಓಪನ್‌ ಚಾಂಪಿಯನ್‌ ಲಾತ್ವಿಯಾದ ಎಲೆನಾ ಒಸ್ಟಪೆನ್ಕೊ ಜತೆ ಆಡಲಿದ್ದಾರೆ.