ಆಸ್ಟ್ರೇಲಿಯನ್ ಓಪನ್: ಫೆಡರರ್‌ಗೆ ನಿರಾಸೆ, ಫೈನಲ್‌ಗೆ ಜೋಕೋ ಲಗ್ಗೆ
ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ರೋಜರ್ ಫೆಡರರ್ ಅವರನ್ನು ಮಣಿಸಿದ ಸರ್ಬಿಯಾದ ನೋವಾಕ್ ಜೋಕೋವಿಚ್ ಫೈನಲ್ ಪ್ರವೇಶಿಸಿದ್ದಾರೆ. ದಿಗ್ಗಜರ ನಡುವಿನ ಕಾದಾಟ ಹೇಗಿತ್ತು ಎನ್ನುವುದರ ವಿವರಣೆ ಇಲ್ಲಿದೆ ನೋಡಿ..
ಮೆಲ್ಬರ್ನ್(ಜ.31): 2020ರ ಮೊದಲ ಗ್ರ್ಯಾಂಡ್‌ಸ್ಲಾಂ ಆಸ್ಪ್ರೇಲಿಯನ್ ಓಪನ್‌ನಲ್ಲಿ ನಿರೀಕ್ಷೆಯಂತೆ ಹಾಲಿ ಚಾಂಪಿಯನ್ ನೋವಾಕ್ ಜೋಕೋವಿಚ್ ಫೈನಲ್ ಪ್ರವೇಶಿಸಿದ್ದು, 17ನೇ ಗ್ರ್ಯಾಂಡ್‌ಸ್ಲಾಂ ಗೆಲ್ಲುವ ಹೊಸ್ತಿಲಲ್ಲಿದ್ದಾರೆ.
ಗುರುವಾರ ನಡೆದ ಪುರುಷರ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಸ್ವಿಜರ್‌ಲೆಂಡ್‌ನ ಟೆನಿಸ್ ಮಾಂತ್ರಿಕ, 20 ಗ್ರ್ಯಾಂಡ್‌ಸ್ಲಾಂಗಳ ಒಡೆಯ ರೋಜರ್ ಫೆಡರರ್ ವಿರುದ್ಧ 7-6(7/1), 6-4, 6-3 ನೇರ ಸೆಟ್‌ಗಳಲ್ಲಿ ಗೆಲುವು ಸಾಧಿಸಿ, 8ನೇ ಬಾರಿಗೆ ಫೈನಲ್ ಪ್ರವೇಶಿಸಿದರು. 7 ಬಾರಿ ಆಸ್ಪ್ರೇಲಿಯನ್ ಓಪನ್ ಗೆದ್ದಿರುವ ಜೋಕೋವಿಚ್, ದಾಖಲೆಯ 8ನೇ ಬಾರಿಗೆ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ. 26ನೇ ಬಾರಿಗೆ ಜೋಕೋವಿಚ್ ಗ್ರ್ಯಾಂಡ್‌ಸ್ಲಾಂ ಫೈನಲ್‌ಗೇರಿದ್ದು, ಈ ವರೆಗೂ ಅವರು 16 ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
ಶುಕ್ರವಾರ ನಡೆಯಲಿರುವ 2ನೇ ಸೆಮಿಫೈನಲ್‌ನಲ್ಲಿ ಆಸ್ಟ್ರಿಯಾದ ಡೊಮಿನಿಕ್ ಥೀಮ್ ಹಾಗೂ ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ಸೆಣಸಲಿದ್ದು, ಜೋಕೋವಿಚ್ ವಿರುದ್ಧ ಫೈನಲ್‌ನಲ್ಲಿ ಯಾರು ಆಡಲಿದ್ದಾರೆ ಎನ್ನುವುದು ನಿರ್ಧಾರವಾಗಲಿದೆ. ಇಬ್ಬರು ಇದೇ ಮೊದಲ ಬಾರಿಗೆ ಆಸ್ಪ್ರೇಲಿಯನ್ ಓಪನ್‌ನಲ್ಲಿ ಸೆಮಿಫೈನಲ್ ತಲುಪಿದ್ದು, ಚೊಚ್ಚಲ ಗ್ರ್ಯಾಂಡ್‌ಸ್ಲಾಂ ಪ್ರಶಸ್ತಿ ಗೆಲ್ಲುವ ಗುರಿ ಹೊಂದಿದ್ದಾರೆ. ಥೀಮ್ 2018, 2019ರ ಫ್ರೆಂಚ್ ಓಪನ್ ಗ್ರ್ಯಾಂಡ್‌ಸ್ಲಾಂನ ಫೈನಲ್‌ಗೇರಿದ್ದರು. ಆದರೆ ಪ್ರಶಸ್ತಿ ಸುತ್ತಿನಲ್ಲಿ ನಡಾಲ್ ವಿರುದ್ಧ ಸೋಲುಂಡಿದ್ದರು.
ಆಸ್ಪ್ರೇಲಿಯನ್ ಓಪನ್: ರಾಫೆಲ್ ನಡಾಲ್‌ಗೆ ಥೀಮ್ ಶಾಕ್!
ನಿವೃತ್ತಿ ಇಲ್ಲ: 38 ವರ್ಷದ ರೋಜರ್ ಫೆಡರರ್, ಗ್ರ್ಯಾಂಡ್‌ಸ್ಲಾಂ ಗೆಲ್ಲಲು ಸಾಧ್ಯವಾಗುತ್ತಿಲ್ಲವಾದರೂ ಸದ್ಯಕ್ಕೆ ನಿವೃತ್ತಿ ಘೋಷಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಫೆಡರರ್ ಇನ್ನೂ ಒಂದೆರಡು ವರ್ಷಗಳ ಕಾಲ ಟೆನಿಸ್‌ನಲ್ಲಿ ಮುಂದುವರಿಯುವುದಾಗಿ ತಿಳಿಸಿದ್ದಾರೆ.
ಬೋಪಣ್ಣ ಜೋಡಿ ಔಟ್: ಮಿಶ್ರ ಡಬಲ್ಸ್‌ನ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಭಾರತದ ರೋಹನ್ ಬೋಪಣ್ಣ ಹಾಗೂ ಉಕ್ರೇನ್‌ನ ನಾಡಿಯಾ ಕಿಚೆನೊಕ್ ಜೋಡಿ, ಕ್ರೋವೇಷಿಯಾದ ನಿಕೋಲಾ ಮೆಕ್ಟಿಕ್ ಹಾಗೂ ಚೆಕ್ ಗಣರಾಜ್ಯದ ಬಾರ್ಬೊರಾ ಕ್ರೆಜಿಕೋವಾ ವಿರುದ್ಧ 0-6, 2-6 ಸೆಟ್‌ಗಳಿಂದ ಸೋಲುಂಡು ಹೊರಬಿದ್ದಿದೆ. ಇದರೊಂದಿಗೆ ಭಾರತದ ಸವಾಲು ಅಂತ್ಯವಾಗಿದೆ.
ಮುಗುರುಜಾ vs ಕೆನಿನ್ ಫೈನಲ್!
ಮಹಿಳಾ ಸಿಂಗಲ್ಸ್‌ನಲ್ಲಿ ಅಚ್ಚರಿಯ ಫಲಿತಾಂಶ ಹೊರಬಿದ್ದಿದೆ. ವಿಶ್ವ ನಂ.1 ಆಸ್ಪ್ರೇಲಿಯಾದ ಆಶ್ಲೆ ಬಾರ್ಟಿ, 4ನೇ ಶ್ರೇಯಾಂಕಿತೆ ರೋಮೇನಿಯಾದ ಸಿಮೋನಾ ಹಾಲೆಪ್ ಸೆಮಿಫೈನಲ್‌ನಲ್ಲಿ ಸೋಲುಂಡು ಹೊರಬಿದ್ದಿದ್ದಾರೆ. ಶ್ರೇಯಾಂಕ ರಹಿತ ಆಟಗಾರ್ತಿ, ಮಾಜಿ ವಿಶ್ವ ನಂ.1 ಸ್ಪೇನ್‌ನ ಗಾರ್ಬೈನ್ ಮುಗುರುಜಾ ಹಾಗೂ 14ನೇ ಶ್ರೇಯಾಂಕಿತೆ ಅಮೆರಿಕದ ಸೋಫಿಯಾ ಕೆನಿನ್ ಫೈನಲ್ ಪ್ರವೇಶಿಸಿದ್ದಾರೆ.
ಗುರುವಾರ ನಡೆದ ಸೆಮಿಫೈನಲ್‌ನಲ್ಲಿ ಮುಗುರುಜಾ, ಹಾಲೆಪ್ ವಿರುದ್ಧ 7-6(10/8), 7-5 ನೇರ ಸೆಟ್‌ಗಳಲ್ಲಿ ಜಯಗಳಿಸಿದರೆ, ಬಾರ್ಟಿ ವಿರುದ್ಧ ಕೆನಿನ್ 7-6(8-6), 7-5 ಸೆಟ್‌ಗಳಲ್ಲಿ ಗೆದ್ದರು. ಮೊದಲ ಬಾರಿಗೆ ಆಸ್ಪ್ರೇಲಿಯನ್ ಓಪನ್ ಫೈನಲ್ ಪ್ರವೇಶಿಸಿರುವ ಮುಗುರುಜಾ ಹಾಗೂ ಕೆನಿನ್ ಶನಿವಾರ ಪ್ರಶಸ್ತಿಗಾಗಿ ಸೆಣಸಲಿದ್ದಾರೆ.