ಮೆಲ್ಬರ್ನ್(ಫೆ.13)‌: ಹಾಲಿ ಚಾಂಪಿಯನ್‌ ನೋವಾಕ್‌ ಜೋಕೋವಿಚ್‌ ಆಸ್ಪ್ರೇಲಿಯನ್‌ ಓಪನ್‌ 4ನೇ ಸುತ್ತಿಗೆ ಪ್ರವೇಶಿಸಿದ್ದಾರೆ. ಶುಕ್ರವಾರ ನಡೆದ 3ನೇ ಸುತ್ತಿನ ಪಂದ್ಯದಲ್ಲಿ ಜೋಕೋವಿಚ್‌ ಪ್ರಯಾಸದ ಗೆಲುವು ಸಾಧಿಸಿದರು. ಇದೇ ವೇಳೆ ಪುರುಷರ ಸಿಂಗಲ್ಸ್‌ನಲ್ಲಿ ಡೊಮಿನಿಕ್‌ ಥೀಮ್‌, ಅಲೆಕ್ಸಾಂಡರ್‌ ಜ್ವೆರೆವ್‌, ಮಹಿಳಾ ಸಿಂಗಲ್ಸ್‌ನಲ್ಲಿ ಸೆರೆನಾ ವಿಲಿಯಮ್ಸ್‌, ಸಿಮೋನಾ ಹಾಲೆಪ್‌, ನವೊಮಿ ಒಸಾಕ 4ನೇ ಸುತ್ತಿಗೇರಿದ್ದಾರೆ.

ಅಮೆರಿಕದ ಟೇಲರ್‌ ಫ್ರಿಟ್ಜ್ ವಿರುದ್ಧ ನಡೆದ ಪಂದ್ಯದಲ್ಲಿ ಜೋಕೋವಿಚ್‌ 7-6, 6-4, 3-6, 4-6, 6-2 ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. ಮೊದಲೆರಡು ಸೆಟ್‌ ಜಯಿಸಿದ್ದ ಜೋಕೋವಿಚ್‌, 3 ಹಾಗೂ 4ನೇ ಸೆಟ್‌ನಲ್ಲಿ ಸೋಲುಂಡು ಹೊರಬೀಳುವ ಆತಂಕಕ್ಕೀಡಾದರು. ಆದರೆ 5ನೇ ಸೆಟ್‌ನಲ್ಲಿ ತಮ್ಮ ಸಾಮರ್ಥ್ಯಕ್ಕೆ ತಕ್ಕ ಆಟವಾಡಿದ ಜೋಕೋವಿಚ್‌ 6-2 ಗೇಮ್‌ಗಳಲ್ಲಿ ಗೆದ್ದು, ಮುನ್ನಡೆದರು.

ಮಹಿಳಾ ಸಿಂಗಲ್ಸ್‌ 3ನೇ ಸುತ್ತಿನ ಪಂದ್ಯದಲ್ಲಿ ತಮಗಿಂತ 20 ವರ್ಷ ಚಿಕ್ಕವರಾದ ರಷ್ಯಾದ ಅನಸ್ತಾಸಿಯಾ ಪೊಟಪೊವಾ ವಿರುದ್ಧ ಸೆರೆನಾ 7-6, 6-2 ಸೆಟ್‌ಗಳಲ್ಲಿ ಗೆದ್ದರು. ರಷ್ಯಾದ ಕುದೆರ್ಮೆಟೊವಾ ವಿರುದ್ಧ ಹಾಲೆಪ್‌ 6-1, 6-3ರಲ್ಲಿ ಜಯಿಸಿದರೆ, ಟ್ಯುನಿಸಿಯಾದ ಒನ್ಸ್‌ ಜಬೆರ್‌ ವಿರುದ್ಧ ಜಪಾನ್‌ನ ನವೊಮಿ ಒಸಾಕ 6-3, 6-2ರಲ್ಲಿ ಗೆದ್ದರು.

ಆಸ್ಟ್ರೇಲಿಯನ್ ಓಪನ್: ಹಾಲಿ ಚಾಂಪಿಯನ್‌ ಕೆನಿನ್‌ಗೆ ಆಫಾತ..!

ಪ್ರೇಕ್ಷಕರ ಪ್ರವೇಶ ರದ್ದು

ಮೆಲ್ಬರ್ನ್‌ನಲ್ಲಿ ಕೋವಿಡ್‌ ಪ್ರಕರಣಗಳ ದಿಢೀರ್‌ ಏರಿಕೆಯಾಗಿರುವ ಕಾರಣ ಶುಕ್ರವಾರದಿಂದ ಮತ್ತೆ 5 ದಿನಗಳ ಲಾಕ್‌ಡೌನ್‌ ಜಾರಿಗೊಳಿಸಲಾಗಿದೆ. ಈ ಕಾರಣದಿಂದಾಗಿ ಕ್ರೀಡಾಂಗಣಕ್ಕೆ ಪ್ರೇಕ್ಷಕರಿಗೆ ಪ್ರವೇಶ ನಿಷೇಧಗೊಳಿಸಲಾಗಿದೆ. ಖಾಲಿ ಕ್ರೀಡಾಂಗಣದಲ್ಲಿ ಟೂರ್ನಿ ಮುಂದುವರಿಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.