ಮೆಲ್ಬರ್ನ್(ಫೆ.08)‌: ಹಲವು ಗೊಂದಲಗಳ ಬಳಿಕ ಆಸ್ಪ್ರೇಲಿಯನ್‌ ಓಪನ್‌ ಗ್ರ್ಯಾನ್‌ ಸ್ಲಾಂ ಟೆನಿಸ್‌ ಟೂರ್ನಿಗೆ ಸೋಮವಾರ ಚಾಲನೆ ಸಿಗಲಿದ್ದು, ದಿಗ್ಗಜ ಟೆನಿಸಿಗರಾದ ಸೆರೆನಾ ವಿಲಿಯಮ್ಸ್‌, ರಾಫೆಲ್‌ ನಡಾಲ್‌ ಹಾಗೂ ನೋವಾಕ್‌ ಜೋಕೋವಿಚ್‌ ದಾಖಲೆ ಬರೆಯಲು ಕಾತರಿಸುತ್ತಿದ್ದಾರೆ.

23 ಗ್ರ್ಯಾನ್‌ಸ್ಲಾಂಗಳ ಒಡತಿ ಸೆರೆನಾ ವಿಲಿಯಮ್ಸ್‌, ತಾಯಿಯಾದ ಬಳಿಕ ಮೊದಲ ಗ್ರ್ಯಾನ್‌ಸ್ಲಾಂ ಗೆಲ್ಲಲು 2 ವರ್ಷಗಳಿಂದ ಪ್ರಯತ್ನಿಸುತ್ತಿದ್ದು ಸಾಧ್ಯವಾಗಿಲ್ಲ. ಈ ಬಾರಿ ಟ್ರೋಫಿ ಜಯಿಸಿ ದಿಗ್ಗಜ ಆಟಗಾರ್ತಿ ಮಾರ್ಗರೆಟ್‌ ಕೋರ್ಟ್‌ರ 24 ಗ್ರ್ಯಾನ್‌ ಸ್ಲಾಂ ಸಿಂಗಲ್ಸ್‌ ಪ್ರಶಸ್ತಿ ದಾಖಲೆಯನ್ನು ಸರಿಗಟ್ಟುವ ತವಕದಲ್ಲಿದ್ದಾರೆ.

ಕಳೆದ ವರ್ಷ ಫ್ರೆಂಚ್‌ ಓಪನ್‌ ಗೆದ್ದು ರೋಜರ್‌ ಫೆಡರರ್‌ರ 20 ಗ್ರ್ಯಾನ್‌ ಸ್ಲಾಂ ದಾಖಲೆಯನ್ನು ಸರಿಗಟ್ಟಿದ್ದ ರಾಫೆಲ್‌ ನಡಾಲ್‌, ಆಸ್ಪ್ರೇಲಿಯನ್‌ ಓಪನ್‌ ಜಯಿಸಿ ಅತಿಹೆಚ್ಚು ಗ್ರ್ಯಾನ್‌ ಸ್ಲಾಂ ಗೆದ್ದ ಆಟಗಾರ ಎನ್ನುವ ದಾಖಲೆ ಬರೆಯಲು ಹಾತೊರೆಯುತ್ತಿದ್ದಾರೆ. ಫೆಡರರ್‌ ಈ ಟೂರ್ನಿಗೆ ಗೈರಾಗಿರುವ ಕಾರಣ ನಡಾಲ್‌ಗೆ ಹೆಚ್ಚಿನ ಅವಕಾಶವಿದೆ.

ಫೆಬ್ರವರಿ 8ರಿಂದಲೇ ಆಸ್ಪ್ರೇಲಿಯನ್‌ ಓಪನ್‌ ಟೆನಿಸ್‌

8 ಬಾರಿ ಆಸ್ಪ್ರೇಲಿಯನ್‌ ಓಪನ್‌ ಗೆದ್ದಿರುವ ನೋವಾಕ್‌ ಜೋಕೋವಿಚ್‌, ತಮ್ಮ ಹೆಸರಲ್ಲೇ ಇರುವ ದಾಖಲೆಯನ್ನು ಉನ್ನತೀಕರಣಗೊಳಿಸಿಕೊಳ್ಳಲು ಎದುರು ನೋಡುತ್ತಿದ್ದಾರೆ. ಜೊತೆಗೆ 18ನೇ ಗ್ರ್ಯಾನ್‌ ಸ್ಲಾಂ ಗೆದ್ದು ಫೆಡರರ್‌ ಹಾಗೂ ನಡಾಲ್‌ಗೆ ಮತ್ತಷ್ಟು ಪೈಪೋಟಿ ನೀಡುವ ಉತ್ಸಾಹದಲ್ಲಿದ್ದಾರೆ.

ಭಾರತೀಯರ ಮೇಲೆ ನಿರೀಕ್ಷೆ: ಪುರುಷರ ಸಿಂಗಲ್ಸ್‌ನಲ್ಲಿ ಸುಮಿತ್‌ ನಗಾಲ್‌ ಭಾರತವನ್ನು ಪ್ರತಿನಿಧಿಸಲಿರುವ ಏಕೈಕ ಆಟಗಾರ. ಪುರುಷರ ಡಬಲ್ಸ್‌ನಲ್ಲಿ ರೋಹನ್‌ ಬೋಪಣ್ಣ ಹಾಗೂ ದಿವಿಜ್‌ ಶರಣ್‌ ತಮ್ಮ ತಮ್ಮ ವಿದೇಶಿ ಜೊತೆಗಾರರೊಂದಿಗೆ ಆಡಲಿದ್ದಾರೆ. ಮಹಿಳಾ ಡಬಲ್ಸ್‌ನಲ್ಲಿ ಕಣಕ್ಕಿಳಿಯುವ ಅವಕಾಶವನ್ನು ಅಂಕಿತಾ ರೈನಾ ಗಳಿಸಿದ್ದಾರೆ. ಪುರುಷರ ಸಿಂಗಲ್ಸ್‌ನಲ್ಲಿ ಜೋಕೋವಿಚ್‌, ಮಹಿಳಾ ಸಿಂಗಲ್ಸ್‌ನಲ್ಲಿ ಅಮೆರಿಕದ ಸೋಫಿಯಾ ಕೆನಿನ್‌ ಹಾಲಿ ಚಾಂಪಿಯನ್‌ಗಳಾಗಿದ್ದಾರೆ.