ಮೆಲ್ಬರ್ನ್(ಫೆ.21)‌: ಜಪಾನ್‌ನ ನವೊಮಿ ಒಸಾಕ ಆಸ್ಪ್ರೇಲಿಯನ್‌ ಓಪನ್‌ ಟೆನಿಸ್‌ ಗ್ರ್ಯಾನ್‌ಸ್ಲಾಂನ ಮಹಿಳಾ ಸಿಂಗಲ್ಸ್‌ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ. ಶನಿವಾರ ನಡೆದ ಫೈನಲ್‌ ಪಂದ್ಯದಲ್ಲಿ ಅಮೆರಿಕದ ಜೆನಿಫರ್‌ ಬ್ರಾಡಿ ವಿರುದ್ಧ 6-4, 6-3 ನೇರ ಸೆಟ್‌ಗಳಲ್ಲಿ ಜಯಗಳಿಸಿದ ಒಸಾಕ, 2ನೇ ಬಾರಿಗೆ ಆಸ್ಪ್ರೇಲಿಯನ್‌ ಓಪನ್‌ ಚಾಂಪಿಯನ್‌ ಅದರು. ವಿಶ್ವ ರಾರ‍ಯಂಕಿಂಗ್‌ನಲ್ಲಿ 2ನೇ ಸ್ಥಾನದಲ್ಲಿರುವ ಒಸಾಕಗಿದು ಒಟ್ಟಾರೆ 4ನೇ ಗ್ರ್ಯಾನ್‌ಸ್ಲಾಂ ಪ್ರಶಸ್ತಿ. 2018, 2020ರಲ್ಲಿ ಅವರು ಯುಎಸ್‌ ಓಪನ್‌ ಜಯಿಸಿದ್ದರು.

ಆಸ್ಪ್ರೇಲಿಯನ್‌ ಓಪನ್: ಫೈನಲ್‌ಗೆ ರಷ್ಯಾದ ಮೆಡ್ವೆಡೆವ್‌

ಈ ಗೆಲುವಿನೊಂದಿಗೆ ಒಸಾಕ ಗ್ರ್ಯಾನ್‌ಸ್ಲಾಂಗಳಲ್ಲಿ ಕ್ವಾರ್ಟರ್‌ ಫೈನಲ್‌ನಿಂದ ಮುಂದಕ್ಕೆ ತಮ್ಮ ಗೆಲುವು-ಸೋಲಿನ ದಾಖಲೆಯನ್ನು 12-0ಗೆ ಏರಿಸಿಕೊಂಡಿದ್ದಾರೆ. ಅಲ್ಲದೇ ಸತತ 21ನೇ ಪಂದ್ಯಗಳಲ್ಲಿ ಅಜೇಯವಾಗಿ ಉಳಿದಿದ್ದಾರೆ. ಚೊಚ್ಚಲ ಬಾರಿಗೆ ಗ್ರ್ಯಾನ್‌ಸ್ಲಾಂ ಫೈನಲ್‌ಗೇರಿದ್ದ ಬ್ರಾಡಿ, ಪ್ರಶಸ್ತಿ ಗೆಲ್ಲಲು ವಿಫಲರಾಗಿ ನಿರಾಸೆ ಅನುಭವಿಸಿದರು.

ಇಂದು ಪುರುಷರ ಫೈನಲ್ಸ್‌: ಜೋಕೋ-ಮೆಡ್ವೆಡೆವ್‌ ಸೆಣಸು

ಪುರುಷುರ ಸಿಂಗಲ್ಸ್‌ ಫೈನಲ್‌ ಪಂದ್ಯ ಭಾನುವಾರ ನಡೆಯಲಿದ್ದು, ದಾಖಲೆಯ 9ನೇ ಆಸ್ಪ್ರೇಲಿಯನ್‌ ಓಪನ್‌ ಪ್ರಶಸ್ತಿ ಗೆಲ್ಲಲು ವಿಶ್ವ ನಂ.1 ಆಟಗಾರ ಸರ್ಬಿಯಾದ ನೋವಾಕ್‌ ಜೋಕೋವಿಚ್‌ ಕಾತರಿಸುತ್ತಿದ್ದಾರೆ. ಜೊತೆಗೆ ತಮ್ಮ ಒಟ್ಟು ಗ್ರ್ಯಾನ್‌ ಸ್ಲಾಂ ಪ್ರಶಸ್ತಿ ಗೆಲುವಿನ ಸಂಖ್ಯೆಯನ್ನು 18ಕ್ಕೆ ಏರಿಸಿಕೊಳ್ಳುವುದು ಜೋಕೋವಿಚ್‌ ಗುರಿಯಾಗಿದೆ. 2019, 2020ರಲ್ಲಿ ಆಸ್ಪ್ರೇಲಿಯನ್‌ ಓಪನ್‌ ಗೆದ್ದಿದ್ದ ಜೋಕೋವಿಚ್‌, ಹ್ಯಾಟ್ರಿಕ್‌ ಬಾರಿಸಲು ಎದುರು ನೋಡುತ್ತಿದ್ದಾರೆ. ಇದೇ ವೇಳೆ ಮೆಡ್ವೆಡೆವ್‌ ಚೊಚ್ಚಲ ಗ್ರ್ಯಾನ್‌ ಸ್ಲಾಂ ಗೆಲ್ಲುವ ಕನಸು ಕಾಣುತ್ತಿದ್ದಾರೆ.