ಆಸ್ಟ್ರೇಲಿಯಾ ಓಪನ್‌ ಗ್ರ್ಯಾನ್‌ಸ್ಲಾಂ ಟೆನಿಸ್‌ ಟೂರ್ನಿ ಈ ಮೊದಲು ನಿಗದಿಯಾದಂತೆ ಫೆಬ್ರವರಿ 08ರಂದೇ ನಡೆಯಲಿದೆ ಎಂದು ಟೂರ್ನಿಯ ನಿರ್ದೇಶಕ ಕ್ರೇಗ್‌ ಟಿಲೇ ತಿಳಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

ಮೆಲ್ಬರ್ನ್(ಫೆ.05)‌: ಕೊರೋನಾ ಸೋಂಕಿನ ಭೀತಿ ಇದ್ದರೂ ಈ ಮೊದಲು ನಿಗದಿಪಡಿಸಿರುವಂತೆ ಫೆ.8ರಿಂದಲೇ ಆಸ್ಪ್ರೇಲಿಯನ್‌ ಓಪನ್‌ ಟೆನಿಸ್‌ ಗ್ರ್ಯಾನ್‌ ಸ್ಲಾಂ ನಡೆಸುವುದಾಗಿ ಟೂರ್ನಿಯ ನಿರ್ದೇಶಕ ಕ್ರೇಗ್‌ ಟಿಲೇ ತಿಳಿಸಿದ್ದಾರೆ. 

ಆಟಗಾರರು ಕ್ವಾರಂಟೈನ್‌ನಲ್ಲಿದ್ದ ಹೋಟೆಲ್‌ನ ಸಿಬ್ಬಂದಿಯೊಬ್ಬರಲ್ಲಿ ಬುಧವಾರವಷ್ಟೇ ಸೋಂಕು ಪತ್ತೆಯಾಗಿತ್ತು. ಹೀಗಾಗಿ ಗುರುವಾರ ಆಟಗಾರರ ಅಭ್ಯಾಸವನ್ನು ರದ್ದುಗೊಳಿಸಲಾಗಿತ್ತು. ಈ ಘಟನೆ ಆಟಗಾರರಲ್ಲಿ ಭೀತಿ ಮೂಡಿಸಿದ್ದರೂ ಟೂರ್ನಿ ಮುಂದೂಡುವ ಇಲ್ಲವೇ ರದ್ದುಗೊಳಿಸುವ ಪ್ರಶ್ನೆಯೇ ಇಲ್ಲ ಎಂದು ಕ್ರೇಗ್‌ ಸ್ಪಷ್ಟಪಡಿಸಿದ್ದಾರೆ.

ಆಸ್ಪ್ರೇಲಿಯನ್‌ ಓಪನ್‌: ಸ್ಪೇನ್‌ ಆಟಗಾರ್ತಿ ಪೌಲಾ ಬಡೋಸಾಗೆ ವೈರಸ್‌!

ಎರಡು ವಾರಗಳ ಕಾಲ ನಡೆಯುವ ಟೆನಿಸ್ ಟೂರ್ನಮೆಂಟ್‌ನಲ್ಲಿ ಸುಮಾರು 3,90,000 ಪ್ರೇಕ್ಷಕರು ಟೆನಿಸ್‌ ಕೋರ್ಟ್‌ಗೆ ಆಗಮಿಸುವ ನಿರೀಕ್ಷೆಯನ್ನು ಆಸ್ಟ್ರೇಲಿಯನ್ ಓಪನ್ ಟೆನಿಸ್‌ ಟೂರ್ನಿಯ ಆಯೋಜಕರು ಹೊಂದಿದ್ದಾರೆ. ಪ್ರತಿದಿನ 25,000 ದಿಂದ 30 ಸಾವಿರ ಪ್ರೇಕ್ಷಕರಿಗೆ ಪಂದ್ಯ ವೀಕ್ಷಣೆಗೆ ಅವಕಾಶ ಮಾಡಿಕೊಡುವುದಾಗಿ ಆಯೋಜಕರು ತಿಳಿಸಿದ್ದಾರೆ.