ನಿಮ್ಮ ಪ್ರಚಾರಕ್ಕಾಗಿ ನಮ್ಮ ಭಾವನೆಗಳಿಗೆ ಧಕ್ಕೆ ಮಾಡಬೇಡಿ: ನೀರಜ್ ಚೋಪ್ರಾ ಮನವಿ..!
* ಪಾಕ್ ಆಟಗಾರನ ಬಳಿಯಿದ್ದ ಜಾವೆಲಿನ್ ಗೊಂದಲಗಳಿಗೆ ತೆರೆ ಎಳೆದ ನೀರಜ್ ಚೋಪ್ರಾ
* ಯಾರೂ ಬೇಕಾದರೂ ಮತ್ತೊಬ್ಬರ ಜಾವೆಲಿನ್ ಬಳಸಬಹುದು ಎಂದು ನೀರಜ್
* ನಿಮ್ಮ ಪ್ರಚಾರಕ್ಕಾಗಿ ನಮ್ಮ ಬಾಂಧವ್ಯ ಹಾಳುಮಾಡಬೇಡಿ ಎಂದು ಚಿನ್ನದ ಹುಡುಗ ಮನವಿ
ನವದೆಹಲಿ(ಆ.26): ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಜಾವೆಲಿನ್ ಥ್ರೋ ವಿಭಾಗದಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದಿರುವುದು ಎಲ್ಲರಿಗೂ ಗೊತ್ತೇ ಇದೆ. ಆದರೆ ಜಾವಲಿನ್ ಥ್ರೋ ಫೈನಲ್ ವೇಳೆ ನೀರಜ್ ಎಸೆಯಬೇಕಿದ್ದ ಜಾವೆಲಿನ್ ಪಾಕಿಸ್ತಾನದ ಅಥ್ಲೀಟ್ ಆರ್ಶದ್ ನದೀಂ ಬಳಿಯಿತ್ತು, ಅದನ್ನು ಕೇಳಿ ಪಡೆದಿದ್ದಾಗಿ ಖಾಸಗಿ ಮಾಧ್ಯಮದ ಸಂದರ್ಶನವೊಂದರಲ್ಲಿ ನೀರಜ್ ತಿಳಿಸಿದ್ದರು. ನೀರಜ್ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ಸಾಕಷ್ಟು ಸಂಚಲನ ಮೂಡಿಸಿತ್ತು. ಈ ಕುರಿತಂತೆ ಚಿನ್ನದ ಹುಡುಗ ನೀರಜ್ ಚೋಪ್ರಾ ಸ್ಪಷ್ಟನೆ ನೀಡಿದ್ದು, ನಿಮ್ಮ ಪ್ರಚಾರಕ್ಕಾಗಿ ನಮ್ಮ ಭಾವನೆಗಳಿಗೆ ಧಕ್ಕೆ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.
ಮೊದಲಿಗೆ ನನ್ನನ್ನು ಬೆಂಬಲಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ. ನೀವೆಲ್ಲರೂ ಪ್ರೋತ್ಸಾಹಿಸಿದ ರೀತಿಗೆ ಖುಷಿಯಾಗುತ್ತಿದೆ. ಅದೇ ರೀತಿ ನಾನು ಟೋಕಿಯೋ ಒಲಿಂಪಿಕ್ಸ್ ಜಾವಲಿನ್ ಥ್ರೋ ಫೈನಲ್‌ನಲ್ಲಿ ಪಾಕಿಸ್ತಾನದ ಆರ್ಶದ್ ನದೀಂ ಅವರ ಬಳಿಯಿದ್ದ ಜಾವೆಲಿನ್ ಪಡೆದು ಎಸೆದೆ. ಇದೊಂದು ಅತ್ಯಂತ ಸರಳ ಹಾಗೂ ಸಹಜ ಪ್ರಕ್ರಿಯೆ. ಜಾವಲಿನ್ ಪಟು ತಮ್ಮದೇ ಆದ ಜಾವಲಿನ್ ಹೊಂದಿರುತ್ತಾರೆ. ಅದನ್ನು ಬೇರೆಯವರು ಸಹ ಬಳಸುತ್ತಾರೆ. ಅದೇ ರೀತಿ ನನ್ನ ಜಾವೆಲಿನ್ ಹಿಡಿದುಕೊಂಡು ಆರ್ಶದ್ ನದೀಂ ಅಭ್ಯಾಸ ನಡೆಸುತ್ತಿದ್ದರು. ಅದರಲ್ಲಿ ಯಾವುದೇ ತಪ್ಪು ಇಲ್ಲ. ಈಗ ನನ್ನ ಸ್ಪರ್ಧೆಯಿದೆ ಎಂದು ಅವರ ಬಳಿಯಿದ್ದ ನನ್ನ ಜಾವೆಲಿನ್ ಪಡೆದುಕೊಂಡು ನನ್ನ ಸ್ಪರ್ಧೆ ಪೂರ್ತಿಗೊಳಿಸಿದೆ. ನನ್ನ ಹೇಳಿಕೆಯನ್ನು ವಿಭಿನ್ನವಾಗಿ ಅರ್ಥೈಸಿಕೊಂಡು, ದೊಡ್ಡ ಸುದ್ದಿ ಮಾಡುವ ಅಗತ್ಯವಿಲ್ಲ. ಕ್ರೀಡೆ ಎಲ್ಲರನ್ನೂ ಒಟ್ಟಾಗಿ ಸಾಗುವುದನ್ನು ಕಲಿಸುತ್ತದೆ. ನಾವೆಲ್ಲ ಜಾವೆಲಿನ್ ಥ್ರೋ ಪಟುಗಳು ಪ್ರೀತಿಯಿಂದ ಇರುತ್ತೇವೆ. ನಿಮ್ಮ ಪ್ರಚಾರಕ್ಕಾಗಿ ನಮ್ಮ ಭಾವನೆಗಳಿಗೆ ಧಕ್ಕೆಯಾಗುವಂತೆ ಈ ವಿಚಾರವನ್ನು ಬಿಂಬಿಸಬೇಡಿ ಎಂದು ಎಲ್ಲರಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಎಂದು ನೀರಜ್ ಚೋಪ್ರಾ ಟ್ವೀಟ್ ಮೂಲಕ ವಿಡಿಯೋ ಸಂದೇಶ ರವಾನಿಸಿದ್ದಾರೆ.
ಫೈನಲ್‌ನಲ್ಲಿ ನನ್ನ ಜಾವೆಲಿನ್ ಪಾಕ್ ಅಥ್ಲೀಟ್ ಬಳಿಯಿತ್ತು: ನೀರಜ್ ಚೋಪ್ರಾ
ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ, ನಾನು ಜಾವೆಲಿನ್‌ಗಾಗಿ ಹುಡುಕಾಡುತ್ತಿದ್ದಾಗ ಅದು ನದೀಂ ಬಳಿಯಿತ್ತು. ಭಾಯ್ ಅದು ನನ್ನದು ಕೊಡಿ ಎಂದು ಕೇಳಿ ಪಡೆದು ಮೊದಲ ಯತ್ನವನ್ನು ಪೂರ್ಣಗೊಳಿಸಿದೆ ಎಂದಿದ್ದರು. ಇದು ಸಾಕಷ್ಟು ಸಂಚಲನ ಮೂಡಿಸಿತ್ತು. ನೀರಜ್ ಚೋಪ್ರಾ ಮೊದಲ ಪ್ರಯತ್ನದಲ್ಲಿ 87.03 ಮೀಟರ್ ದೂರ ಎಸೆದಿದ್ದರು. ಇನ್ನು ಎರಡನೇ ಪ್ರಯತ್ನದಲ್ಲೇ 87.58 ಮೀಟರ್ ದೂರ ಎಸೆಯುವ ಮೂಲಕ ನೀರಜ್ ಚೋಪ್ರಾ ಚಿನ್ನದ ಪದಕ ಖಚಿತಪಡಿಸಿಕೊಂಡಿದ್ದರು.