Australian Open: ರಾಫೆಲ್ ನಡಾಲ್, ಆಶ್ಲೆ ಬಾರ್ಟಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆ

* ಆಸ್ಟ್ರೇಲಿಯನ್‌ ಓಪನ್ ಟೆನಿಸ್ ಟೂರ್ನಿಯಲ್ಲಿ ಅಂತಿಮ ಎಂಟರ ಘಟ್ಟ ಪ್ರವೇಶಿಸಿದ ರಾಫೆಲ್ ನಡಾಲ್

* 21ನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಗೆಲ್ಲಲು ನಡಾಲ್‌ಗೆ ಇನ್ನು 3 ಜಯ ಮಾತ್ರ ಬೇಕಾಗಿದೆ

* ವಿಶ್ವ ನಂ.1 ಆಟಗಾರ್ತಿ ಆಶ್ಲೆ ಬಾರ್ಟಿ ಕ್ವಾರ್ಟರ್ ಫೈನಲ್ ಪ್ರವೇಶ

Australian Open Rafael Nadal Ashleigh Barty Sailed into Quarter Final kvn

ಮೆಲ್ಬರ್ನ್(ಜ.24)‌: ದಾಖಲೆಯ 21 ಗ್ರ್ಯಾನ್‌ ಸ್ಲಾಂ ಮೇಲೆ ಕಣ್ಣಿಟ್ಟಿರುವ ಸ್ಪೇನ್‌ನ ರಾಫೆಲ್‌ ನಡಾಲ್‌ (Rafael Nadal) 14ನೇ ಬಾರಿ ಆಸ್ಪ್ರೇಲಿಯನ್‌ ಓಪನ್‌ (Australian Open 2022) ಟೆನಿಸ್‌ ಟೂರ್ನಿಯ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಮಹಿಳಾ ವಿಭಾಗದಲ್ಲಿ ಆಸ್ಪ್ರೇಲಿಯಾದವರೇ ಆದ ವಿಶ್ವ ನಂ.1 ಆಟಗಾರ್ತಿ ಆಶ್ಲೆ ಬಾರ್ಟಿ (Ashleigh Barty) ಅಂತಿಮ ಎಂಟರ ಘಟ್ಟಪ್ರವೇಶಿಸಿದ್ದಾರೆ. ಭಾನುವಾರ ನಡೆದ ಪುರುಷರ ಸಿಂಗಲ್ಸ್‌ನ ಮೊದಲ ಸೆಟ್‌ನಲ್ಲಿ ನಡಾಲ್‌ಗೆ ಫ್ರಾನ್ಸ್‌ನ ಅಡ್ರಿಯನ್‌ ಮನಾರಿನೊ ಪ್ರಬಲ ಪೈಪೋಟಿ ನೀಡಿದರು. ಟೈ ಬ್ರೇಕರ್‌ನಲ್ಲಿ ಮೊದಲ ಸೆಟ್‌ ಗೆದ್ದ ನಡಾಲ್‌, 7-6(14), 6-2, 6-2ರಲ್ಲಿ ಜಯ ಸಾಧಿಸಿ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆಯಿಟ್ಟರು. ಈ ಗೆಲುವಿನೊಂದಿಗೆ 21ನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಗೆಲ್ಲಲು ನಡಾಲ್‌ಗೆ ಇನ್ನು 3 ಜಯ ಮಾತ್ರ ಬೇಕಾಗಿದೆ. ಮುಂದಿನ ಪಂದ್ಯದಲ್ಲಿ ನಡಾಲ್‌, ಕೆನಡಾದ ಡೆನಿಸ್‌ ಶಪೋವಲೊವ್‌ ಎದುರು ಸೆಣಸಲಿದ್ದಾರೆ.

ಶಪೋವಲೊವ್‌ ಅವರು ಒಲಿಂಪಿಕ್ಸ್‌ ಚಿನ್ನದ ಪದಕ (Olympic Gold Medallist) ವಿಜೇತ ವಿಶ್ವ ನಂ.3, ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೆವ್‌ (Alexander Zverev) ಅವರನ್ನು 6-3, 7-6(5), 6-3ರಲ್ಲಿ ಮಣಿಸಿ ಕ್ವಾರ್ಟರ್‌ ಪ್ರವೇಶಿಸಿದ್ದಾರೆ.

ಬಾರ್ಟಿ, ಕ್ರೆಜಿಕೋವಾಗೆ ಜಯ: ಅಮೆರಿಕಾದ ಅಮಾಂಡ ಅಸಿನಿಮೋವ ವಿರುದ್ಧ 6-4, 6-3ರಲ್ಲಿ ಜಯ ಸಾಧಿಸಿದ ವಿಶ್ವ ಅಗ್ರ ಶ್ರೇಯಾಂಕಿತೆ ಆಶ್ಲೆ ಬಾರ್ಟಿ ಎಂಟರ ಘಟಕ್ಕೇರಿದರು. ಮುಂದಿನ ಪಂದ್ಯದಲ್ಲಿ ಬಾರ್ಟಿ ಅಮೆರಿಕಾದ ಜೆಸ್ಸಿಕಾ ಪೆಗುಲಾ ಸವಾಲು ಎದುರಿಸಲಿದ್ದಾರೆ. ಪೆಗುಲಾ ಅವರು ಗ್ರೀಕ್‌ನ ಮರಿಯಾ ಸಕ್ಕಾರಿ ವಿರುದ್ಧ 7-6, 6-3 ಜಯ ಸಾಧಿಸಿ ಮುಂದಿನ ಹಂತ ಪ್ರವೇಶಿಸಿದ್ದಾರೆ. 2 ಬಾರಿ ಆಸ್ಪ್ರೇಲಿಯನ್‌ ಓಪನ್‌ ವಿಜೇತೆ ಬೆಲಾರಸ್‌ನ ವಿಕ್ಟೋರಿಯಾ ಅಜರೆಂಕಾರನ್ನು 6-2, 6-2ರಲ್ಲಿ ಮಣಿಸಿದ ಚೆಕ್‌ ಗಣರಾಜ್ಯದ ಬಾರ್ಬೊರಾ ಕ್ರೆಜಿಕೋವಾ ಕ್ವಾರ್ಟರ್‌ ಫೈನಲ್‌ಗೇರಿದರು.

Australian Open: ಹಾಲಿ ಚಾಂಪಿಯನ್‌ ನವೋಮಿ ಒಸಾಕ ಔಟ್‌..!

ರಾಫೆಲ್ ನಡಾಲ್‌ ದಾಖಲೆಯ 2ನೇ ಸ್ಥಾನ

ಭಾನುವಾರದ ಜಯದೊಂದಿಗೆ ನಡಾಲ್‌ ಅವರು ಆಸ್ಪ್ರೇಲಿಯನ್‌ ಓಪನ್‌ನಲ್ಲಿ ಅತಿ ಹೆಚ್ಚು ಬಾರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ ಆಟಗಾರರ ಪಟ್ಟಿಯಲ್ಲಿ 2ನೇ ಸ್ಥಾನವನ್ನು ಹಂಚಿಕೊಂಡರು. ಆಸ್ಪ್ರೇಲಿಯಾದ ಜಾನ್‌ ನ್ಯೂಕಾಂಬ್‌ ಸಹ 14 ಬಾರಿ ಈ ಸಾಧನೆ ಮಾಡಿದ್ದಾರೆ. 15 ಬಾರಿ ಎಂಟರ ಘಟ್ಟಪ್ರವೇಶಿಸಿರುವ ರೋಜರ್‌ ಫೆಡರರ್‌ (Roger Federer) ಮೊದಲ ಸ್ಥಾನದಲ್ಲಿದ್ದಾರೆ. ಒಟ್ಟಾರೆ ಗ್ರ್ಯಾನ್‌ಸ್ಲಾಂಗಳಲ್ಲಿ ಅತಿ ಹೆಚ್ಚು ಬಾರಿ ಎಂಟರ ಘಟ್ಟಪ್ರವೇಶಿಸಿದವರ ಸಾಲಿನಲ್ಲಿ ರಾಫೆಲ್ ನಡಾಲ್‌(45) 3ನೇ ಸ್ಥಾನದಲ್ಲಿದ್ದಾರೆ. ರೋಜರ್ ಫೆಡರರ್‌(58), ನೊವಾಕ್ ಜೊಕೊವಿಚ್‌(51) ಮೊದಲೆರಡು ಸ್ಥಾನದಲ್ಲಿದ್ದಾರೆ. ಅತಿ ಹೆಚ್ಚು(20) ಗ್ರ್ಯಾನ್‌ ಸ್ಲಾಂ ಪ್ರಶಸ್ತಿಗಳನ್ನು ಗೆದ್ದಿರುವ ದಾಖಲೆಯನ್ನು ನಡಾಲ್‌, ಫೆಡರರ್‌ ಮತ್ತು ಜೊಕೊವಿಚ್‌ ಜತೆ ಹಂಚಿಕೊಂಡಿದ್ದಾರೆ.

ಸಾನಿಯಾ ಮಿರ್ಜಾ - ರಾಜೀವ್‌ ರಾಮ್‌ ಕ್ವಾರ್ಟರ್‌ಗೆ

ಮೆಲ್ಬರ್ನ್‌: ಭಾರತದ ಖ್ಯಾತ ಟೆನಿಸ್‌ ತಾರೆ ಸಾನಿಯಾ ಮಿರ್ಜಾ (Sania Mirza) ಹಾಗೂ ಅಮೆರಿಕದ ರಾಜೀವ್‌ ರಾಮ್‌ (Rajiv Ram) ಜೋಡಿ ಆಸ್ಪ್ರೇಲಿಯನ್‌ ಓಪನ್‌ ಗ್ರ್ಯಾನ್‌ ಸ್ಲಾಂ ಟೆನಿಸ್‌ ಟೂರ್ನಿಯಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದೆ. ಭಾನುವಾರ ನಡೆದ ಮಿಶ್ರ ಡಬಲ್ಸ್‌ 2ನೇ ಸುತ್ತಿನ ಸ್ಪರ್ಧೆಯಲ್ಲಿ ಈ ಜೋಡಿ ಆಸ್ಪ್ರೇಲಿಯಾದ ಪೆರೆಜ್‌ ಹಾಗೂ ನೆದರ್ಲೆಂಡ್ಸ್‌ನ ಮಿಡೆಲ್‌ಕೂಪ್‌ ವಿರುದ್ಧ 7-6, 6-4 ಸೆಟ್‌ಗಳಲ್ಲಿ ಗೆಲುವು ಸಾಧಿಸಿತು. ಕಳೆದ ವಾರ ಮಿರ್ಜಾ ಮಹಿಳಾ ಡಬಲ್ಸ್‌ನಲ್ಲಿ ಮೊದಲ ಸುತ್ತಲ್ಲೇ ಸೋಲನುಭವಿಸಿದ್ದರು.

Latest Videos
Follow Us:
Download App:
  • android
  • ios