ಅರವಿಂದ್ ಕೇಜ್ರಿವಾಲ್ ಸರ್ಕಾರ 2048ರಲ್ಲಿ ಒಲಿಂಪಿಕ್ಸ್‌ ಆಯೋಜಿಸಲು ಬಿಡ್‌ ಸಲ್ಲಿಸಲು ಮುಂದಾಗಿದೆ. ಇದಕ್ಕೆ ಭಾರತೀಯ ಒಲಿಂಪಿಕ್‌ ಸಂಸ್ಥೆ (ಐಒಎ) ಅಸಮಾಧಾನ ವ್ಯಕ್ತಪಡಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ನವದೆಹಲಿ(ಮಾ.11): 2048ರ ಒಲಿಂಪಿಕ್ಸ್‌ ಆತಿಥ್ಯಕ್ಕೆ ಬಿಡ್‌ ಸಲ್ಲಿಸುವುದಾಗಿ ಮಂಗಳವಾರ ತಮ್ಮ ರಾಜ್ಯ ಬಜೆಟ್‌ ವೇಳೆ ಘೋಷಿಸಿದ್ದ ದೆಹಲಿ ಸರ್ಕಾರದ ಬಗ್ಗೆ ಭಾರತೀಯ ಒಲಿಂಪಿಕ್‌ ಸಂಸ್ಥೆ (ಐಒಎ) ಅಸಮಾಧಾನ ವ್ಯಕ್ತಪಡಿಸಿದೆ. ‘ಒಲಿಂಪಿಕ್ಸ್‌ ಆಯೋಜಿಸಲು ಆಸಕ್ತಿ ತೋರಿರುವುದು ಸ್ವಾಗತಾರ್ಹ, ಆದರೆ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಮೊದಲು ಐಒಎ ಜೊತೆ ಚರ್ಚೆ ನಡೆಸಬೇಕು’ ಎಂದು ಐಒಎ ಅಧ್ಯಕ್ಷ ನರೇಂದ್ರ ಬಾತ್ರಾ ಹೇಳಿದ್ದಾರೆ.

ಮಂಗಳವಾರ ಬಜೆಟ್‌ ಮಂಡಿಸಿದ್ದ ಕೇಜ್ರಿವಾಲ್‌, ‘2048ರ ಒಲಿಂಪಿಕ್ಸ್‌ ದೆಹಲಿಯಲ್ಲಿ ನಡೆಯಬೇಕು. ಒಲಿಂಪಿಕ್ಸ್‌ ಆತಿಥ್ಯಕ್ಕೆ ದೆಹಲಿ ಬಿಡ್‌ ಸಲ್ಲಿಸಲಿದೆ. ಕ್ರೀಡಾಕೂಟ ನಡೆಸಲು ಬೇಕಿರುವ ಎಲ್ಲಾ ಮೂಲಭೂತ ಸೌಕರ್ಯ ಹಾಗೂ ಅಗತ್ಯವಿರುವ ಎಲ್ಲಾ ವ್ಯವಸ್ಥೆಯನ್ನು ಮಾಡಲಿದ್ದೇವೆ’ ಎಂದಿದ್ದರು.

‘ಭಾರತದಲ್ಲಿ ಒಲಿಂಪಿಕ್ಸ್‌ ಆಯೋಜಿಸುವ ಗುರಿ’: ರಿಜಿಜು

ಈ ಬಗ್ಗೆ ಬುಧವಾರ ಪ್ರತಿಕ್ರಿಯಿಸಿರುವ ನರೇಂದ್ರ ಬಾತ್ರಾ, ‘ದೆಹಲಿ ಏಕಾಂಗಿಯಾಗಿ ಒಲಿಂಪಿಕ್ಸ್‌ ಆಯೋಜಿಸಲು ಸಾಧ್ಯವಿಲ್ಲ. ಒಲಿಂಪಿಕ್ಸ್‌ಗೆ ಬಿಡ್‌ ಸಲ್ಲಿಸಲು ಹಾಗೂ ಆಯೋಜಿಸಲು ಹಲವು ನಿಯಮಗಳನ್ನು ಪಾಲಿಸಬೇಕಿದೆ. ಅಲ್ಲದೇ ನನ್ನ ದೃಷ್ಟಿಯಲ್ಲಿ ಅಹಮದಾಬಾದ್‌ನ ಮೊಟೇರಾ ಕ್ರೀಡಾಂಗಣ ಒಲಿಂಪಿಕ್ಸ್‌ನ ಉದ್ಘಾಟನಾ ಹಾಗೂ ಸಮಾರೋಪ ಸಮಾರಂಭಕ್ಕೆ ಸೂಕ್ತ. ಎಲ್ಲಕ್ಕಿಂತ ಮುಖ್ಯವಾಗಿ 2048ರ ಮೊದಲೇ ಭಾರತದಲ್ಲಿ ಒಂದು ಒಲಿಂಪಿಕ್ಸ್‌ ನಡೆಯಲಿದೆ’ ಎಂದಿದ್ದಾರೆ.