ಮೆಲ್ಬರ್ನ್‌(ಫೆ.16): ಸ್ಪೇನ್‌ನ ರಾಫೆಲ್‌ ನಡಾಲ್‌ ದಾಖಲೆಯ 21ನೇ ಗ್ರ್ಯಾನ್‌ ಸ್ಲಾಂ ಪ್ರಶಸ್ತಿ ಗೆಲ್ಲಲು ಇನ್ನು ಕೇವಲ 3 ಪಂದ್ಯಗಳಲ್ಲಿ ಗೆಲ್ಲಬೇಕಿದೆ. ಆಸ್ಪ್ರೇಲಿಯನ್‌ ಓಪನ್‌ ಗ್ರ್ಯಾನ್‌ ಸ್ಲಾಂನ ಕ್ವಾರ್ಟರ್‌ ಫೈನಲ್‌ಗೆ ನಡಾಲ್‌ ಪ್ರವೇಶಿಸಿದ್ದು, ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ.

ಸೋಮವಾರ ನಡೆದ 4ನೇ ಸುತ್ತಿನ ಪಂದ್ಯದಲ್ಲಿ ನಡಾಲ್‌, ಇಟಲಿಯ ಫ್ಯಾಬಿಯೋ ಫೋಗ್ನಿನಿ ವಿರುದ್ಧ 6-3, 6-4, 6-2 ನೇರ ಸೆಟ್‌ಗಳಲ್ಲಿ ಸುಲಭವಾಗಿ ಗೆಲುವು ಸಾಧಿಸಿದರು. ಅಂತಿಮ 8ರ ಸುತ್ತಿನಲ್ಲಿ ನಡಾಲ್‌ಗೆ ಗ್ರೀಸ್‌ನ ಸ್ಟೆಫಾನೋಸ್‌ ಟಿಟ್ಸಿಪಾಸ್‌ ಎದುರಾಗಲಿದ್ದಾರೆ. 43ನೇ ಬಾರಿಗೆ ನಡಾಲ್‌ ಗ್ರ್ಯಾನ್‌ ಸ್ಲಾಂ ಕ್ವಾರ್ಟರ್‌ಗೇರಿದ ಹಿರಿಮೆಗೆ ಪಾತ್ರರಾಗಿದ್ದಾರೆ.

ಆಸ್ಪ್ರೇಲಿಯನ್‌ ಓಪನ್‌: ಕ್ವಾರ್ಟರ್‌ಗೆ ಜೋಕೋ, ಸೆರೆನಾ

ಉಳಿದ 3 ಕ್ವಾರ್ಟರ್‌ಗಳಲ್ಲಿ ಜೋಕೋವಿಚ್‌ ಹಾಗೂ ಅಲೆಕ್ಸಾಂಡರ್‌ ಜ್ವೆರೆವ್‌, ಗ್ರಿಗರ್‌ ಡಿಮಿಟ್ರೊವ್‌ ಹಾಗೂ ಕರಾಟ್ಸೆವ್‌, ರುಬ್ಲೆವ್‌ ಹಾಗೂ ಮೆಡ್ವೆಡೆವ್‌ ಸೆಣಸಲಿದ್ದಾರೆ. ಇದೇ ವೇಳೆ ಮಹಿಳಾ ಸಿಂಗಲ್ಸ್‌ನ 4ನೇ ಸುತ್ತಿನ ಪಂದ್ಯದಲ್ಲಿ ಅಗ್ರ ಶ್ರೇಯಾಂಕಿತೆ ಆಸ್ಪ್ರೇಲಿಯಾದ ಆಶ್ಲೆ ಬಾರ್ಟಿ ಅಮೆರಿಕದ ಶೆಲ್ಬಿ ರೋಜ​ರ್ಸ್‌ ವಿರುದ್ಧ 6-3, 6-4 ಸೆಟ್‌ಗಳಲ್ಲಿ ಸುಲಭವಾಗಿ ಗೆದ್ದು ಕ್ವಾರ್ಟರ್‌ ಫೈನಲ್‌ಗೇರಿದರು. ಅಂತಿಮ 8ರ ಸುತ್ತಿನಲ್ಲಿ ಬಾರ್ಟಿಗೆ ಚೆಕ್‌ ಗಣರಾಜ್ಯದ ಕ್ಯಾರೋಲಿನಾ ಮುಚೋವಾ ಎದುರಾಗಲಿದ್ದಾರೆ. ಉಳಿದ 3 ಕ್ವಾರ್ಟರ್‌ಗಳಲ್ಲಿ ಸೆರೆನಾ ವಿಲಿಯಮ್ಸ್‌ ಹಾಗೂ ಸಿಮೋನಾ ಹಾಲೆಪ್‌, ಒಸಾಕ ಹಾಗೂ ಶೀ ಸು ವೀ, ಜೆನಿಫರ್‌ ಬ್ರಾಡಿ ಹಾಗೂ ಜೆಸಿಕಾ ಪೆಗುಲಾ ಮುಖಾಮುಖಿಯಾಗಲಿದ್ದಾರೆ.